ವಿವಿ ಸಾಗರ ನಾಲಾ ಜಾಲ ಆಧುನೀಕರಣಕ್ಕೆ ಅಂತಿಮ ಸ್ಪರ್ಶ

KannadaprabhaNewsNetwork |  
Published : Apr 24, 2025, 12:00 AM IST
ಚಿತ್ರದುರ್ಗ ಮೂರನೇ ಪುಟದಲೀಡ್      | Kannada Prabha

ಸಾರಾಂಶ

Final touch for modernization of VV Sagar Nala network

-ಸರ್ಕಾರದ ಗ್ಯಾರಂಟಿಯಷ್ಟೇ ಬಾಕಿ, ನೆರವು ನೀಡಲು ಎಡಿಬಿಐ ಒಪ್ಪಿಗೆ । ತಾಂತ್ರಿಕ ಸಲಹೆಗಾರ ಜಯಪ್ರಕಾಶ್ ಕಚೇರಿಯಲ್ಲಿ ಸಭೆ

-----

ಚಿಕ್ಕಪ್ಪನಹಳ್ಳಿ ಷಣ್ಮುಖ

ಕನ್ನಡಪ್ರಭವಾರ್ತೆ ಚಿತ್ರದುರ್ಗ

ವಾಣಿ ವಿಲಾಸ ಸಾಗರ ಜಲಾಶಯದ ಅಚ್ಚುಕಟ್ಟುದಾರರಿಗೆ ಮುಂಗಾರು ಹಾಗೂ ಹಿಂಗಾರು ಸೇರಿದಂತೆ ಎರಡು ಬೆಳೆಗಳಿಗೆ ನೀರು ಪೂರೈಕೆ ಮಾಡುವ ಸಂಬಂಧ ರೂಪಿಸಲಾದ 1274 ಕೋಟಿ ರು. ವೆಚ್ಚದ ನಾಲಾ, ಜಾಲ ಆಧುನೀಕರಣ ಯೋಜನೆ ಅಂತಿಮ ಘಟ್ಟ ತಲುಪಿದೆ. ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರ ತಾಂತ್ರಿಕ ಸಲಹೆಗಾರ ಜಯಪ್ರಕಾಶ್ ಅವರ ಕಚೇರಿಯಲ್ಲಿ ಮಂಗಳವಾರ ನಡೆದ ಏಷಿಯನ್ ಡೆವಲಪ್ ಮೆಂಟ್ ಬ್ಯಾಂಕ್ ನಿಯೋಗದ ಸಭೆಯಲ್ಲಿ ಗಂಭೀರ ಚರ್ಚೆ ನಡೆದು ಅಂತಿಮವಾಗಿ ರಾಜ್ಯ ಸರ್ಕಾರದ ಆರ್ಥಿಕ ಇಲಾಖೆ ಒಪ್ಪಿಗೆಗೆ ಪಡೆಯುವ ತೀರ್ಮಾನಕ್ಕೆ ಬರಲಾಯಿತು. ಆಧುನೀಕರಣ ಯೋಜನೆಗೆ ಸಾಲ ಪಡೆಯಲು ರಾಜ್ಯ ಸರ್ಕಾರ ಗ್ಯಾರಂಟಿ ಕೊಟ್ಟಲ್ಲಿ ಇನ್ನೆರೆಡು ವರ್ಷದಲ್ಲಿ ನಾಲಾ ಜಾಲಾ ಆಧುನೀಕರಣ ಯೋಜನೆ ಪೂರ್ಣಗೊಳ್ಳಲಿದೆ.

ಏಷ್ಯನ್ ಡೆವಲಪ್ ಮೆಂಟ್ ಬ್ಯಾಂಕ್ ನ ಹಿರಿಯ ಜಲ ಸಂಪನ್ಮೂಲ ತಜ್ಞ ಅಲೆಕ್ಸಿಯಾ ಮೈಕೆಲ್ಸ್, ಜಲ ಸಂಪನ್ಮೂಲ ತಜ್ಞ ವಿಕಾಸ್ ಗೋಯೆಲ್, ದೇಶೀಯ ಉಪ ನಿರ್ದೇಶಕ ರಾಘವೇಂದ್ರ ನಡುವಿನಮನಿ ಅವರನ್ನೊಳಗೊಂಡ ತಂಡ ಜಯಪ್ರಕಾಶ್ ಜೊತೆ ಚರ್ಚಿಸಿತು. ವಿಶ್ವೇಶ್ವರಯ್ಯ ನೀರಾವರಿ ನಿಮಗದ ವ್ಯವಸ್ಥಾಪಕ ನಿರ್ದೇಶಕ ಸಣ್ಣ ಚಿತ್ತಯ್ಯ, ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನಿಯರ್ ಎಫ್.ಹೆಚ್.ಲಮಾಣಿ, ಕಾರ್ಯಪಾಲಕ ಇಂಜಿನಿಯರ್ ಚಂದ್ರಪ್ಪ ಸೇರಿದಂತೆ ಹಲವರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಏಷ್ಯನ್ ಡೆವಲಪ್ ಮೆಂಟ್ ಬ್ಯಾಂಕ್ ನ ಹಿರಿಯ ಜಲ ಸಂಪನ್ಮೂಲ ತಜ್ಞ ಅಲೆಕ್ಸಿಯಾ ಮೈಕೆಲ್ಸ್, ಈಗಾಗಲೇ ವಿವಿ ಸಾಗರ ಅಚ್ಚುಕಟ್ಟು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ನೀರಿನ ಸದ್ಬಳಕೆ ವಿಚಾರದಲ್ಲಿ ಪೂರ್ಣ ಪ್ರಮಾಣದ ಸಾಧು ಯೋಜನೆ ಇದಾಗಿದ್ದು ಎಡಿಬಿ ನೆರವು ನೀಡಲು ಆಕ್ಷೇಪಣೆ ಏನಿಲ್ಲ. ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಗ್ಯಾರಂಟಿ ಕೊಡಿಸಬೇಕಷ್ಟೇ ಎಂದರು.

ವಿವಿ ಸಾಗರ ನಾಲಾ ಜಾಲಾ ಆಧುನೀಕರಣ ಸಂಬಂಧ ಹಲವಾರು ಸಭೆಗಳನ್ನು ನಡೆಸಿ 1274 ಕೋಟಿ ರು. ವೆಚ್ಚದ ಯೋಜನೆ ರೂಪಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಯೋಜನೆ ಜಾರಿಗೆ ಉತ್ಸುಕರಾಗಿದ್ದಾರೆ. ವಿವಿ ಸಾಗರ ಜಲಾಶಯ ಮೂರನೇ ಬಾರಿಗೆ ಕೋಡಿ ಬಿದ್ದಾಗ ಬಾಗಿನ ಬಿಡಲು ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ 1274 ಕೋಟಿ ರು. ವೆಚ್ಚದ ಆಧುನೀಕರಣ ಯೋಜನೆ ಕೈಗೆತ್ತಿಕೊಂಡು ಅಚ್ಚುಕಟ್ಟುದಾರ ಹಿತ ಕಾಯುವುದಾಗಿ ಭರವಸೆ ನೀಡಿದ್ದಾರೆ. ಹಾಗಾಗಿ, ಅವರ ಗಮನಕ್ಕೆ ತಂದು ಒಪ್ಪಿಗೆ ಕೊಡಿಸುವುದಾಗಿ ತಾಂತ್ರಿಕ ಸಲಹೆಗಾರ ಜಯಪ್ರಕಾಶ್ ಹೇಳಿದರು...

...ಬಾಕ್ಸ್‌...

ಏನಿದು ನಾಲಾ ಜಾಲಾ ಆಧುನೀಕರಣ

ವಿವಿ ಸಾಗರ ಜಲಾಶಯಕ್ಕೆ 1909 ರಿಂದ 2022 ರವರೆಗೆ ಬಿದ್ದಮಳೆ ದಾಖಲೆ ಹಾಗೂ ಹರಿದು ಬಂದ ನೀರಿನ ಪ್ರಮಾಣ ವಾರ್ಷಿಕವಾಗಿ ಕೇವಲ 2.748 ಟಿಎಂಸಿ ಮಾತ್ರ ಲಭ್ಯವಾಗಿದೆ. ವಿವಿ ಸಾಗರಕ್ಕೆ ಟ್ರಿಬ್ಯುನಲ್ ನಲ್ಲಿ (ಪರಿಷ್ಕೃತ ಮಾಸ್ಟರ್ ಪ್ಲಾನ್ -2002) 5.25 ಟಿಎಂಸಿ ನೀರು ಹಂಚಿಕೆಯಾಗಿದ್ದರೂ ಕೊರತೆ ಕಾರಣಕ್ಕೆ ಭದ್ರಾ ಮೇಲ್ದಂಡೆ ಯೋಜನೆಯಡಿ ಎರಡು ಟಿಎಂಸಿ ನೀರು ಅಲೋಕೇಷನ್ ಮಾಡಲಾಗಿದೆ. ಎರಡು ಟಿಎಂಸಿ ನೀಡಿದರೂ ಸಂಗ್ರಹದ ಪ್ರಮಾಣದ ಗುರಿ 5.25 ಮುಟ್ಟುವುದಿಲ್ಲ. ಅಚ್ಚುಕಟ್ಟು ರೈತರ ಹಿತ ಕಾಯಲು ನಾಲಾಜಾಲಗಳ ಆಧುನೀಕರಣ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗಿದೆ.

ವಿವಿ ಸಾಗರ ಜಲಾಶಯದ ಹಾಲಿ ಪ್ರಮುಖ ಕಾಲುವೆಗಳು ಶಿಥಿಲಾವಸ್ಥೆಯಲ್ಲಿದ್ದು ಎಲ್ಲ ಕಾಲುವೆಗಳ ಕಾಂಕ್ರಿಟ್ ಮೂಲಕ ಲೈನಿಂಗ್ ಮಾಡಿ ಸೋರುವಿಕೆ ತಡೆಯಲಾಗುತ್ತದೆ. ಕಾಲುವೆ ವ್ಯವಸ್ಥೆ ಮತ್ತು ರಚನೆಗಳಲ್ಲಿ ವಿನ್ಯಾಸ ದೋಷಗಳಿದ್ದರೆ ಸರಿಪಡಿಸಲಾಗುತ್ತದೆ. ಅಚ್ಚುಕಟ್ಟುದಾರ ರೈತರಿಗೆ ಡ್ರಿಪ್ ಮೂಲಕ ನೀರು ಕೊಡುವುದರಿಂದ ನೀರಿನ ಒತ್ತಡ ಕಾಯ್ದುಕೊಳ್ಳಲು ಪ್ರತಿ 500 ಹೆಕ್ಟೇರ್ ಒಂದರಂತೆ ಪಂಪ್ ಹೌಸ್ ನಿರ್ಮಿಸಿ ಕಾಲುವೆಯಿಂದ ನೀರನ್ನು ಮೇಲೆತ್ತಲಾಗುತ್ತದೆ. ಈ ಸೂಕ್ಷ್ಮ ನೀರಾವರಿ ಪದ್ಧತಿಯಿಂದ ಅಚ್ಚುಕಟ್ಟುದಾರ ರೈತರಿಗೆ ಪೂರ್ಣ ಪ್ರಮಾಣದಲ್ಲಿ ನೀರು ಲಭ್ಯವಾಗುತ್ತದೆ. ಹಿಂಗಾರಿಗೆ ಶೇ.50 ರಷ್ಟು ಹಾಗೂ ಮುಂಗಾರಿಗೆ ಶೇ.100 ರಷ್ಟು ಜಮೀನನ್ನು ನೀರಾವರಿಗೆ ಒಳಪಡಿಸುವ ಉದ್ದೇಶ ಹೊಂದಲಾಗಿದೆ. ಇದಕ್ಕೆಕ್ರಾಪ್ ಪ್ಯಾಟ್ರನ್ ಕೂಡ ನಿಗಧಿ ಮಾಡಲಾಗುತ್ತದೆ.

-------------

ಪೋಟೋ ಕ್ಯಾಪ್ಸನ್

ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರ ತಾಂತ್ರಿಕ ಸಲಹೆಗಾರ ಜಯಪ್ರಕಾಶ್ ಕಚೇರಿಯಲ್ಲಿ ಏಷಿಯನ್ ಡೆವಲಪ್ ಮೆಂಟ್ ಬ್ಯಾಂಕ್ ನಿಯೋಗದ ಸಭೆಯಲ್ಲಿ ಎಡಿಬಿ ಹಿರಿಯ ಜಲ ಸಂಪನ್ಮೂಲ ತಜ್ಞ ಅಲೆಕ್ಸಿಯಾ ಮೈಕೆಲ್ಸ್, ಜಲ ಸಂಪನ್ಮೂಲ ತಜ್ಞ ವಿಕಾಸ್ ಗೋಯೆಲ್, ದೇಶೀಯ ಉಪ ನಿರ್ದೇಶಕ ರಾಘವೇಂದ್ರ ನಡುವಿನಮನಿ ಪಾಲ್ಗೊಂಡಿದ್ದರು.

--------ಪೋಟೋ ಪೈಲ್ ನೇಮ್- 23 ಸಿಟಿಡಿ8

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''