ಕೊನೆಗೂ ಒಳತಾಂಡಾಕ್ಕೆ ಬಿಎಸ್‌ಎನ್‌ಎಲ್‌ ಟವರ್‌ ಮಂಜೂರು

KannadaprabhaNewsNetwork | Published : Apr 14, 2025 1:18 AM

ಸಾರಾಂಶ

ಮೊಬೈಲ್ ನೆಟ್‌ವರ್ಕ್‌ನಿಂದ ವಂಚಿತಗೊಂಡಿದ್ದ ತಾಲೂಕಿನ ಹಲುವಾಗಲು ಗ್ರಾಪಂ ವ್ಯಾಪ್ತಿಯ ಗಡಿಗ್ರಾಮ ಒಳತಾಂಡಾಕ್ಕೆ ಕೊನೆಗೂ ಕೇಂದ್ರ ಸರ್ಕಾರ ಬಿಎಸ್‌ಎನ್‌ಎಲ್ ಟವರ್ ಮಂಜೂರು ಮಾಡಿದೆ.

(ಕನ್ನಡಪ್ರಭ ಫಲಶೃತಿ )

ಕನ್ನಡಪ್ರಭ ವಾರ್ತೆ ಹರಪನಹಳ್ಳಿ

ಮೊಬೈಲ್ ನೆಟ್‌ವರ್ಕ್‌ನಿಂದ ವಂಚಿತಗೊಂಡಿದ್ದ ತಾಲೂಕಿನ ಹಲುವಾಗಲು ಗ್ರಾಪಂ ವ್ಯಾಪ್ತಿಯ ಗಡಿಗ್ರಾಮ ಒಳತಾಂಡಾಕ್ಕೆ ಕೊನೆಗೂ ಕೇಂದ್ರ ಸರ್ಕಾರ ಬಿಎಸ್‌ಎನ್‌ಎಲ್ ಟವರ್ ಮಂಜೂರು ಮಾಡಿದೆ.

ಕೇಂದ್ರ ಸರ್ಕಾರದ ಅಧೀನದಲ್ಲಿರುವ ದೂರಸಂಪರ್ಕ ಇಲಾಖೆಯ ವ್ಯಾಪ್ತಿಗೆ ಭಾರತ್ ಸಂಚಾರ್ ನಿಗಮದಿಂದ ಟವರ್ ಮಂಜೂರಾದ ಹಿನ್ನೆಲೆಯಲ್ಲಿ ಬಳ್ಳಾರಿ ಬಿಎಸ್‌ಎನ್‌ಎಲ್ ಕಚೇರಿಯ ಅಧಿಕಾರಿಗಳು ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ನೆಟ್‌ ವರ್ಕ್ ಸಂಪರ್ಕದಿಂದ ವಂಚಿತಗೊಂಡ ಒಳತಾಂಡಾ ತಲೆ ಬರಹದಡಿ ಕಳೆದ ಫೆ. 24 ರಂದು ಕನ್ನಡಪ್ರಭ ವಿಸ್ತ್ರತ ವರದಿ ಪ್ರಕಟಿಸುವ ಮೂಲಕ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನ ಸೆಳೆದಿತ್ತು.

ತಾಂಡಾದಲ್ಲಿ ನೆಟ್‌ವರ್ಕ್ ಸಂಪರ್ಕವಿಲ್ಲದೇ ಜನರು ನಿತ್ಯ ಸಮಸ್ಯೆ ಅನುಭವಿಸುತ್ತಿದ್ದರು. ಆಸ್ಪತ್ರೆ, ಅಪಘಾತದಂತಹ ತುರ್ತು ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿರಲಿಲ. ಸರ್ಕಾರಿ ಯೋಜನೆಗಳು ಸೇರಿದಂತೆ ಆಗತ್ಯ ಸೇವೆಗಳನ್ನು ಪಡೆಯಲು ಜನ ಪರದಾಡುವಂತಾಗಿತ್ತು. ಆನ್‌ಲೈನ್ ಚಟುವಟಿಕೆಯಿಂದ ಶಾಲಾ ಮಕ್ಕಳು ದೂರ ಉಳಿದಿದ್ದರು. ಇದೀಗ ಟವರ್ ಮಂಜೂರಾದ ಹಿನ್ನೆಲೆ ಗ್ರಾಮಸ್ಥರು ಕೊನೆಗೂ ನಿಟ್ಟಸಿರು ಬಿಟ್ಟು ಸಂತಸ ವ್ಯಕ್ತಪಡಿಸಿದ್ದಾರೆ.

ಒಳತಾಂಡಾ ಗ್ರಾಮಕ್ಕೆ ಟವರ್ ಮಂಜೂರಾದ ಹಿನ್ನೆಲೆ ಬಳ್ಳಾರಿಯ ಬಿಎಸ್‌ಎನ್‌ಎಲ್ ಕಚೇರಿಯ ಅಧಿಕಾರಿಗಳು ಗ್ರಾಮಕ್ಕೆ ಬಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಟವರ್ ಸ್ಥಾಪನೆಗೆ ಖಾಸಗಿ ವ್ಯಕ್ತಿಯೊಬ್ಬರ ಜಾಗ ಗುರುತಿಸಿದ್ದಾರೆ. ಅದರ ಸ್ವಾಧೀನ ಪ್ರಕ್ರಿಯೆ ಮುಗಿದ ತಕ್ಷಣವೇ ಟವರ್ ಅಳವಡಿಸುವ ಕಾರ್ಯ ನಡೆಯಲಿದೆ ಎಂದು ಹಲುವಾಗಲು ಗ್ರಾಪಂ ಪಿಡಿಒ ಎ.ಎಂ. ಶಂಭುಲಿಂಗಯ್ಯ.

ನಮ್ಮ ಗ್ರಾಮದಲ್ಲಿನ ನೆಟ್‌ವರ್ಕ್ ಸಮಸ್ಯೆ ಕುರಿತು ಕನ್ನಡಪ್ರಭ ಪತ್ರಿಕೆಯಲ್ಲಿ ವರದಿ ಬಂದಿತ್ತು, ಇದೀಗ ನಮ್ಮ ಗ್ರಾಮಕ್ಕೆ ಟವರ್ ಮಂಜೂರಾಗಿರುವ ವಿಷಯ ತಿಳಿದು ಖುಷಿಯಾಗಿದೆ ಎನ್ನುತ್ತಾರೆ ಯುವ ಮುಖಂಡ ಮಹಾದೇವ ನಾಯ್ಕ.

Share this article