ಗರ್ಭಿಣಿಯರನ್ನು ಗೌರವದಿಂದ ನಡೆಸಿಕೊಳ್ಳಬೇಕು

KannadaprabhaNewsNetwork | Published : Apr 14, 2025 1:18 AM

ಸಾರಾಂಶ

ವಂಶೋದ್ಧಾರಕರನ್ನು ಕೊಡುವ ಮಹಿಳೆಯನ್ನು ಅತ್ತೆ ಮಾವಂದಿರು, ತಂದೆ ತಾಯಿಗಳು ಬಂಧುಗಳು ಗೌರವದಿಂದ ನಡೆಸಿಕೊಳ್ಳಬೇಕು. 11 ವರ್ಷಗಳಿಂದ ಗರ್ಭಿಣಿಯರನ್ನು ಒಂದೇ ವೇದಿಕೆಗೆ ಆಹ್ವಾನಿಸಿ ಯಾವುದೇ ಜಾತಿ ಧರ್ಮಗಳನ್ನು ಎಣಿಸದೆ ಆರೋಗ್ಯ ತಪಾಸಣೆಯೊಂದಿಗೆ ಸಾಮೂಹಿಕ ಸೀಮಂತದ ಮೂಲಕ ತಾಯಿ ಮನೆಯ ಪ್ರೀತಿಯನ್ನು ನೀಡುತ್ತಿರುವುದು ಶ್ಲಾಘನೀಯ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಹಿಂದೂ ಧಾರ್ಮಿಕ ವಿಚಾರಗಳ ಪ್ರಕಾರ ಗರ್ಭಿಣಿ ಸ್ತ್ರೀಯರು ದೇವತಾರಾಧನೆಯಲ್ಲಿ ತೊಡಗುವುದರಿಂದ ಹೆರಿಗೆಯ ಸಂದರ್ಭದಲ್ಲಿ ಸತ್ಕುಲ ಸಂಪನ್ನ ಸಂತತಿಯನ್ನು ಪಡೆಯಲು ಸಾಧ್ಯ ಎಂದು ಆದಿಚುಂಚನಗಿರಿ ಶಾಖಾಮಠದ ಕಾರ್ಯದರ್ಶಿ ಮಂಗಳನಾಥ ಸ್ವಾಮೀಜಿ ತಿಳಿಸಿದರು ನಗರ ಹೊರಹೊಲಯ ಗುರುರಾಜ ಕಲ್ಯಾಣ ಮಂಟಪದಲ್ಲಿ ಯಲುವಹಳ್ಳಿ.ಎನ್.ರಮೇಶ್ ಅಭಿಮಾನಿಗಳು ಹಾಗೂ ಸಮಾನ ಮನಸ್ಕರ ಸೇವಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಸಾಮೂಹಿಕ ಸೀಮಂತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಂಶೋದ್ಧಾರಕರನ್ನು ಕೊಡುವ ಮಹಿಳೆಯನ್ನು ಅತ್ತೆ ಮಾವಂದಿರು, ತಂದೆ ತಾಯಿಗಳು ಬಂಧುಗಳು ಗೌರವದಿಂದ ನಡೆಸಿಕೊಳ್ಳಬೇಕು ಎಂದರು. 11 ವರ್ಷಗಳಿಂದ ಕಾರ್ಯಕ್ರಮ

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 11 ವರ್ಷಗಳಿಂದ ಗರ್ಭಿಣಿಯರನ್ನು ಒಂದೇ ವೇದಿಕೆಗೆ ಆಹ್ವಾನಿಸಿ ಯಾವುದೇ ಜಾತಿ ಧರ್ಮಗಳನ್ನು ಎಣಿಸದೆ ಆರೋಗ್ಯ ತಪಾಸಣೆಯೊಂದಿಗೆ ಸಾಮೂಹಿಕ ಸೀಮಂತದ ಮೂಲಕ ತಾಯಿ ಮನೆಯ ಪ್ರೀತಿಯನ್ನು ನೀಡುತ್ತಿರುವುದು ಶ್ಲಾಘನೀಯ. ಯಲುವಳ್ಳಿ ರಮೇಶ್ ಅವರು ಹಾಕಿಕೊಟ್ಟಿರುವ ಈ ಮಾರ್ಗವನ್ನು ಅವರ ಕುಟುಂಬ ವರ್ಗ ಮುನ್ನಡೆಸಿಕೊಂಡು ಹೋಗುವಂತಾಗಲಿ ಎಂದರು.

ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ವಕ್ಕಲಿಗರ ಸಂಘದ ಗೌರವಾಧ್ಯಕ್ಷ ಯಲುವಹಳ್ಳಿ.ಎನ್. ರಮೇಶ್ ಮಾತನಾಡಿ. ಈ ವರ್ಷದಿಂದ ಒಕ್ಕಲಿಗರ ಸಂಘದ ವತಿಯಿಂದ ಬೆಂಗಳೂರಿನ ಕೆಂಪೇಗೌಡ ಆಸ್ಪತ್ರೆಯಲ್ಲಿ ಜಾತ್ಯತೀತ, ಧರ್ಮಾತೀತವಾಗಿ ಎಲ್ಲ ಗರ್ಭಿಣಿಯರಿಗೆ ಉಚಿತವಾಗಿ ಸಾಮಾನ್ಯ ಹೆರಿಗೆ, ಸಿಜೇರಿಯನ್ ಹೇರಿಗೆಗಳನ್ನು ಮಾಡಲಾಗುವುದು ಎಂದು ತಿಳಿಸಿದರು.

ಗರ್ಭಿಣಿಯರ ಆರೋಗ್ಯ ತಪಾಸಣೆ

ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮಕ್ಕೆ ಮೊದಲು ಕೆಂಪೇಗೌಡ ಆಸ್ಪತ್ರೆಯ ಪ್ರಸೂತಿ ತಜ್ಞರಾದ ಡಾ. ಸಾವಿತ್ರಿ ಮತ್ತು ತಂಡದವರಿಂದ ನಾಲ್ಕು ತಿಂಗಳ ಮೇಲ್ಪಟ್ಟ ಗರ್ಭಿಣಿ ಸ್ತ್ರೀಯರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಸಲಹೆ ಸೂಚನೆಗಳನ್ನುನೀಡಿದರು. ಗರ್ಭಿಣಿಯರು ಆಹಾರ ಸ್ವೀಕರಿಸುವ ಬಗ್ಗೆ ಮತ್ತು ವ್ಯಾಯಾಮದ ಬಗ್ಗೆ ಡಾ. ಕವಿತಾ ಹಾಗೂ ತಂಡದವರು ಸಲಹೆ ಸೂಚನೆಗಳನ್ನು ನೀಡಿದರು. ಸೀಮಂತ ಕಾರ್ಯಕ್ರಮದಲ್ಲಿ 450ಕ್ಕೂ ಹೆಚ್ಚು ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮದಲ್ಲಿ ಅರಿಶಿನ-ಕುಂಕುಮದ ಬಟ್ಟಲುಗಳು, ಸೀರೆ, ಕುಪ್ಪಸ, ಕೊಬ್ಬರಿ ಚಿಪ್ಪು ಬಳೆ, ಎಲೆ,ಅಡಿಕೆ, ತಿಂಡಿ-ನಿಸುಗಳು ಸೇರಿದಂತೆ ಎಲ್ಲಾ ವಸ್ತುಗಳಿಂದ ಮಡಿಲು ತುಂಬಿ, ಹಾಡು ಹಾಡುತ್ತಾ, ಮುತ್ತೈದೆಯರು ಆರತಿ ಬೆಳಗಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಯಲುವಹಳ್ಳಿ ಆರ್. ಜನಾರ್ಧನ್, ಹೇಮಲತಾ ಜನಾರ್ಧನ್, ಕೆ.ವಿ. ಚಂದ್ರಣ್ಣ, ರಾಮಚಂದ್ರಾರೆಡ್ಡಿ, ಜಿ.ರಮೇಶ್, ನಾರಾಯಣಮ್ಮ.ಅಣ್ಣಮ್ಮ, ಸೀತಾರಾಂ, ಮಂಗಳಾಪ್ರಕಾಶ್, ಹಮೀಮ್, ಕಳವಾರ ಶ್ರೀಧರ್, ಬೀಡಗಾನಹಳ್ಳಿ ಕೃಷ್ಣಪ್ಪ,ರಾಮಚಂದ್ರ, ವಕೀಲ ವಿನೋದ್, ಮತ್ತಿತರರು ಇದ್ದರು.

Share this article