ರಾಮನಗರ: ಬೆಳಗಾವಿಯ ರಾಣಿಚನ್ನಮ್ಮ ವಿಶ್ವವಿದ್ಯಾಲಯದ 13ನೇ ವಾರ್ಷಿಕ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರವರು ಕನಕಪುರದ ಶ್ರೀ ದೇಗುಲ ಮಠದ ಶ್ರೀ ಚನ್ನಬಸವ ಸ್ವಾಮಿಗಳಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.
ಕನಕಪುರ ಶ್ರೀ ದೇಗುಲ ಮಠಕ್ಕೆ ಸುಮಾರು 800 ವರ್ಷಗಳಿಗಿಂತಲೂ ಸುದೀರ್ಘ ಇತಿಹಾಸವಿದ್ದು, ಅಂದಿನಿಂದ ಇಂದಿನವರೆಗೂ ಸಮಾಜ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಮೊದಲಾದ ಕ್ಷೇತ್ರಗಳಲ್ಲಿ ಸಮಾನತೆಯ ತತ್ವದಡಿ ನಿಸ್ವಾರ್ಥ ಕೊಡುಗೆ ನೀಡುತ್ತಿದೆ. ಈ ಪೀಠದ ಪೂರ್ವದ ಎಲ್ಲಾ ಶಿವಯೋಗಿಗಳ ಆಶೀರ್ವಾದ ಮತ್ತು ಆಶಯದಂತೆ ಶ್ರೀ ಚನ್ನಬಸವ ಸ್ವಾಮಿ ಅವಿರತ ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
ಶ್ರೀಗಳು ಬಾಲ್ಯದಿಂದಲೂ ಉತ್ತಮ ಅಧ್ಯಯನಶೀಲರಾಗಿದ್ದು, ವ್ಯಾಸಂಗದ ಪ್ರತಿ ಹಂತದಲ್ಲೂ ಉನ್ನತ ಶ್ರೇಣಿಯನ್ನು ಗಳಿಸಿಕೊಂಡವರು. ಸ್ನಾತಕೋತ್ತರ ಪದವಿಯಲ್ಲಿ 6 ಚಿನ್ನದ ಪದಕ ಮತ್ತು 2 ಪಾರಿತೋಷಕ ಪಡೆದು ವಿಶ್ವವಿದ್ಯಾಲಯಕ್ಕೆ ಮೊದಲಿಗರಾಗಿದ್ದಾರೆ. ಶ್ರೀಗಳಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನದ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ಕುಲಪತಿಗಳಾದ ಪ್ರೊ.ಸಿ.ಎಂ.ತ್ಯಾಗರಾಜ, ಕುಲಸಚಿವ ಸಂತೋಷ ಕಾಮಗೌಡ, ಮೌಲ್ಯಮಾಪನ ಕುಲಸಚಿವ ಪ್ರೊ.ರವೀಂದ್ರನಾಥ್ ಕದಮ್ , ಮಾರ್ಗದರ್ಶಕರಾದ ಪ್ರೊ.ಎಸ್.ಎಂ.ಗಂಗಾಧರಯ್ಯ ಉಪಸ್ಥಿತರಿದ್ದರು.