ಜಿಲ್ಲಾಧಿಕಾರಿ ವಿರುದ್ಧ ಕೆಟ್ಟ ಪದ ಬಳಕೆ ಆರೋಪ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆರಾತ್ರಿ ಸಮಯ ಮೀರಿ ಸದ್ದು ಮಾಡುತ್ತಿದ್ದ ಕ್ರಷರ್ ನಿಲ್ಲಿಸಿ ಎಂದ ಯುವಕನಿಗೆ ಕೊಲೆ ಬೆದರಿಕೆ, ಆತ್ಮಹತ್ಯೆ, ಹಲ್ಲೆ ಮಾಡಿಸುತ್ತೇನೆ ಎಂದು ಹೇಳಿಕೆ ನೀಡಿದ್ದ ಕ್ರಷರ್ ಮಾಲೀಕ ಆರ್.ಯಶವಂತಕುಮಾರ್ ವಿರುದ್ಧ ಕೊನೆಗೂ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ರಷರ್ ಮಾಲೀಕರ ವಿರುದ್ದ ಹಿರೀಕಾಟಿ ಗ್ರಾಮದ ಚಂದ್ರಶೇಖರ್ ಎಚ್.ಎ. ನೀಡಿದ ದೂರಿನ ಆಧಾರದ ಮೇಲೆ ಬೇಗೂರು ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯಡಿ (ಬಿಎನ್‌ಎಸ್) 2023 (ಯು/ಎಸ್-351,352) ಪ್ರಕರಣ ದಾಖಲಾಗಿದೆ.ಏನಿದು ಘಟನೆ?:
ಕಳೆದ ತಿಂಗಳ ನ.25 ರ ರಾತ್ರಿ 11.10 ನಿಮಿಷದ ಸಮಯದಲ್ಲಿ ಹಿರೀಕಾಟಿ ಗೇಟ್ ಬಳಿಯಿರುವ ಆರ್. ಯಶವಂತಕುಮಾರ್‌ಗೆ ಸೇರಿದ ಕ್ರಷರ್ ಕೆಲಸ ಮಾಡುತ್ತಿದ್ದಾಗ ಅದರ ಸದ್ದಿಗೆ ನಿದ್ದೆ ಬರುತ್ತಿಲ್ಲ, ಕ್ರಷರ್ ನಿಲ್ಲಿಸಿ ಎಂದು ದೂರುದಾರ ಚಂದ್ರಶೇಖರ್ ಎಚ್.ಎ. ಅವರು ಕ್ರಷರ್ ಮಾಲೀಕರಿಗೆ ಮೊಬೈಲ್ ಮೂಲಕ ಹೇಳಿದ್ದಾರೆ. ಈ ಸಮಯದಲ್ಲಿ ಕ್ರಷರ್ ಮಾಲೀಕ ಆರ್. ಯಶವಂತಕುಮಾರ್ ದೂರುದಾರ ಚಂದ್ರಶೇಖರ್ ಎಚ್.ಎ. ಅವರ ಮೇಲೆ ಬಾಯಿಗೆ ಬಂದಂತೆ ಬೈದು, ಹಲ್ಲೆ ಮಾಡಿಸುತ್ತೇನೆ, ಕ್ರಷರ್ ಸದ್ದು ಬಂದರೆ ಆತ್ಮಹತ್ಯೆ ಮಾಡಿಕೊಳ್ಳಿ ಎಂದಿದ್ದಾರೆ. ಅಲ್ಲದೆ ಜಿಲ್ಲಾಧಿಕಾರಿಗಳ ವಿರುದ್ಧವಾಗಿ ಕೆಟ್ಟ ಬದ ಬಳಕೆ ಮಾಡಿದ್ದಾರೆ ಎನ್ನಲಾಗಿದೆ.ಈ ಸಂಬಂಧ ಬೇಗೂರು ಪೊಲೀಸರಿಗೆ ಚಂದ್ರಶೇಖರ್, ಆರ್. ಯಶವಂತಕುಮಾರ್ ಜಿಲ್ಲಾಧಿಕಾರಿಗಳ ಬಗ್ಗೆ ಕೆಟ್ಟ ಪದ ಬಳಕೆ ಮಾಡಿದ್ದ ಹಾಗೂ ಹಲ್ಲೆ ನಡೆಸುವುದಾಗಿ, ಕೊಲೆ ಬೆದರಿಕೆ ಹಾಗೂ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆಡಿಯೋ ಸಮೇತ ನ.26 ರಂದು ದೂರು ನೀಡಿದ್ದರು.
ಆದರೆ ಸ್ಥಳೀಯ ಬೇಗೂರು ಪೊಲೀಸರು ಕೂಡ ಸಂಧಾನ ಮಾಡಿಕೊಳ್ಳಿ ಎಂದು ದೂರುದಾರರಿಗೆ ಹೇಳಿ, ದೂರು ದಾಖಲಿಸಲು ಸತಾಯಿಸಿದ್ದಾರೆ ಎಂದು ದೂರುದಾರ ಚಂದ್ರಶೇಖರ್ ಎಚ್.ಎ. ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ಪಿ ಡಾ.ಬಿ.ಟಿ.ಕವಿತಾ ಅವರಿಗೆ ಮೊಬೈಲ್ ಮೂಲಕ ಘಟನೆ ಬಗ್ಗೆ ತಿಳಿಸಿದ್ದಾರೆ. ನಂತರ ನ್ಯಾಯಾಲಯದ ಅನುಮತಿ ಪಡೆದು ಕ್ರಷರ್ ಮಾಲೀಕರ ವಿರುದ್ಧ ಡಿ.4ರಂದು ಕೊನೆಗೂ ದಾಖಲಾಗಿದೆ.