ಕನ್ನಡಪ್ರಭ ವಾರ್ತೆ ಸಕಲೇಶಪುರ
ದಶಕಗಳ ಕಾಲದ ತ್ಯಾಜ್ಯ ಸಮಸ್ಯೆಗೆ ಪುರಸಭೆ ಕೊನೆಗೂ ಮುಕ್ತಿ ನೀಡಿದೆ. ಒಂದು ಕಾಲದಲ್ಲಿ ಪಟ್ಟಣದ ಕೆಳಭಾಗದ ಭತ್ತದ ಗದ್ದೆಗಳಿಗೆ ನೀರಿನಾಶ್ರಯವಾಗಿದ್ದ ಕೆರೆಗೆ ಪುರಸಭೆ ತ್ಯಾಜ್ಯ ತುಂಬಿಸುವ ಮೂಲಕ ಕೆರೆಯನ್ನು ಮುಚ್ಚಿದ ನಂತರ ಅಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲಾಗಿದೆ. ಇದಾದ ನಂತರ ಪಟ್ಟಣದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಉದ್ಬವಿಸಿದ್ದು, ತ್ಯಾಜ್ಯ ಹಾಕುವುದೆಲ್ಲಿ ಎಂಬ ಪ್ರಶ್ನೆ ತಲೆ ಎತ್ತಿದ ವೇಳೆ ಪ್ರತಿ ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳು ನಿಗದಿತ ಜಾಗದಲ್ಲಿ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡುವಂತೆ ೨೦೦೨ರಲ್ಲಿ ಸರ್ಕಾರ ಆದೇಶ ಹೊರಡಿಸಿದ ನಂತರ ತಾಲೂಕಿನ ಮಳಲಿ ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿಗಾಗಿ ಸುಮಾರು ೧೩ ಎಕರೆ ಪ್ರದೇಶವನ್ನು ೨೦೦೪ರಲ್ಲಿ ಗುರುತಿಸಲಾಗಿತ್ತು. ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗಾಗಿ ೨೦೦೮ರಲ್ಲಿ ಸುಮಾರು ೮ ಕೋಟಿ ರು. ವೆಚ್ಚದಲ್ಲಿ ಕಾಮಗಾರಿಯನ್ನು ಆರಂಭಿಸಲಾಗಿತ್ತು.ವಾಸಿಸುವ ಮನೆಗಳು ಸಮೀಪದಲ್ಲಿವೆ. ತ್ಯಾಜ್ಯ ಸುರಿಯುವುದರಿಂದ ಗ್ರಾಮ ಕಲುಷಿತಗೊಳ್ಳಲಿದೆ ಎಂಬ ಕಾರಣ ನೀಡಿ ಮಳಲಿ ಗ್ರಾಮಸ್ಥರು ತ್ಯಾಜ್ಯವಿಲೇಗೆ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಅಂದಿನ ಜಿಪಂ ಸದಸ್ಯರಾಗಿದ್ದ ಬೈರಮುಡಿ ಚಂದ್ರು ಗ್ರಾಮಸ್ಥರ ವಿರೋಧದ ನಡುವೆ ಕಾಮಗಾರಿ ಮುಗಿಸಿದ್ದರು. ಕಾಮಗಾರಿ ಮುಕ್ತಾಯದ ನಂತರ ಗ್ರಾಮಸ್ಥರು ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ವಿರೋಧಿಸಿ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. ವಿಷಯ ನ್ಯಾಯಾಲಯದಲ್ಲಿ ಇರುವ ವೇಳೆ ಸುಮಾರು ೮ ಕೋಟಿ ವೆಚ್ಚದ ಕಾಮಗಾರಿಯನ್ನು ಕಿಡಿಗೇಡಿಗಳು ಸಂಪೂರ್ಣ ನಾಶಗೊಳಿಸಿದ್ದರು. ಆದರೆ, ೨೦೧೬ರಲ್ಲಿ ಇದೇ ಸ್ಥಳದಲ್ಲಿ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡುವಂತೆ ನ್ಯಾಯಾಲಯ ಸೂಚನೆ ನೀಡಿದ್ದರಿಂದ ಮತ್ತೆ ಕಾಮಗಾರಿ ನಡೆಸಲು ಪುರಸಭೆ ಸ್ವಂತ ನಿಧಿ ಸೇರಿದಂತೆ ಇತರೆ ನಿಧಿಗಳನ್ನು ಒಟ್ಟುಗೊಡಿಸಿ ೨.೫ ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಟೆಂಡರ್ ಸಹ ಕರೆಯಲಾಗಿತ್ತು. ಆದರೆ, ಟೆಂಡರ್‌ದಾರರು ಕೆಲಸ ಮಾಡದಂತೆ ಅಂದಿನ ರಾಜಕೀಯ ನಾಯಕರು ವಿರೋಧ ವ್ಯಕ್ತಪಡಿಸಿದ್ದರಿಂದ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ೨೦೨೨ರಲ್ಲಿ ಮತ್ತೆ ಕಾಮಗಾರಿಗೆ ಟೆಂಡರ್ ನಡೆದು ಕಾಮಗಾರಿಗೆ ಪ್ರಯತ್ನ ನಡೆಸಲಾಗಿತ್ತು. ಆದರೆ, ರಾಜಕೀಯ ನಾಯಕರು ಇದಕ್ಕೆ ಅವಕಾಶ ನೀಡಿರಲಿಲ್ಲ. ಆದರೆ, ರಾಜಕೀಯ ಸ್ಥಿತ್ಯಂತರವಾಗಿ ಹೊಸ ಶಾಸಕರು ಆಯ್ಕೆಯಾದ ನಂತರ ಪಟ್ಟಣದ ತ್ಯಾಜ್ಯ ಸಮಸ್ಯೆಗೆ ಮುಕ್ತಿ ನೀಡಲು ತೀರ್ಮಾನಿಸಿ ಕಾಮಗಾರಿ ಸ್ಥಳದಲ್ಲಿ ನಿಷೇಧಾಜ್ಞೆ ಹೊರಡಿಸಿ ಮೀಸಲು ಪಡೆಯನ್ನು ತಿಂಗಳು ಕಾಲ ಸ್ಥಳದಲ್ಲಿ ನಿಯೋಜನೆ ಮಾಡುವ ಮೂಲಕ ಕಾಮಗಾರಿ ನಡೆಸಲಾಗಿತ್ತು.
ಸುಮಾರು ಎರಡು ವರ್ಷಗಳ ಕಾಲ ನಡೆದ ಕಾಮಗಾರಿ ಈ ವರ್ಷದ ಮಧ್ಯಂತರದಲ್ಲಿ ಮುಕ್ತಾಯಗೊಂಡಿತ್ತು. ಆದರೆ, ಉದ್ಘಾಟನೆಗೆ ದಿನಾಂಕ ನಿಗದಿಯಾಗಿರಲಿಲ್ಲ. ಈ ಮಧ್ಯೆ ತಾತ್ಕಲಿಕವಾಗಿ ತ್ಯಾಜ್ಯ ಸುರಿಯುತ್ತಿದ್ದ ಹಳೆ ಸಂತೆ ಮೈದಾನದಲ್ಲಿ ಭಾರೀ ದುರ್ನಾತ ಬೀರುತ್ತಿದೆ ಎಂದು ಸ್ಥಳೀಯ ಸಣ್ಣ ಕೈಗಾರಿಕೆಗಳ ಮಾಲೀಕರು ತಕರಾರು ಎತ್ತಿ ತ್ಯಾಜ್ಯ ಹಾಕುವುದನ್ನು ತಡೆದಿದ್ದರು. ಇದರಿಂದಾಗಿ ವಾರಗಳ ಕಾಲ ಪಟ್ಟಣದ ಬೀದಿಗಳಲ್ಲಿ ತ್ಯಾಜ್ಯದ ರಾಶಿ ಬೆಳೆಯಲಾರಂಭಿಸಿತ್ತು. ಪುರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತ್ಯಾಜ್ಯಘಟಕ ನಿರ್ಮಾಣವಾಗಿದ್ದರೂ ತ್ಯಾಜ್ಯ ಹಾಕದಿರುವ ಬಗ್ಗೆ ಜನರು ಪ್ರಶ್ನೆ ಮಾಡಲಾರಂಭಿಸಿದ್ದರು. ಆದರೆ, ಉದ್ಘಾಟನೆಯಾಗದ ಹೊರತು ತ್ಯಾಜ್ಯ ಹಾಕಲಾಗುವುದಿಲ್ಲ ಎಂಬ ಪುರಪಿತೃಗಳು ವಾದದಿಂದಾಗಿ ತ್ಯಾಜ್ಯ ಸಮಸ್ಯೆ ಬಿಗಡಾಯಿಸಿತ್ತು. ಈ ಮಧ್ಯ ಜಿಲ್ಲಾಧಿಕಾರಿಗಳು ಘನತ್ಯಾಜ್ಯ ಘಟಕದಲ್ಲಿ ತ್ಯಾಜ್ಯವಿಲೇವಾರಿ ಮಾಡುವಂತೆ ಸೂಚನೆ ನೀಡಿದ್ದರು. ದಿನಕಳೆದಂತೆ ವಿರೋಧದ ಪ್ರಮಾಣ ಹೆಚ್ಚಿದ್ದರಿಂದ ಜನರ ಒತ್ತಡಕ್ಕೆ ಮಣಿದ ಪುರಪಿತೃಗಳು ಘನ ತ್ಯಾಜ್ಯಘಟಕದಲ್ಲಿ ಗಿಡಗಳನ್ನು ನಡೆಸುವ ಮೂಲಕ ಉದ್ಘಾಟಿಸಿ ತ್ಯಾಜ್ಯವಿಲೇವಾರಿಗೆ ಅವಕಾಶ ನೀಡಿದ್ದಾರೆ. ಪರಿಣಾಮ ಕಳೆದ ಒಂದು ವಾರದಿಂದ ಮಳಲಿ ಘನ ತ್ಯಾಜ್ಯಘಟಕದಲ್ಲಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ.ಉದ್ಘಾಟನೆಯಲ್ಲಿ ರಾಜಕೀಯ:
ಸ್ಥಳೀಯ ಪುರಸಭೆ ಜೆಡಿಎಸ್ ತೆಕ್ಕೆಯಲ್ಲಿದ್ದರೆ, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿದೆ. ತಾಲೂಕಿನಲ್ಲಿ ಬಿಜೆಪಿ ಶಾಸಕರಿದ್ದಾರೆ. ಪರಿಣಾಮ ಒಬ್ಬರಿಗೊಬ್ಬರಿಗೆ ತಾಳಮೇಳವಿಲ್ಲದಾಗಿದ್ದು, ಪುರಸಭೆ ಅವಧಿ ತಿಂಗಳು ಮಾತ್ರ ಬಾಕಿ ಇದ್ದು, ಈ ವೇಳೆ ಉದ್ಘಾಟನೆ ನಡೆದರೆ ಪುರಪಿತೃಗಳ ಹೆಸರು ನಾಮಫಲಕದಲ್ಲಿ ದಾಖಲಾಗಲಿದೆ ಎಂಬ ಕಾರಣಕ್ಕೆ ಶಾಸಕರು ಬೇಕೆಂದೇ ಪೌರಾಡಳಿತ ಸಚಿವರನ್ನು ಕರೆಸಲು ಮೀನಮೇಷ ಎಣಿಸುತ್ತಿದ್ದಾರೆ ಎಂಬ ದೂರು ಪುರಪಿತೃಗಳ ವಲಯದಿಂದ ಕೇಳಿ ಬರುತ್ತಿದೆ. ಆದರೆ, ಇಂತಹ ಸಣ್ಣ ರಾಜಕೀಯ ನಾನು ಮಾಡುವುದಿಲ್ಲ, ಉದ್ಘಾಟನೆಗೆ ಪೌರಾಡಳಿತ ಸಚಿವರೇ ದಿನಾಂಕ ನೀಡದಿದ್ದರೆ ನಾನೇನು ಮಾಡಲಿ ಎಂದು ಶಾಸಕರು ಹೇಳುತ್ತಿದ್ದರೆ ಮತ್ತೊಂದೆಡೆ ತಾಲೂಕಿನ ರಾಜಕೀಯ ಕೇಂದ್ರ ಬಿಂದುವಾಗಿರುವ ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಈ ವಿಷಯದಲ್ಲಿ ಮಗಮ್ಮಾಗಿದ್ದಾರೆ.ದೊರೆಯದ ಸ್ಪಂದನೆ:
ಸದ್ಯ ಘನತ್ಯಾಜ್ಯ ಘಟಕ ಆರಂಭವಾದ ನಂತರ ಹಸಿಕಸ ಹಾಗೂ ಒಣಕಸ ಬೇರೆ ಮಾಡಿಕೊಡುವಂತೆ ನಿತ್ಯ ಧ್ವನಿವರ್ಧಕದ ಮೂಲಕ ಪೌರಕಾರ್ಮಿಕರು ಮನವಿ ಮಾಡುತ್ತಿದ್ದಾರಾದರೂ ಜನರ ಸ್ಪಂದನೆ ಇಲ್ಲದಾಗಿದೆ. ಇತ್ತ ಘನ ತ್ಯಾಜ್ಯ ಘಟಕಕ್ಕೆ ಸಾಗಿಸಲಾಗುತ್ತಿರುವ ತ್ಯಾಜ್ಯವನ್ನು ಅದೇ ದಿನ ಬೇರ್ಪಡಿಸಿ ಗೊಬ್ಬರ ಮಾಡಲಾಗುತ್ತಿದೆ.----------
*ಕೋಟ್*ಪುರಸಭೆ ಅಧ್ಯಕ್ಷರಿಂದ ಸದ್ಯ ಘನತ್ಯಾಜ್ಯ ಘಟಕವನ್ನು ಉದ್ಘಾಟಿಸುವ ಮೂಲಕ ಕಳೆದ ಒಂದು ವಾರದಿಂದ ಘಟಕದಲ್ಲಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ ಹಾಗೂ ಜನರು ಹಸಿ ಹಾಗೂ ಒಣ ತ್ಯಾಜ್ಯವನ್ನು ಬೇರ್ಪಡಿಸಿ ಕೊಡುವಂತೆ ಮನವಿ ಮಾಡಿಕೊಳ್ಳಲಾಗುತ್ತಿದೆ.
- ಮಹೇಶ್ವರಪ್ಪ, ಮುಖ್ಯಾಧಿಕಾರಿ ಪುರಸಭೆ ಸಕಲೇಶಪುರ*ಕೋಟ್*
ಕಳೆದ ಒಂದು ದಶಕಗಳಿಂದ ಪುರಸಭೆ ದೊಡ್ಡ ಸಮಸ್ಯೆಯಾಗಿದ್ದ ತ್ಯಾಜ್ಯಕ್ಕೆ ಕೊನೆಗೂ ಮುಕ್ತಿ ದೊರಕಿರುವುದು ಸಂತಸ ತಂದಿದೆ. ಇನ್ನಾದರೂ ಪಟ್ಟಣವನ್ನು ಸ್ವಚ್ಛ ಹಾಗೂ ಸುಂದರವಾಗಿಡಲು ಪುರಸಭೆ ಪ್ರಯತ್ನಿಸಬೇಕು.- ಪ್ರಕಾಶ್ ಪುರಸಭೆ ಮಾಜಿ ಸದಸ್ಯ