ಕಮೀಷನರೇಟ್‌ ವಿಭಜನೆಗೆ ವಿತ್ತ ಇಲಾಖೆ ಅಪಸ್ವರ

KannadaprabhaNewsNetwork |  
Published : Aug 09, 2026, 02:00 AM IST
ಕಮೀಷನರೇಟ್‌  | Kannada Prabha

ಸಾರಾಂಶ

ಬೆಂಗಳೂರು ಪೊಲೀಸ್ ಕಮೀಷನರೇಟ್‌ ವಿಭಜಿಸುವ ಸರ್ಕಾರದ ಯೋಜನೆಗೆ ವಿಘ್ನ ಎದುರಾಗಿದ್ದು, ಹೊಸ ಕಮೀಷನರೇಟ್‌ಗಳ ರಚನೆಗೆ ಹಣಕಾಸು ಇಲಾಖೆ ಹಾಗೂ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರುಬೆಂಗಳೂರು ಪೊಲೀಸ್ ಕಮೀಷನರೇಟ್‌ ವಿಭಜಿಸುವ ಸರ್ಕಾರದ ಯೋಜನೆಗೆ ವಿಘ್ನ ಎದುರಾಗಿದ್ದು, ಹೊಸ ಕಮೀಷನರೇಟ್‌ಗಳ ರಚನೆಗೆ ಹಣಕಾಸು ಇಲಾಖೆ ಹಾಗೂ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಪೊಲೀಸ್ ಕಮೀಷನರೇಟ್ ವಿಭಾಗಿಸಿ ಹೊಸದಾಗಿ ಮೂರು ಅಥವಾ ಐದು ಕಮೀಷನರೇಟ್‌ ಗಳನ್ನು ಸೃಜಿಸಲು ಸಾವಿರಾರು ಕೋಟಿ ರು. ಹಣದ ಅಗತ್ಯವಿದೆ. ಪ್ರಸುತ್ತ ಆರ್ಥಿಕ ಸಂಕಷ್ಟದ ಪರಿಸ್ಥಿತಿ ಕಮೀಷನರೇಟ್‌ಗಳಿಗೆ ಹಣಕಾಸು ನೆರವು ಒದಗಿಸುವುದು ಕಷ್ಟಕರವಾಗಲಿದೆ ಎಂದು ಗೃಹ ಇಲಾಖೆಗೆ ವಿತ್ತ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.ಆರ್ಥಿಕ ಇಲಾಖೆಯ ಆಕ್ಷೇಪದ ನಡುವೆಯೂ ಕಮೀಷನರೇಟ್ ವಿಭಜನೆಗೆ ಸರ್ಕಾರದ ಮಟ್ಟದಲ್ಲಿ ಹಿರಿಯ ಕೆಲ ಐಎಎಸ್ ಅಧಿಕಾರಿಗಳು ಪ್ರಯತ್ನಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಈ ವಿಚಾರದಲ್ಲಿ ಮುಖ್ಯಮಂತ್ರಿ ಶಿವಕುಮಾರ್ ಅವರ ಮೇಲೆ ಕೆಲ ಐಎಎಸ್ ಅಧಿಕಾರಿಗಳು ಒತ್ತಡವು ಸಹ ಇದೆ ಎನ್ನಲಾಗಿದೆ. ಆದರೆ ಇಷ್ಟು ಪಟ್ಟುಹಿಡಿದು ಕಮೀಷನರೇಟ್‌ ವಿಭಜನೆಗೆ ಅಧಿಕಾರಿಗಳ ಪ್ರಯತ್ನದ ಹಿಂದಿನ ಕಾರಣಗಳ ಬಗ್ಗೆ ಗೃಹ ಇಲಾಖೆಯ ಕಾರಿಡಾರ್‌ನಲ್ಲಿ ಭಾರಿ ಚರ್ಚೆಗೆಗ್ರಾಸವಾಗಿದೆ.

ಹೊಸ ಆಯುಕ್ತರ ಘಟಕಕ್ಕೆ ₹200 ರಿಂದ 300 ಕೋಟಿ:ಪ್ರಸುತ್ತ ಕಮೀಷನರೇಟ್ ವಿಭಜನೆ ಪ್ರಸ್ತಾಪಕ್ಕೆ ಸಾವಿರಾರು ಕೋಟಿ ರು ಹಣವು ನೀರಿನಂತೆ ವೆಚ್ಚವಾಗಲಿದೆ. ಹೊಸ ಕಮೀಷನರೇಟ್‌ಗಳಲ್ಲಿ ಕಮೀಷನರ್‌, ಡಿಸಿಪಿ ಹಾಗೂ ಎಸಿಪಿ ನೂತನ ಕಚೇರಿಗಳು ಸ್ಥಾಪನೆ, ಅವುಗಳಿಗೆ ಮೂಲಭೂತ ಸೌಲಭ್ಯ ಹಾಗೂ ಅಧಿಕಾರಿ-ಸಿಬ್ಬಂದಿ ನೇಮಕ ಹೀಗೆ ಹಲವು ವೆಚ್ಚಗಳಿಗೆ ಅನುದಾನವನ್ನು ಸರ್ಕಾರ ಒದಗಿಸಬೇಕಾಗುತ್ತದೆ.

ಜಿಬಿಎ ಮಾದರಿಯಲ್ಲಿ ಐದು ಕಮೀಷನರೇಟ್‌ ಗಳ ರಚನೆಗೆ 7,600 ಕೋಟಿ ರು ಅನುದಾನಕ್ಕೆ ಸರ್ಕಾರವನ್ನು ಗೃಹ ಇಲಾಖೆ ಕೋರಿ ಪ್ರಸ್ತಾಪಿಸಿತ್ತು. ಅದೇ ರೀತಿ ಮೂರು ಕಮೀಷನರೇಟ್‌ಗಳ ಸೃಜನೆಗೆ ವಾರ್ಷಿಕ 200 ರಿಂದ 300 ಕೋಟಿ ರು ವೆಚ್ಚವಾಗಲಿದ್ದು, ಐದು ವರ್ಷದಲ್ಲಿ 1500 ಕೋಟಿ ರು ಅನುದಾನಕ್ಕೆ ಅಧಿಕಾರಿಗಳು ವಿನಂತಿಸಿದ್ದಾರೆ. ಇದು ಗ್ಯಾರಂಟಿ ಯೋಜನೆಗಳಿಂದ ಸೃಷ್ಟಿಯಾಗಿರುವ ಆರ್ಥಿಕ ಪರಿಸ್ಥಿತಿಯಲ್ಲಿ ಸರ್ಕಾರಕ್ಕೆ ಹೊರೆಯಾಗಬಹುದು. ಈ ಆರ್ಥಿಕ ವೆಚ್ಚಗಳ ಸಲುವಾಗಿಯೇ ಹೊಸ ಕಮೀಷನರೇಟ್‌ಗಳ ರಚನೆಗೆ ವಿತ್ತ ಇಲಾಖೆಯ ಅಧಿಕಾರಿಗಳು ಅಪಸ್ವರ ತೆಗೆದಿದ್ದಾರೆ ಎಂದು ಮೂಲಗಳು ಹೇಳಿವೆ.

ಸಿಎಂ ಸಭೆಯಲ್ಲೂ ವೆಚ್ಚದ ಮಾತು

ಬೆಂಗಳೂರು ಪೊಲೀಸ್ ಕಮೀಷನರೇಟ್ ವಿಭಜನೆ ಸಂಬಂಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆಯಲ್ಲಿ ಕೂಡ ಖರ್ಚು-ವೆಚ್ಚದ ಬಗ್ಗೆ ಮಾತುಕತೆ ನಡೆದಿದೆ ಎಂದು ತಿಳಿದು ಬಂದಿದೆ. ಹೊಸ ಕಮೀಷನರೇಟ್‌ಗಳಿಗೆ ಕನಿಷ್ಟ ಮೂಲತಭೂತ ಸೌಲಭ್ಯ ಒದಗಿಸಲು ಆರಂಭದಲ್ಲೇ ಕನಿಷ್ಠ 200 ಕೋಟಿ ರು ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿ ಅವರಿಗೆ ಗೃಹ ಇಲಾಖೆ ಅಧಿಕಾರಿಗಳು ವಿನಂತಿಸಿದ್ದಾರೆ. ಈ ಮಾತಿಗೆ ಮುಖ್ಯಮಂತ್ರಿ ಅ‍ವರು, ಒಂದೇ ಬಾರಿ ದೊಡ್ಡ ಮೊತ್ತದ ಹಣಕಾಸು ನೆರವು ನೀಡುವುದು ಕಷ್ಟವಾಗಬಹುದು. ಆದರೆ ಹಂತ ಹಂತವಾಗಿ ಕಲ್ಪಿಸಲಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ ವಿಶೇಷ ಅನುದಾನದ ಸಭೆಯಲ್ಲಿ ಮುಖ್ಯಮಂತ್ರಿ ಅವರಿಂದ ಖಚಿತ ಭರವಸೆ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.

ಮೂರು ಜಂಟಿ ಆಯುಕ್ತ ಸೂಕ್ತ

ಹೊಸ ಕಮೀಷನರೇಟ್ ರಚನೆ ಬದಲಿಗೆ ಪ್ರಸುತ್ತ ಆಡಳಿತ ವ್ಯವಸ್ಥೆಯನ್ನೇ ಮತ್ತಷ್ಟು ಸುಧಾರಿಸುವುದು ಸೂಕ್ತವಾಗಿದೆ ಎಂದು ಸರ್ಕಾರಕ್ಕೆ ಕೆಲ ಹಿರಿಯ ಐಪಿಎಸ್ ಅಧಿಕಾರಿಗಳು ಅಭಿಪ್ರಾಯ ತಿಳಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದಲ್ಲಿ ಹೆಚ್ಚುವರಿಯಾಗಿ ಮೂವರು ಜಂಟಿ ಆಯುಕ್ತ ಅಥವಾ ಹೆಚ್ಚುವರಿ ಆಯುಕ್ತರು ಹಾಗೂ ಡಿಸಿಪಿ ವಿಭಾಗಗಳನ್ನು ಸೃಜಿಸಿದರೆ ನಿರ್ವಹಣೆ ಸುಲಭವಾಗಲಿದೆ. ಇದರಿಂದ ಆರ್ಥಿಕ ಭಾರ ಸಹ ಸರ್ಕಾರದ ಮೇಲೆ ಬೀಳುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ ಎನ್ನಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳಲ್ಲಿನ ಹೃದಯಾಘಾತಕ್ಕೆ ರಕ್ತನಾಳ ಸವೆತ ಕಾರಣ!
ಇಂದಿನಿಂದ 3 ದಿನ ಜೆಡಿಎಸ್‌ ‘ಬಿಡದಿ ಪಾದಯಾತ್ರೆ’