ಬರ ಪರಿಹಾರ ಬಗ್ಗೆ ಕೋರ್ಟೇ ತೀರ್ಮಾನಿಸಲಿ: ನಿರ್ಮಲಾ ಸೀತಾರಾಮನ್‌

KannadaprabhaNewsNetwork |  
Published : Mar 25, 2024, 12:49 AM ISTUpdated : Mar 25, 2024, 07:33 AM IST
Nirmala Seetharaman

ಸಾರಾಂಶ

ಸತ್ಯಾಸತ್ಯತೆಯ ಅಂಕಿ-ಅಂಶಗಳನ್ನು ನಾವು ನ್ಯಾಯಾಲಯಕ್ಕೇ ಸಲ್ಲಿಸುತ್ತೇವೆ. ಕರ್ನಾಟಕದ ನಯಾಪೈಸೆ ಜಿಎಸ್‌ಟಿ ಪರಿಹಾರವನ್ನೂ ಬಾಕಿ ಉಳಿಸಿಕೊಂಡಿಲ್ಲ ಎಂದು ಸುಪ್ರೀಂ ಮೊರೆ ಹೋದ ಸಿದ್ದು ಸರ್ಕಾರಕ್ಕೆ ಸಚಿವೆ ತಿರುಗೇಟು ಕೊಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು/ಮೈಸೂರು

ಕೇಂದ್ರ ಸರ್ಕಾರ ಬರ ಪರಿಹಾರ ನೀಡುತ್ತಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ಕರ್ನಾಟಕ ಸರ್ಕಾರ ಅರ್ಜಿ ಸಲ್ಲಿಸಿದ ಕ್ರಮಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿರುಗೇಟು ನೀಡಿದ್ದಾರೆ. 

ಈ ವಿಚಾರದಲ್ಲಿ ಯಾರಿಂದ ಲೋಪವಾಗಿದೆ ಎಂದು ನ್ಯಾಯಾಲಯವೇ ತೀರ್ಮಾನಿಸಲಿ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಅನುದಾನ ಬಂದಿಲ್ಲ ಎಂದು ಕರ್ನಾಟಕ ಸರ್ಕಾರ ನ್ಯಾಯಾಲಯದ ಮೆಟ್ಟಿಲೇರಿದೆ.

 ನ್ಯಾಯಾಲಯಕ್ಕೆ ಸತ್ಯಾಸತ್ಯತೆಯ ಅಂಕಿ-ಅಂಶಗಳನ್ನು ನೀಡುವುದು ವಿತ್ತ ಸಚಿವೆಯಾಗಿ ನನ್ನ ಕರ್ತವ್ಯ. ಅದನ್ನು ನಾನು ಸಲ್ಲಿಸುತ್ತೇನೆ. ಅನುದಾನದ ವಿಚಾರದಲ್ಲಿ ಯಾರಿಂದ ಲೋಪವಾಗಿದೆ ಎಂದು ನ್ಯಾಯಾಲಯವೇ ತೀರ್ಮಾನಿಸಲಿ ತಿಳಿಸಿದ್ದಾರೆ.

ಇದೇ ವೇಳೆ, ಕರ್ನಾಟಕ ರಾಜ್ಯಕ್ಕೆ ನೀಡಬೇಕಾದ ಪ್ರತಿ ಪೈಸೆಯನ್ನು ಲೆಕ್ಕ ಹಾಕಿ ಸೂಕ್ತ ಸಮಯಕ್ಕೆ ಹಣಕಾಸು ಆಯೋಗ ನೀಡಿರುವ ವರದಿಯ ಶಿಫಾರಸಿನ ಆಧಾರದ ಮೇಲೆ ಬಿಡುಗಡೆ ಮಾಡಿದ್ದೇವೆ. 

ಯಾವುದೇ ಜಿಎಸ್‌ಟಿ ಪರಿಹಾರವನ್ನು ಬಾಕಿ ಉಳಿಸಿಕೊಂಡಿಲ್ಲ ಎಂದೂ ಹೇಳುವ ಮೂಲಕ ಕೇಂದ್ರ ಸರ್ಕಾರ ಅನುದಾನ ತಾರತಮ್ಯ ಮಾಡುತ್ತಿದೆ ಎಂಬ ಆರೋಪವನ್ನು ತಳ್ಳಿ ಹಾಕಿದ್ದಾರೆ.

ಭಾನುವಾರ ಬೆಂಗಳೂರಿನ ಆರ್‌.ವಿ.ದಂತ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ಚಿಂತಕರ ವೇದಿಕೆ ಹಾಗೂ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ಮೈಸೂರಿನ ಥಿಂಕರ್ಸ್ ಫೋರಂ ಸಂಘಟನೆ ಜತೆ ಭಾನುವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ವಿಚಾರ ತಿಳಿಸಿದರು.

ವಿಶೇಷ ಅನುದಾನದ ಉಲ್ಲೇಖವಿಲ್ಲ: ಹಣಕಾಸು ಆಯೋಗದ ಶಿಫಾರಸ್ಸಿನಲ್ಲಿ ಕರ್ನಾಟಕಕ್ಕೆ 5,495 ಕೋಟಿ ರು. ವಿಶೇಷ ಅನುದಾನ ನೀಡುವ ಬಗ್ಗೆ ಉಲ್ಲೇಖ ಇಲ್ಲ. ಆಯೋಗದ ವರದಿ ಮಾಡಿದ ಶಿಫಾರಸಿನ ಆಧಾರ ಮೇಲೆ ಕರ್ನಾಟಕಕ್ಕೆ ನೀಡಬೇಕಾಗಿದ್ದ ಪ್ರತಿ ಪೈಸೆಯನ್ನು ಲೆಕ್ಕ ಹಾಕಿ ಬಿಡುಗಡೆ ಮಾಡಲಾಗಿದೆ. 

2017ರಿಂದ 2022ರ ನಡುವಿನ ರಾಜ್ಯದ ಜಿಎಸ್‌ಟಿ ಪಾಲಿನ ಅಷ್ಟೂ ಬಾಕಿ ಹಣ ನೀಡಲಾಗಿದೆ. ಅಲ್ಲದೇ, ಈ ವರ್ಷದ ಮಾರ್ಚ್‌ವರೆಗಿನ ಯಾವುದೇ ಜಿಎಸ್‌ಟಿ ಪರಿಹಾರವನ್ನು ಬಾಕಿ ಉಳಿಸಿಕೊಂಡಿಲ್ಲ ಎಂದು ಹೇಳಿದರು.

ಆದರೂ ರಾಜ್ಯದ ಕಾಂಗ್ರೆಸ್ ಸರ್ಕಾರವು ಕೇಂದ್ರದಿಂದ ಅನುದಾನ ಬಂದಿಲ್ಲ ಎಂದು ಪ್ರತಿ ದಿನ ಆಧಾರ ರಹಿತವಾಗಿ ಆರೋಪ ಮಾಡುತ್ತಿದೆ. ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಲು ಈ ಕುರಿತ ಅಡಿಟ್‌ ಪ್ರಮಾಣ ಪತ್ರ ಸರ್ಕಾರದ ಕೈಸೇರಬೇಕು. ಆ ಪ್ರಮಾಣ ಪತ್ರ ತಲುಪಿದ ಕೂಡಲೇ ಹಣ ಬಿಡುಗಡೆಯಾಗಲಿದೆ ಎಂದು ಸ್ಪಷ್ಟನೆ ನೀಡಿದರು.

ಕರ್ನಾಟಕ ಸರ್ಕಾರ ಎನ್.ಡಿ.ಆರ್.ಎಫ್ಅನುದಾನ ಬಂದಿಲ್ಲ ಎಂದು ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ ನ್ಯಾಯಾಲಯಕ್ಕೆ ಸತ್ಯಾಸತ್ಯತೆಯ ಅಂಕಿ-ಅಂಶಗಳನ್ನು ನೀಡುವುದು ವಿತ್ತ ಸಚಿವೆಯಾಗಿ ನನ್ನ ಕರ್ತವ್ಯ, ಅದನ್ನು ನಾನು ಸಲ್ಲಿಸುತ್ತೇನೆ. 

ಅನುದಾನದ ವಿಚಾರದಲ್ಲಿ ಯಾರಿಂದ ಲೋಪವಾಗಿದೆ ಎಂದು ನ್ಯಾಯಾಲಯವೇ ತೀರ್ಮಾನಿಸಲಿ ಹೇಳಿದರು. ಜಿಎಸ್‌ಟಿ ಬೆಳವಣಿಗೆಯ ದರವು ಈ ಮೊದಲು ಶೇ.11.68ರಷ್ಟಿತ್ತು. ಈಗ ಅದು ಶೇ.15ಕ್ಕೆ ತಲುಪುತ್ತಿದೆ. ಇದನ್ನು ರಾಜ್ಯ ಸರ್ಕಾರ ಒಪ್ಪಿಕೊಳ್ಳುತ್ತಿಲ್ಲ. ಜಿಎಸ್‌ಟಿ ಉಪಯೋಗವನ್ನು ರಾಜ್ಯ ಸರ್ಕಾರಕ್ಕೆ ಒದಗಿಸಲಾಗುತ್ತಿದೆ. 

ಪ್ರಧಾನಿ ಗರೀಬ್ ಕಲ್ಯಾಣ ಯೋಜನೆಯಡಿಯಲ್ಲಿ, ದೇಶದಾದ್ಯಂತ 80 ಕೋಟಿ ಜನರು ಮತ್ತು ಬೆಂಗಳೂರು ನಗರದ 30.5 ಲಕ್ಷ ಜನರು ಪ್ರತಿ ತಿಂಗಳು ಉಚಿತ ಪಡಿತರ ಪಡೆಯುತ್ತಿದ್ದಾರೆ. ಬೆಂಗಳೂರು ನಗರದಲ್ಲಿಯೇ 14.68 ಲಕ್ಷ ಜನಧನ್ ಖಾತೆಗಳನ್ನು ತೆರೆಯಲಾಗಿದೆ ಎಂದರು.

ಬೆಂಗಳೂರು ನಗರದಲ್ಲಿ 38.25 ಲಕ್ಷ ಫಲಾನುಭವಿಗಳಿಗೆ ಮುದ್ರಾ ಯೋಜನೆಯಡಿ 30,490 ಕೋಟಿ ರು. ನೀಡಲಾಗಿದೆ. ಕರ್ನಾಟಕ ಸರ್ಕಾರ ಎಸ್‌ಟಿ, ಎಸ್‌ಸಿ ಮತ್ತು ಮಹಿಳೆಯರಿಗೆ 10 ಲಕ್ಷದಿಂದ ಒಂದು ಕೋಟಿ ರು. ಸಾಲ ನೀಡುವ ಸ್ಟ್ಯಾಂಡ್-ಅಪ್ ಇಂಡಿಯಾ ಅಡಿಯಲ್ಲಿ ಕೇಂದ್ರದಿಂದ ಅನುದಾನವನ್ನು ಪಡೆದುಕೊಂಡಿದೆ. 

ಬೆಂಗಳೂರು ನಗರದಲ್ಲಿ ಈ ಯೋಜನೆಯಡಿ 467 ಕೋಟಿ ರು. ವಿತರಿಸಲಾಗಿದೆ. ಯೋಜನೆಯಡಿ ಬೆಂಗಳೂರಿನಲ್ಲಿ 4,429 ನೋಂದಾಯಿತ ಫಲಾನುಭವಿಗಳಿದ್ದಾರೆ. 

ಬೆಂಗಳೂರು ನಗರದ 1.25 ಲಕ್ಷ ಬೀದಿಬದಿ ವ್ಯಾಪಾರಿಗಳು ಪ್ರಧಾನಮಂತ್ರಿಯವರ ಸ್ವನಿಧಿ ಯೋಜನೆ ಅಡಿಯಲ್ಲಿ ಫಲಾನುಭವಿಗಳಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಉಚಿತ ಯೋಜನೆ ಘೋಷಿಸುವ ಮುನ್ನ ಆರ್ಥಿಕ ಸ್ಥಿತಿಯ ಅರಿವಿರಲಿ: ಕೇಂದ್ರ ಸಚಿವೆ

ಉಚಿತ ಯೋಜನೆಗಳನ್ನು ಘೋಷಿಸುವ ಮುನ್ನ ಆರ್ಥಿಕ ಸ್ಥಿತಿಯ ಬಗ್ಗೆ ಸರ್ಕಾರಗಳಿಗೆ ಅರಿವಿರಬೇಕು ಎಂದು ಇದೇ ವೇಳೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟರು. ಉಚಿತ ಯೋಜನೆ ನೀಡುವುದರಲ್ಲಿ ತಪ್ಪಿಲ್ಲ. ಆದರೆ ಅದಕ್ಕೂ ಮುನ್ನ ಅದಕ್ಕೆ ಬೇಕಾದ ಬಜೆಟ್ ನಮ್ಮಲ್ಲಿ ಲಭ್ಯವಿದೆಯೇ ಎಂಬುದನ್ನು ಪರಿಶೀಲಿಸದಿರುವುದು ತಪ್ಪು. 

ರಾಜ್ಯ ಸರ್ಕಾರ ಇದ್ಯಾವುದನ್ನೂ ಪರಿಗಣಿಸದೆ ಗ್ಯಾರಂಟಿ ಘೋಷಿಸಿತು ಎಂದರು.ಈ ಮುಂಚೆ ಕರ್ನಾಟಕದ ಆರ್ಥಿಕ ಪರಿಸ್ಥಿತಿ ಸುಸ್ಥಿಯಲ್ಲಿತ್ತು ಎಂದ ಅವರು, ಇದೀಗ ಏನೂ ನೋಡದೆ ಯೋಜನೆ ಉಚಿತ ಯೋಜನೆ ಘೋಷಿಸಿ, ಈಗ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ