ಧಾರವಾಡ: ತಂದೆಯ ಮರಣದಿಂದ ಧೃತಿಗೆಡದ ಬಾಲಕಿಯೊಬ್ಬಳು ನೋವಿನ ಮಧ್ಯೆಯೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ನವಲಗುಂದ ಪಟ್ಟಣದ ಶಬಾನಾ ಅವರ ಮನೆಗೆ ಬುಧವಾರ ಜಿಲ್ಲಾಧಿಕಾರಿ ದಿವ್ಯಪ್ರಭು ಭೇಟಿ ನೀಡಿ, ವಿದ್ಯಾರ್ಥಿನಿಗೆ ಧೈರ್ಯ ತುಂಬಿ ಅವಳ ಓದಿಗೆ ನೆರವು, ಸಹಕಾರ ನೀಡುವ ಭರವಸೆ ನೀಡಿದರು. ಈ ವೇಳೆ ಶಬಾನಾ ಹಾಗೂ ಅವಳ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ಮೊದಲ ದಿನದ ಪರೀಕ್ಷೆಗೆ ಹಾಜರಾಗುವ ನಾಲ್ಕು ಗಂಟೆಗೆ ಮೊದಲು ನವಲಗುಂದ ಗಾಂಧಿ ಬಜಾರ ಬಳಿಯ ಶಬಾನಾ ಪಠಾಸು ಅವರ ತಂದೆ ನೂರಹುಸೇನ ಪಠಾಸು ಆಕಸ್ಮಿಕವಾಗಿ ಮರಣ ಹೊಂದಿದ್ದರು. ಈ ದುಃಖದ ಮಧ್ಯೆಯೂ ಬಾಲಕಿ ಪರೀಕ್ಷೆ ಬರೆದು ಬಂದ ನಂತರ ತಂದೆಯ ಅಂತಿಮ ಕ್ರಿಯೆಯಲ್ಲಿ ಭಾಗವಹಿಸಿದ್ದಳು.ನವಲಗುಂದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ಶಬಾನಾಳ ತಂದೆ ಹಳ್ಳಿ ಹಳ್ಳಿಗಳಿಗೆ ತೆರಳಿ ರಗ್ಗು, ಹಾಸಿಗೆ ಹೊದಿಕೆ, ದಿಂಬು ಮಾರಾಟ ಮಾಡುತ್ತಿದ್ದರು. ತಂದೆಯ ದುಡಿಮೆಯೇ ಇವರ ಕುಟುಂಬಕ್ಕೆ ಆಸರೆಯಾಗಿತ್ತು. ತಾಯಿ ಜನ್ನತಬಿ ಮಾನಸಿಕ ರೋಗಿ. ಅಲ್ಲದೇ ಶಬಾನಾಗೆ ಮೂವರು ಸಹೋದರಿಯರಿದ್ದು, ಬಾಡಿಗೆ ಮನೆಯಲ್ಲಿದ್ದಾರೆ. ಇವರಿಗೆ ಸ್ವಂತ ಮನೆಯೂ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಶಬಾನಾ ತಂದೆ ಮೃತರಾಗಿದ್ದು, ಇಡೀ ಕುಟುಂಬ ಅತಂತ್ರವಾಗಿತ್ತು. ಈ ಎಲ್ಲ ಮಾಹಿತಿಯನ್ನು ಪಡೆದುಕೊಂಡ ಜಿಲ್ಲಾಧಿಕಾರಿ ದಿವ್ಯ ಪ್ರಭು, ಮಾತೃಹೃದಯಿಯಾಗಿ ಶಬಾನಾ ಕುಟುಂಬಕ್ಕೆ ಸರ್ಕಾರದ ನೆರವು ಹಾಗೂ ಮಾನಸಿಕ ಬೆಂಬಲ, ಧೈರ್ಯ ತುಂಬಿದ್ದಾರೆ.
ಏನೇನು ಅನುಕೂಲ?ಶಬಾನಾ ತಾಯಿ ಜನ್ನತಬಿಗೆ ಒಂದೇ ದಿನದಲ್ಲಿ ವಿಧವಾ ಮಾಸಾಶನ ಮಂಜೂರಾತಿ ಮಾಡಿ ಆದೇಶ ಪತ್ರ‍್ರ ನೀಡಿದರು. ರಾಷ್ಟ್ರೀಯ ಕೌಟುಂಬಿಕ ನೆರವು ಯೋಜನೆಯಡಿ ಮನೆಯ ಮುಖ್ಯಸ್ಥ ಮರಣವಾದಾಗ ಸಿಗುವ ₹20 ಸಾವಿರ ಸಹಾಯಧನದ ಅರ್ಜಿಗೆ ಅನುಮೋದನೆ ನೀಡಿ, ಜನ್ನತಬಿಗೆ ಹೊಸದಾಗಿ ಬ್ಯಾಂಕ್ ಖಾತೆ ಮಾಡಿಸಿ, ತಕ್ಷಣ ಜಮೆ ಮಾಡಲು ಜಿಲ್ಲಾಧಿಕಾರಿ ದಿವ್ಯ ಪ್ರಭು ತಹಸೀಲ್ದಾರ್ ಸುಧೀರ ಸಾಹುಕಾರ ಅವರಿಗೆ ಸೂಚಿಸಿದರು. ಮಕ್ಕಳ ರಕ್ಷಣಾ ಘಟಕದಿಂದ ಎಕಪೋಷಕರ ಯೋಜನೆಯಡಿ ಶಬಾನಾ ಹಾಗೂ ಅವರ ತಂಗಿಗೆ ಪ್ರತಿ ತಿಂಗಳೂ ತಲಾ ₹2 ಸಾವಿರ ಶಿಷ್ಯ ವೇತನ ಸೀಗುವಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.ಶಬಾನಾ ಹಾಗೂ ಅವರ ಸಹೋದರಿಯರಿಗೆ ನವಲಗುಂದ ಪಟ್ಟಣದ ಮೂರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಉಚಿತ ಪ್ರವೇಶ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ನೀಡುವುದಾಗಿ ಮತ್ತು ಮಾನಸಿಕ ಕಾಯಿಲೆ ಇರುವ ಶಬಾನಾ ತಾಯಿ ಜನ್ನತಬಿಗೆ ಅಗತ್ಯವಿರುವ ಉಚಿತ ಚಿಕಿತ್ಸೆ, ಔಷಧಿಯನ್ನು ಆರೋಗ್ಯ ಇಲಾಖೆಯಿಂದ ನೀಡುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.ಇದಲ್ಲದೇ, ಶಾಸಕ ಎನ್.ಎಚ್. ಕೋನರಡ್ಡಿ ಅವರು ಮನೆ, ಆರ್ಥಿಕ ನೆರವಿನ ಭರವಸೆ ನೀಡಿದರು. ಆದ್ಯತೆ ಮೇಲೆ ಆಶ್ರಯ ಮನೆ ಮಂಜೂರಿ ಮಾಡಲಾಗುವುದು. ಫಲಾನುಭವಿ ಪಾಲಿನ ₹1 ಲಕ್ಷ ಹಣವನ್ನು ತಾವು ಇತರ ನೆರವಿನಿಂದ ಸ್ವತಃ ಭರಿಸಿ, ಮುಂದಿನ ಮೂರು ತಿಂಗಳಲ್ಲಿ ಮನೆ ಕಟ್ಟಿಸಿ ಕೊಡುವುದಾಗಿ ಭರವಸೆ ನೀಡಿದರು. ಅಲ್ಲಿ ವರೆಗೆ ಮನೆ ಬಾಡಿಗೆ ಮೊತ್ತವನ್ನು ಸ್ವಂತ ಹಣದಲ್ಲಿ ಕೋನರಡ್ಡಿ ನೀಡಿದರು. ಸದ್ಯಕ್ಕೆ ಆರ್ಥಿಕ ಸಹಾಯವಾಗಲು ಪಶುಪಾಲನೆ ಇಲಾಖೆಯಿಂದ ನಾಟಿ ಕೋಳಿ ಸಾಕಾಣಿಕೆ ಯೋಜನೆಯಡಿ ಶಬಾನಾ ತಾಯಿಯನ್ನು ಫಲಾನುಭವಿಯಾಗಿ ಆಯ್ಕೆ ಮಾಡಿ, ತಕ್ಷಣ 20 ನಾಟಿ ಕೋಳಿ ಮರಿಗಳನ್ನು ಮತ್ತು ಮುಂದಿನ ದಿನಗಳಲ್ಲಿ 80 ನಾಟಿ ಕೋಳಿ ಮರಿಗಳನ್ನು ನೀಡುವುದಾಗಿ ತಿಳಿಸಿದರು.
ಈ ಸಮಯದಲ್ಲಿ ಜಿಪಂ ಸಿಇಒ ಭುವನೇಶ ಪಾಟೀಲ, ನವಲಗುಂದ ತಹಸೀಲ್ದಾರ್ ಸುಧೀರ ಸಾವಕಾರ, ಅಣ್ಣಿಗೇರಿ ತಹಸೀಲ್ದಾರ್ ಎಂ.ಜಿ. ದಾಸಪ್ಪನವರ, ವಿವಿಧ ಇಲಾಖೆ ಅಧಿಕಾರಿಗಳಾದ ಎಸ್.ಆರ್. ಗಣಾಚಾರಿ, ಎಂ.ಬಿ. ಹೊಸಮನಿ, ಗಾಯತ್ರಿ ಪಾಟೀಲ, ಎಂ.ಪಿ. ದ್ಯಾಬೇರಿ, ಎಸ್.ಬಿ. ಮಲ್ಲಾಡದ, ಶರಣು ಪೂಜಾರ, ಶಿವಾನಂದ ತಡಸ, ಹನುಮಂತ ವಾಲಿಕಾರ ಮತ್ತಿತರರು ಇದ್ದರು.