ನಿವೃತ್ತ ಸರ್ಕಾರಿ ನೌಕರರ ಆರ್ಥಿಕ ನಷ್ಟ ಪರಿಹಾರ ಸಿಎಂ ಗಮನಕ್ಕೆ: ಐವನ್‌ ಡಿಸೋಜಾ

KannadaprabhaNewsNetwork |  
Published : Mar 30, 2025, 03:02 AM IST
ಐವನ್‌ ಡಿಸೋಜಾಗೆ ಮನವಿ ಸಲ್ಲಿಸುತ್ತಿರುವುದು  | Kannada Prabha

ಸಾರಾಂಶ

ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ವೇದಿಕೆ ದ.ಕ.ಜಿಲ್ಲೆ ಮಂಗಳೂರು ಮತ್ತು ದ.ಕ.ಜಿಲ್ಲಾ ನಿವೃತ್ತ ಸರ್ಕಾರಿ ನೌಕರರ ಸಂಘ ಮಂಗಳೂರು ವತಿಯಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಭವನದಲ್ಲಿ ಜಿಲ್ಲಾ ಮಟ್ಟದ ನಿವೃತ್ತ ಸರ್ಕಾರಿ ನೌಕರರ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ನಿವೃತ್ತ ಸರ್ಕಾರಿ ನೌಕರರು ಸರ್ಕಾರದ ಮುಂದೆ ಭಿಕ್ಷೆ ಬೇಡುತ್ತಿಲ್ಲ, ಬದಲಾಗಿ ತಾವು ದುಡಿದ ಹಕ್ಕಿನ ಮೌಲ್ಯವನ್ನು ಕೇಳುತ್ತಿದ್ದಾರೆ. ಈ ವಿಚಾರವನ್ನು ಸಿಎಂ ಅವರ ಗಮನಕ್ಕೆ ತರುವ ಮೂಲಕ ನಿವೃತ್ತ ಸರ್ಕಾರಿ ನೌಕರರಿಗೆ ನ್ಯಾಯ ಕೊಡಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದರು. ಅವರು ಶನಿವಾರ ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ವೇದಿಕೆ ದ.ಕ.ಜಿಲ್ಲೆ ಮಂಗಳೂರು ಮತ್ತು ದ.ಕ.ಜಿಲ್ಲಾ ನಿವೃತ್ತ ಸರ್ಕಾರಿ ನೌಕರರ ಸಂಘ ಮಂಗಳೂರು ವತಿಯಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಭವನದಲ್ಲಿ ಜಿಲ್ಲಾ ಮಟ್ಟದ ನಿವೃತ್ತ ಸರ್ಕಾರಿ ನೌಕರರ ಸಭೆಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ ೨೬ ಸಾವಿರ ಮಂದಿ ನಿವೃತ್ತ ಸರ್ಕಾರಿ ನೌಕರರಿಗೆ ಸಮಸ್ಯೆಯಾಗಿದೆ. ದ.ಕ.ದಲ್ಲಿ ೬೦೦ಕ್ಕೂ ಹೆಚ್ಚು ಮಂದಿ ಸಂಕಷ್ಟಕ್ಕೆ ಗುರಿಯಾಗಿರುವುದು ಬೇಸರದ ವಿಚಾರವಾಗಿದೆ. ಸಮಾಜ ಹಾಗೂ ಸರ್ಕಾರಕ್ಕೆ ಈ ನಿವೃತ್ತ ನೌಕರರ ಸೇವೆ ಅಪಾರವಿದೆ. ಅವರಿಗೆ ಎಂದಿಗೂ ಅನ್ಯಾಯವಾಗಬಾರದು. ಮುಖ್ಯಮಂತ್ರಿಗಳಿಗೆ ಈ ಕುರಿತು ಮನವರಿಕೆ ಮಾಡಿಕೊಂಡು ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದರು. ಇದೇ ಸಂದರ್ಭ ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ವೇದಿಕೆಯಿಂದ ಮನವಿಯನ್ನು ನೀಡಲಾಯಿತು.

ಏ.3ರಂದು ಬೆಂಗಳೂರಲ್ಲಿ ಸಮ್ಮೇಳನ: ಈ ಸಂದರ್ಭ ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ವೇದಿಕೆಯ ರಾಜ್ಯ ಮಹಾಪ್ರಧಾನ ಸಂಚಾಲಕ ಡಾ.ಎಂ.ಪಿ.ಎ. ಷಣ್ಮುಖಯ್ಯ ಮಾತನಾಡಿ, ಜು.೧,೨೦೨೨ರಿಂದ ಜು.೩೧,೨೦೨೪ರ ಅವಧಿಯಲ್ಲಿ ನಿವೃತ್ತ ಸರ್ಕಾರಿ ಅಧಿಕಾರಿ/ನೌಕರ ವರ್ಗದ ನಿವೃತ್ತರಿಗೆ ೭ನೇ ವೇತನ ಆಯೋಗದ ಲೆಕ್ಕಚಾರದಲ್ಲಿ ನಿವೃತ್ತಿ ಉಪಲಬ್ದಗಳನ್ನು ಪಾವತಿಸುವ ಸಂದರ್ಭದಲ್ಲಿ ಆರ್ಥಿಕ ನಷ್ಟವನ್ನು ರಾಜ್ಯ ಸರ್ಕಾರ ಮಾಡಿದೆ. ಈ ಕಾರಣದಿಂದ ನಿವೃತ್ತ ಸರ್ಕಾರಿ ನೌಕರರ ಜತೆಗೂಡಿಕೊಂಡು ಮೂರನೇ ಬಾರಿಗೆ ಬೆಂಗಳೂರು ಚಲೋ ಮಾಡುತ್ತಿದ್ದೇವೆ. ಏ.೩ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ, ಏ.೪ರಂದು ಅರಮನೆ ಮೈದಾನದಲ್ಲಿ ರಾಜ್ಯ ಸಮ್ಮೇಳನದಲ್ಲಿ ನಮ್ಮ ಬೇಡಿಕೆಯನ್ನು ಸಿಎಂ ಮುಂದೆ ಮಂಡಿಸಲಿದ್ದೇವೆ. ಅಲ್ಲಿ ನ್ಯಾಯ ಸಿಗದೇ ಹೋದಲ್ಲಿ ಮುಂದೆ ಅನಿರ್ದಿಷ್ಟಾವಧಿಯ ಹೋರಾಟ, ನ್ಯಾಯಾಲಯಕ್ಕೆ ಮೊರೆ ಹೋಗಲು ನಿರ್ಧಾರ ಮಾಡಲಾಗಿದೆ ಎಂದರು.ಕರ್ನಾಟಕ ರಾಜ್ಯ ನಿವೃತ್ತ ನೌಕರರ ವೇದಿಕೆಯ ರಾಜ್ಯ ಸಂಚಾಲಕ ಸಿರಿಲ್ ರಾಬರ್ಟ್ ಡಿಸೋಜಾ ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ನಿವೃತ್ತ ಸರ್ಕಾರಿ ನೌಕರರ ವೇದಿಕೆಯ ಉಳ್ಳಾಲ ಸಂಚಾಲಕಿ ಮಂಜುಳಾ ಪ್ರಾಸ್ತಾವಿಕ ಮಾತನಾಡಿದರು.

ಈ ಸಂದರ್ಭ ದ.ಕ.ಜಿಲ್ಲಾ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಸೀತಾರಾಮ್, ಮೋಹನ ಬಂಗೇರ, ಡೇಸಿ ಡಿಸೋಜಾ ಇದ್ದರು.

ಮಂಗಳೂರು ತಾಲೂಕು ಸಂಚಾಲಕ ಸ್ಟಾನಿ ತಾವ್ರೋ ಸ್ವಾಗತಿಸಿದರು. ನಾರಾಯಣ ಪೂಜಾರಿ ವಂದಿಸಿದರು. ಬಿ.ಮನಮೋಹನ ರಾವ್ ನಿರೂಪಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಸಾವಿರಕ್ಕೂ ಮಿಕ್ಕಿದ ನಿವೃತ್ತ ಸರ್ಕಾರಿ ನೌಕರರು ಹಾಜರಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ