ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ, ಹಿರಿಯ ವಕೀಲ ಎಲ್.ಪಿ.ಪ್ರಕಾಶ್‌ಗೌಡರವರು, ತಾಲೂಕಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ತಾಲೂಕಿನ ಫಲಾನುಭವಿಗಳಿಗೆ ಪರಿಣಾಮಕಾರಿಯಾಗಿ ತಲುಪಿಸುವ ಸಲುವಾಗಿ ಮುಂಬರುವ ದಿನಗಳಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ ನಡೆಸುವ ಕುರಿತು ಈ ಸಭೆಯಲ್ಲಿ ಚರ್ಚಿಸಲಾಗಿದೆ. ಜೊತೆಗೆ ೫ ಗ್ಯಾರಂಟಿ ಯೋಜನೆಗಳ ಪೈಕಿ ೧ಯೋಜನೆಯ ಸುಮಾರು ೧೦೦ ಫಲಾನುಭವಿಗಳನ್ನು ಭೇಟಿ ಮಾಡುವ ಮೂಲಕ ಯೋಜನೆ ಸಮರ್ಪಕವಾಗಿ ತಲುಪುತ್ತಿರುವ ಮಾಹಿತಿ ಪಡೆಯುವ ಮೂಲಕ ಯೋಜನೆಯಿಂದಾಗಿರುವ ಅನುಕೂಲಗಳನ್ನು ಫಲಾನುಭವಿಗಳ ಮುಖಾಂತರ ಪಡೆಯಲಾಗುತ್ತದೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಸುಭದ್ರ ಸರ್ಕಾರ ಅಸ್ತಿತ್ವದಲ್ಲಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಉದ್ದೇಶ ೫ ಗ್ಯಾರಂಟಿ ಯೋಜನೆಗಳ ಮೂಲಕ ಆರ್ಥಿಕವಾಗಿ ಜನರಿಗೆ ಹೆಚ್ಚು ಶಕ್ತಿ ತುಂಬುವ ಕೆಲಸವನ್ನು ಮಾಡುತ್ತಿದೆ. ತಾಲೂಕಿನಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಭೆ ಆಯೋಜಿಸುವ ಮೂಲಕ ಜನರ ಸಮಸ್ಯೆಗಳನ್ನು ಆಲಿಸಲಾಗುತ್ತದೆ ಎಂದರು.ತಾಲೂಕಿನಲ್ಲಿ ಶಕ್ತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಗೃಹಜೋತಿ, ಯೋಜನೆಗಳ ಅಂಕಿ ಅಂಶಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ಪ್ರತಿ ಸಭೆಯಲ್ಲಿ ಪಡೆದುಕೊಂಡು ಫಲಾನುಭವಿಗಳಿಗೆ ಸರ್ಕಾರದ ಯೋಜನೆ ತಲುಪಿಸುವ ಕುರಿತು ಹೆಚ್ಚಿನ ಗಮನ ಹರಿಸಲಾಗುತ್ತಿದೆ. ತಾಲೂಕಿನಲ್ಲಿ ೮೧.೨೫೮ ಪಡಿತರ ಕಾಡುಗಳಿದ್ದು ಅದರಲ್ಲಿ ೬೮೨೧ ಎಪಿಎಲ್ ೩೦೭೭ ಅಂತ್ಯೋದಯ ಕಾರ್ಡ್, ೭೦೫೬೦ ಬಿಪಿಎಲ್ ಕಾರ್ಡ್‌ದಾರರಿದ್ದಾರೆ. ಇವರಿಗೆ ಅನ್ನಭಾಗ್ಯ ಯೋಜನೆ ಮೂಲಕ ಸರ್ಕಾರದಿಂದ ಪ್ರತಿ ಫಲಾನುಭವಿಗಳಿಗೆ ೫ ಕೆ.ಜಿಯ ಅಕ್ಕಿ ಹಣ ತಲುಪುತ್ತಿದೆ. ಗೃಹ ಜ್ಯೋತಿ ಯೋಜನೆ ಮೂಲಕ ತಾಲೂಕಿನ ಜನರಿಗೆ ಹೆಚ್ಚಿನ ಅನುಕೂಲವಾಗಿದೆ ಎಂದರು.
ಸಭೆಯಲ್ಲಿ ಸಮಿತಿಯ ಸದಸ್ಯರಾದ ಎಸ್.ಎಂ.ಜನಾರ್ದನ್, ಮಿಲಿಟರಿ ಮಂಜು,ಗಣೇಶ್, ನಾಗೇಶ್ ಕೆಎನ್, ಎಚ್ ಕೆ ರಂಗಸ್ವಾಮಿ, ಶಕ್ತಿ ಹಾಗೂ ಗೃಹಲಕ್ಷ್ಮಿ ಯೋಜನೆಗಳಲಾಗುತ್ತಿರುವ ಸಮಸ್ಯೆಯ ಕುರಿತು ಸಭೆಯ ಗಮನ ಸೆಳೆದರು.