ಸರ್ಕಾರಗಳಿಂದ ರೈತರ ಆರ್ಥಿಕ ಶೋಷಣೆ: ಕೆ.ಟಿ. ಗಂಗಾಧರ್

KannadaprabhaNewsNetwork | Published : Jun 15, 2024 1:04 AM

ಸಾರಾಂಶ

ಕೊಬ್ಬರಿ ನಫೆಡ್ ಖರೀದಿ ಕೇಂದ್ರಗಳಲ್ಲಿ ರೈತರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಇಲ್ಲಿಯೂ ಸಹ ರೈತ ತಾನು ಬೆಳೆದ ಉತ್ಪನ್ನಗಳನ್ನು ಸರ್ಕಾರಕ್ಕೆ ಮಾರಲು ಲಂಚ ಕೊಡುವ ಸ್ಥಿತಿ ಬಂದಿದ್ದು, ಸರ್ಕಾರಕ್ಕೆ ಬದ್ಧತೆ ಇಲ್ಲದಂತಾಗಿದೆ.

ಕನ್ನಡಪ್ರಭ ವಾರ್ತೆ ತಿಪಟೂರು

ರೈತರ ಹೆಸರೇಳಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯುವ ಸರ್ಕಾರಗಳು ಬರಗಾಲದಲ್ಲಿಯೂ ನಾನಾ ರೀತಿಯಲ್ಲಿ ರೈತರನ್ನು ಆರ್ಥಿಕ ಶೋಷಣೆಗೀಡು ಮಾಡುತ್ತಿವೆ, ಬೆಳೆದ ಉತ್ಪನ್ನಗಳಿಗೆ ಲಾಭದಾಯಿಕ ಬೆಂಬಲ ಬೆಲೆ ನೀಡದಿರುವುದರಿಂದ ರೈತರು ಆರ್ಥಿಕ ಸಂಕಷ್ಟಕ್ಕೊಳಗಾಗುತ್ತಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾತ್ರ ನಮಗೂ ಇವುಗಳಿಗೂ ಸಂಬಂಧವಿಲ್ಲದಂತೆ ವರ್ತಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ರಾಜ್ಯ ರೈತ ಸಂಘದ ವರಿಷ್ಠ ಕೆ.ಟಿ. ಗಂಗಾಧರ್ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಕಲ್ಪತರು ಗ್ರ್ಯಾಂಡ್‌ನಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರ‍್ನಾಲ್ಕು ವರ್ಷಗಳಿಂದಲೂ ಸತತವಾಗಿ ಕೊಬ್ಬರಿ ಬೆಲೆ ಇಳಿಕೆಯಾಗುತ್ತಿದ್ದರೂ ಬಿಡಿಗಾಸಿನ ಪ್ರೋತ್ಸಾಹ ಧನ ನೀಡಿರುವುದು ಅವೈಜ್ಞಾನಿಕವಾಗಿದೆ. ಸರ್ಕಾರಗಳು ಬದಲಾವಣೆಯಾದರೂ ಕಾನೂನು ವ್ಯಾಪ್ತಿಯಲ್ಲಿ ಬೆಂಬಲ ಬೆಲೆಯನ್ನು ತರುವಲ್ಲಿ ವಿಫಲವಾಗಿದ್ದು, ರೈತರು ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಇಲ್ಲದೆ ಆರ್ಥಿಕ ನಷ್ಟವನ್ನು ಹೊಂದುತ್ತಿದ್ದಾರೆ. ಇದನ್ನು ಪ್ರಶ್ನಿಸಲು ಹೋದರೆ ರೈತನ ಮೇಲೆಯೇ ದೌರ್ಜನ್ಯ, ದಬ್ಬಾಳಿಕೆಗಳು ನಡೆಯುತ್ತಿವೆ. 18 ಸಾವಿರವಿದ್ದ ಕೊಬ್ಬರಿ ಬೆಲೆ ದಿಢೀರನೇ 8 ಸಾವಿರಕ್ಕೆ ಕುಸಿದಿದೆ. ತೋಟಗಾರಿಕೆ ಇಲಾಖೆಯೇ ಒಂದು ಕ್ವಿಂಟಲ್ ಕೊಬ್ಬರಿ ಬೆಳೆಯಲು 16 ಸಾವಿರಕ್ಕೂ ಹೆಚ್ಚು ಖರ್ಚಾಗುತ್ತದೆ ಎಂದು ಮಾಹಿತಿ ನೀಡಿದ್ದರೂ, ಸರ್ಕಾರಗಳು ತಲೆಕೆಡಿಸಿಕೊಳ್ಳುತ್ತಿಲ್ಲ. ಸ್ವಾಮಿನಾಥನ್ ವರದಿ ಜಾರಿಗೆ ತರುತ್ತೇನೆಂದು ರೈತರಿಗೆ ಭರವಸೆ ನೀಡಿದ್ದ ಸರ್ಕಾರಗಳು ಕೊಟ್ಟ ಮಾತನ್ನು ಮರೆಯುತ್ತಿವೆ. ಪ್ರಧಾನಿ ಮೋದಿಯವರು ಆತ್ಮ ನಿರ್ಭರ ಭಾರತ ಎಂದು ಹೇಳುತ್ತಾ ಸ್ಥಳೀಯ ಉತ್ಪನ್ನಗಳಿಗೆ ಪ್ರಾಶಸ್ತ್ಯ ನೀಡದೇ ಬೇರೆ ದೇಶಗಳಿಂದ ವಸ್ತುಗಳನ್ನು ತರಿಸಿಕೊಳ್ಳುತ್ತಿದ್ದಾರೆ. ಪಾಮಾಯಿಲ್ ಎಣ್ಣೆಯನ್ನು ರದ್ದು ಮಾಡಿ ನಮ್ಮ ಕೊಬ್ಬರಿ ಎಣ್ಣೆಗೆ ಮಾರುಕಟ್ಟೆ ವ್ಯವಸ್ಥೆ ಮಾಡಿದರೆ ಕೊಬ್ಬರಿ ಬೆಲೆ ತಾನಾಗಿಯೇ ಏರಿಕೆಯಾಗಲಿದ್ದು, ಸರ್ಕಾರ ಕೂಡಲೇ ಬೆಂಬಲ ಬೆಲೆಯನ್ನು ಕಾನೂನು ವ್ಯಾಪ್ತಿಯಲ್ಲಿ ತರಬೇಕು ಇಲ್ಲವಾದಲ್ಲಿ ಹೋರಾಟ ಮಾಡಲಾಗುವುದು ಎಂದರು.

ಕೊಬ್ಬರಿ ನಫೆಡ್ ಖರೀದಿ ಕೇಂದ್ರಗಳಲ್ಲಿ ರೈತರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಇಲ್ಲಿಯೂ ಸಹ ರೈತ ತಾನು ಬೆಳೆದ ಉತ್ಪನ್ನಗಳನ್ನು ಸರ್ಕಾರಕ್ಕೆ ಮಾರಲು ಲಂಚ ಕೊಡುವ ಸ್ಥಿತಿ ಬಂದಿದ್ದು, ಸರ್ಕಾರಕ್ಕೆ ಬದ್ಧತೆ ಇಲ್ಲದಂತಾಗಿದೆ. ರೈತ ಮಾರಾಟ ಮಾಡಿರುವ ಕೊಬ್ಬರಿ ಹಣ ಮೂರು ದಿನಗಳೊಳಗೆ ಆತನ ಖಾತೆಗೆ ಜಮೆ ಆಗಬೇಕು. ಇದೂ ಸರಿಯಾಗಿ ಆಗುತ್ತಿಲ್ಲ, ಈ ಬಗ್ಗೆ ಮುಖ್ಯಮಂತ್ರಿಯವರು ಕೂಡಲೇ ಕ್ರಮವಹಿಸಬೇಕು ಎಂದರು.

ರಾಜ್ಯ ರೈತ ಸಂಘದ ಅಧ್ಯಕ್ಷ ಮಂಡಳಿ ಸದಸ್ಯೆ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ, ತಿಪಟೂರು ಕೊಬ್ಬರಿ ಮಾರುಕಟ್ಟೆಯಲ್ಲಿ ನಿನ್ನೆ ರೈತ ಮುಖಂಡ ಮತ್ತು ಅಧಿಕಾರಿಯ ನಡುವೆ ನಡೆದ ಘಟನೆ ಖಂಡನೀಯ. ರೈತರಿಂದ ಒಂದು ಚೀಲಕ್ಕೆ 100ರು. ಗಳನ್ನು ತೆಗೆದುಕೊಳ್ಳುತ್ತಿದ್ದಾರೆಂಬ ಮಾಹಿತಿ ಇದ್ದು, ಇದರಲ್ಲಿ ಅಧಿಕಾರಿಗಳಿಗೆ ಎಷ್ಟು? ಇದನ್ನು ಪ್ರಶ್ನಿಸಲು ಹೋದರೆ ರೈತರ ಮೇಲೆ ಅಧಿಕಾರಿಗಳು ದರ್ಪ ತೋರಿಸುತ್ತಿದ್ದಾರೆ. ರೈತ ಮುಖಂಡನ ಬಳಿ ಬಹಿರಂಗವಾಗಿ ಅಧಿಕಾರಿಗಳು ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಕಾರ್ಯದರ್ಶಿ ಯೋಗೀಶ್ವರಸ್ವಾಮಿ, ಹಾಸನ ಜಿಲ್ಲಾ ಅಧ್ಯಕ್ಷ ಕಣಗಾಲ್ ಮೂರ್ತಿ, ರಾಜ್ಯ ಕಾರ್ಯದರ್ಶಿ, ಜಿಲ್ಲಾ ಅಧ್ಯಕ್ಷ ಟಿ.ಬಿ. ಜಯಾನಂದ್, ಹಸಿರು ಸೇನೆ ಜಿಲ್ಲಾಧ್ಯಕ್ಷ ದೇವರಾಜು ತಿಮ್ಲಾಪುರ, ರಾಜ್ಯ ಕಾರ್ಯದರ್ಶಿ ಮಂಜುಕಿರಣ್, ತಾ. ಅಧ್ಯಕ್ಷ ಜಯಚಂದ್ರಶರ್ಮ, ಮುಖಂಡರಾದ ಮನೋಹರ್ ಪಟೇಲ್, ಶ್ರೀಕಾಂತ್ ಕೆಳಹಟ್ಟಿ, ಹರ್ಷ ಗಂಗನಘಟ್ಟ ಮತ್ತಿತರರಿದ್ದರು.

Share this article