ಉತ್ತಮ ಜೀವನಕ್ಕೆ ಶಿಕ್ಷಣ ನೀಡುವುದು ಅದಮಾರು ಮಠದ ಗುರಿ

KannadaprabhaNewsNetwork | Published : Jun 15, 2024 1:04 AM

ಸಾರಾಂಶ

ಬಾಳೆಹೊನ್ನೂರು, ವಿದ್ಯಾರ್ಥಿಗಳು ಉತ್ತಮ ಜೀವನ ರೂಪಿಸಲು ಗುಣಮಟ್ಟದ ಶಿಕ್ಷಣ ನೀಡುವುದೇ ಅದಮಾರು ಮಠದ ಗುರಿಯಾಗಿದೆ ಎಂದು ಉಡುಪಿ ಅದಮಾರು ಮಠ ಎಜುಕೇಶನ್ ಕೌನ್ಸಿಲ್ ಅಧ್ಯಕ್ಷ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.

ಪೂರ್ಣಪ್ರಜ್ಞಾ ಪಿಯು ನೂತನ ಕಾಲೇಜು ಉದ್ಘಾಟನೆ ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ವಿದ್ಯಾರ್ಥಿಗಳು ಉತ್ತಮ ಜೀವನ ರೂಪಿಸಲು ಗುಣಮಟ್ಟದ ಶಿಕ್ಷಣ ನೀಡುವುದೇ ಅದಮಾರು ಮಠದ ಗುರಿಯಾಗಿದೆ ಎಂದು ಉಡುಪಿ ಅದಮಾರು ಮಠ ಎಜುಕೇಶನ್ ಕೌನ್ಸಿಲ್ ಅಧ್ಯಕ್ಷ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.ಉಡುಪಿ ಶ್ರೀ ಅದಮಾರು ಮಠ ಎಜುಕೇಶನ್ ಕೌನ್ಸಿಲ್‌ನಿಂದ ಸಮೀಪದ ಸಂಗಮೇಶ್ವರಪೇಟೆಯಲ್ಲಿ ನೂತನವಾಗಿ ಆರಂಭವಾದ ಪೂರ್ಣಪ್ರಜ್ಞಾ ಪದವಿ ಪೂರ್ವ ಕಾಲೇಜು ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಕಿರಿಯ ವಯಸ್ಸಿನಲ್ಲಿಯೇ ಸುಸಂಸ್ಕೃತರನ್ನಾಗಿಸಿದರೆ ಉತ್ತಮ ಪ್ರಜೆಯಾಗಲು ಸಾಧ್ಯ. ಸಾಮೂಹಿಕ ಪ್ರಯತ್ನದಿಂದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಲು ಸಾಧ್ಯವಿದೆ. ಧರ್ಮ, ಅರ್ಥ, ಕಾಮ ಈ ಎಲ್ಲಾ ಕ್ರಿಯೆಗಳನ್ನು ಒಗ್ಗೂಡಿಸಿ ಕಾರ್ಯನಿರ್ವಹಿಸಿದರೆ ವಿದ್ಯಾರ್ಥಿಗಳಿಗೆ ಇಂದಿನ ಅವಶ್ಯಕತೆ ತಿಳಿಸ ಬಹುದು.ಜೀವನದಲ್ಲಿ ದೃಢ ನಿರ್ಧಾರ ಇದ್ದರೆ ಮಾತ್ರ ಸಾಧನೆ ಮಾಡಿ ಗುರಿ ತಲುಪಲು ಸಾಧ್ಯವಿದೆ. ಪೂರ್ಣ ಪ್ರಜ್ಞಾ ವಿದ್ಯಾಲಯ ದೇಶದ ಸಾಂಸ್ಕೃತಿಕ ಕಲೆ, ಮಾನವೀಯ ಗುಣಗಳನ್ನು ಮಕ್ಕಳಿಗೆ ಕಲಿಸುವ ಚಿಂತನೆ ಹೊಂದ ಲಾಗಿದೆ. ಮುಂದಿನ ದಿನಗಳಲ್ಲಿ ಸಿಬಿಎಸ್‌ಇ ಶಿಕ್ಷಣ ಪದ್ಧತಿ ಸಹ ಆರಂಭಿಸಲಾಗುವುದು. ಪೂರ್ಣ ಪ್ರಜ್ಞಾ ವಿದ್ಯಾಲಯ ಒಂದು ಉತ್ತಮ ಸಂಪತ್ತಾಗಿದ್ದು, ಈ ಸಂಪತ್ತು ಸದೃಢಗೊಳಿಸಿ ಭಾರತವನ್ನು ಅಭಿವೃದ್ಧಿಗೊಳಿಸುವುದು ನಮ್ಮ ಉದ್ದೇಶ ಎಂದರು.ಕೆಆರ್‌ಇಡಿಎಲ್ ಅಧ್ಯಕ್ಷ, ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ದಾನಗಳಲ್ಲಿ ಶ್ರೇಷ್ಠದಾನ ವಿದ್ಯಾದಾನ , ಗ್ರಾಮೀಣ ಭಾಗದಲ್ಲಿ 40 ವರ್ಷಗಳ ಹಿಂದೆ ಉತ್ತಮ ವಿದ್ಯಾಸಂಸ್ಥೆ ಆರಂಭಿಸಿದ ಅದಮಾರು ಮಠದ ವಿಬುದೇಶ ತೀರ್ಥರ ಶ್ರಮ ಶ್ಲಾಘನೀಯ ಎಂದರು.ನಗರ ಪ್ರದೇಶಗಳಲ್ಲಿ ಇಂದು ಅನೇಕ ಶಿಕ್ಷಣ ಸಂಸ್ಥೆಗಳನ್ನು ಉದ್ಯಮಿಗಳು ಆರಂಭಿಸಿ ಶಿಕ್ಷಣವನ್ನು ಉದ್ಯಮವಾಗಿರಿಸಿಕೊಂಡಿದ್ದಾರೆ. ಆದರೆ ಗ್ರಾಮೀಣ ಭಾಗದಲ್ಲಿ ಉತ್ತಮ ಪರಿಸರದ ನಡುವೆ ನೂತನ ಪಿಯು ಕಾಲೇಜು ಆರಂಭಿಸಿರುವುದು ಉತ್ತಮವಾಗಿದೆ.ಮಾಹಿತಿ ತಂತ್ರಜ್ಞಾನ ಇಂದು ನಾಗಾಲೋಟದಲ್ಲಿ ಬೆಳೆಯುತ್ತಿದ್ದು, ಉದ್ಯೋಗ, ದಿನನಿತ್ಯದ ಚಟುವಟಿಕೆಗೆ ಮಾಹಿತಿ, ತಂತ್ರಜ್ಞಾನ ಅಗತ್ಯವಾಗಿದೆ. ನಾನು ಶಾಸಕನಾದ ನಂತರ ರಸ್ತೆ, ಕುಡಿಯುವ ನೀರು ಹಾಗೂ ಮೂಲಭೂತ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಿದ್ದು, ಪೂರ್ಣ ಪ್ರಜ್ಞಾ ವಿದ್ಯಾಲಯಕ್ಕೆ ಅಗತ್ಯವಿರುವ ಸೌಲಭ್ಯ ನೀಡಿಸಲಾಗುವುದು ಎಂದರು.

ಪೂರ್ಣಪ್ರಜ್ಞಾ ವಿದ್ಯಾಸಂಸ್ಥೆ ಕಾರ್ಯದರ್ಶಿ ಎಸ್.ವಿ.ಮಂಜುನಾಥ್, ಜಂಟಿ ಕಾರ್ಯದರ್ಶಿ ವಿವೇಕ್ ಕಟೀಲ್, ಎ.ಪಿ.ಭಟ್, ಗೋಪಾಲ ಶಬರಾಯ, ರಮಣ ಐತಾಳ್, ರೀನಾ ಡಿಕುನ್ಹ, ರಂಜಿತಾ ಕೊಪ್ಪ ಮತ್ತಿತರರು ಹಾಜರಿದ್ದರು.೧೪ಬಿಹೆಚ್‌ಆರ್ ೨:

ಬಾಳೆಹೊನ್ನೂರು ಸಮೀಪದ ಸಂಗಮೇಶ್ವರಪೇಟೆಯಲ್ಲಿ ನೂತನವಾಗಿ ಆರಂಭಗೊಂಡ ಪೂರ್ಣಪ್ರಜ್ಞಾ ಪದವಿ ಪೂರ್ವ ಕಾಲೇಜು ಹಾಗೂ ಕಟ್ಟಡ ಉದ್ಘಾಟನೆಯನ್ನು ಉಡುಪಿ ಅದಮಾರು ಮಠ ಎಜುಕೇಶನ್ ಕೌನ್ಸಿಲ್ ಅಧ್ಯಕ್ಷ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ನೆರವೇರಿಸಿದರು. ಟಿ.ಡಿ.ರಾಜೇಗೌಡ, ಎಸ್.ವಿ.ಮಂಜುನಾಥ್, ವಿವೇಕ್ ಕಟೀಲ್, ಎ.ಪಿ.ಭಟ್, ಗೋಪಾಲ ಶಬರಾಯ ಇದ್ದರು.

Share this article