ಕನ್ನಡಪ್ರಭ ವಾರ್ತೆ ಹಾಸನ
ಮೊದಲಿಗೆ ಜಿಲ್ಲಾ ಉಸ್ತುವಾರಿ ಹಾಗೂ ಕಂದಾಯ ಸಚಿವರಾದ ಕೃಷ್ಣಬೈರೇಗೌಡ ಅವರು ಮಹಾತ್ಮ ಗಾಂಧೀಜಿ ಹಾಗೂ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಫನಮನ ಸಲ್ಲಿಸಿದ ನಂತರ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವ ಸಂದೇಶ ನೀಡಿದರು. ಕೇಂದ್ರದ ವಿರುದ್ಧ ನೇರ ಆರೋಪಗಳನ್ನು ಮಾಡಿದ ಅವರು, ವೈವಿಧ್ಯತೆಯೇ ಭಾರತದ ನಿಜವಾದ ಶಕ್ತಿ. ಹಲವು ಭಾಷೆಗಳು, ಹಲವು ಸಂಸ್ಕೃತಿಗಳು ನಮ್ಮ ದೇಶದ ಅಸ್ತಿತ್ವ. ಆದರೆ ಕೇಂದ್ರ ಸರ್ಕಾರ ಒಂದೇ ಭಾಷೆ, ಒಂದೇ ಸಂಸ್ಕೃತಿ, ಒಂದೇ ಧರ್ಮವನ್ನು ಬಲವಂತವಾಗಿ ಹೇರಲು ಹೊರಟಿದೆ. ಇದು ಸಂವಿಧಾನದ ಆತ್ಮದ ಮೇಲೆಯೇ ನಡೆಯುತ್ತಿರುವ ದಾಳಿಯಾಗಿದೆ. ಹಿಂದಿ ಭಾಷೆಯನ್ನು ವ್ಯವಸ್ಥಿತವಾಗಿ ದೇಶದ ಮೇಲೆ ಹೇರಲಾಗುತ್ತಿದೆ. ಈ ಹಿಂದೆ ಇದಕ್ಕೆ ದೇಶದಾದ್ಯಂತ ಭಾರೀ ಚಳವಳಿಗಳು ನಡೆದಿದ್ದವು. ಆದರೆ ಇಂದು ಮೌನವಾಗಿ, ಹಂತ ಹಂತವಾಗಿ ಈ ಹೇರಿಕೆ ನಡೆಯುತ್ತಿದೆ. ಇದು ಅಪಾಯಕಾರಿ ಪ್ರವೃತ್ತಿ ಎಂದು ಎಚ್ಚರಿಸಿದರು.
ಭಾಷೆ-ಸಂಸ್ಕೃತಿಯ ಜೊತೆಗೆ ಆರ್ಥಿಕ ದಾಳಿ:“ಇದು ಕೇವಲ ಭಾಷೆ ಮತ್ತು ಸಂಸ್ಕೃತಿಯ ಮೇಲಿನ ದಾಳಿ ಮಾತ್ರವಲ್ಲ. ರಾಜ್ಯಗಳ ಆರ್ಥಿಕ ಶಕ್ತಿಯ ಮೇಲಿನ ದಾಳಿಯೂ ಹೌದು” ಎಂದು ಸಚಿವರು ಹೇಳಿದರು.ಕರ್ನಾಟಕವನ್ನು ಕೇಂದ್ರ ಸರ್ಕಾರ ‘ಅಕ್ಷಯ ಪಾತ್ರೆ’ಯಂತೆ ಬಳಸಿಕೊಳ್ಳುತ್ತಿದೆ. ಕರ್ನಾಟಕದ ಆದಾಯದ ಮೇಲೆ ದೇಶದ ಆರ್ಥಿಕ ವ್ಯವಸ್ಥೆ ನಿಂತಿದೆ. ಆದರೆ ರಾಜ್ಯಕ್ಕೆ ಬರಬೇಕಾದ ನ್ಯಾಯಸಮ್ಮತ ಹಣವನ್ನು ನೀಡದೆ ಶಕ್ತಿ ಕುಂದಿಸುವ ಕೆಲಸ ನಡೆಯುತ್ತಿದೆ ಎಂದು ದೂರಿದರು.ಕಳೆದ ಹಣಕಾಸು ಆಯೋಗದಲ್ಲಿ ಕರ್ನಾಟಕದ ತೆರಿಗೆ ಪಾಲನ್ನು ಶೇ.೨೩ರಷ್ಟು ಕಡಿತಗೊಳಿಸಲಾಗಿದೆ. ಇದರಿಂದ ರಾಜ್ಯ ಗಂಭೀರ ಆರ್ಥಿಕ ಸಂಕಷ್ಟಕ್ಕೆ ದೂಡಲ್ಪಟ್ಟಿದೆ. ೧೦ ವರ್ಷಗಳ ಹಿಂದೆ ಕರ್ನಾಟಕಕ್ಕೆ ಶೇ.೪.೭ರಷ್ಟು ತೆರಿಗೆ ಪಾಲು ಸಿಗುತ್ತಿತ್ತು. ಕನಿಷ್ಠ ಅಷ್ಟಾದರೂ ನೀಡಬೇಕು. ೪.೭ಕ್ಕಿಂತ ಹೆಚ್ಚು ಪಾಲು ನೀಡಿದರೆ ಮಾತ್ರ ಅದು ನ್ಯಾಯವಾಗುತ್ತದೆ ಎಂದರು.
ಮಹಾತ್ಮ ಗಾಂಧಿ ನರೇಗಾ ಯೋಜನೆಯನ್ನು ದುರ್ಬಲಗೊಳಿಸಿ ಬಡವರ ಶಕ್ತಿ ಕುಂದಿಸಲಾಗುತ್ತಿದೆ. ಉದ್ಯೋಗ ಖಾತ್ರಿ ಯೋಜನೆ ಬಡವರಿಗೆ ಆಸರೆಯಾಗಿತ್ತು. ಅದನ್ನು ಕಿತ್ತೆಸೆಯುವ ಮೂಲಕ ಲಕ್ಷಾಂತರ ಕುಟುಂಬಗಳಿಗೆ ಅನ್ಯಾಯ ಮಾಡಲಾಗಿದೆ. ನರೇಗಾ ಯೋಜನೆಯನ್ನು ಪುನಃ ಬಲಪಡಿಸಬೇಕು ಎಂದು ಆಗ್ರಹಿಸಿದರು. ಭಾಷಣದ ಅಂತ್ಯದಲ್ಲಿ ಸಚಿವ ಕೃಷ್ಣಬೈರೇಗೌಡ ಮಾತನಾಡುತ್ತಾ.. ಗಣರಾಜ್ಯೋತ್ಸವದ ದಿನವಾದರೂ ಕೇಂದ್ರ ಸರ್ಕಾರಕ್ಕೆ ಈ ಅನ್ಯಾಯಗಳು ಮನವರಿಕೆ ಆಗಲಿ. ಸಂವಿಧಾನ ಉಳಿಯಬೇಕು, ರಾಜ್ಯಗಳ ಹಕ್ಕು ಉಳಿಯಬೇಕು, ಆಗಲೇ ದೇಶ ಬಲಿಷ್ಠವಾಗುತ್ತದೆ ಎಂದು ಹೇಳಿದರು.