ಕುಡಿವ ನೀರಿನ ಸಮಸ್ಯೆ ಪರಿಹಾರ ಕಂಡುಕೊಳ್ಳಿ

KannadaprabhaNewsNetwork |  
Published : Nov 07, 2026, 03:00 AM IST
ಸಭೇ | Kannada Prabha

ಸಾರಾಂಶ

ಬರಗಾಲಕ್ಕೆ ತುತ್ತಾಗಿರುವ ಮೂಡಲಗಿ ತಾಲೂಕಿನ ಜನರಿಗೆ ತೊಂದರೆಯಾಗದಂತೆ ಕುಡಿಯುವ ನೀರಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. ಪಿಡಿಓ ಮತ್ತು ಗ್ರಾಮ ಆಡಳಿತ ಅಧಿಕಾರಿಗಳು ಸೇರಿ ಸಮನ್ವಯತೆಯಿಂದ ಕೆಲಸ ಮಾಡುವಂತೆ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ಬರಗಾಲಕ್ಕೆ ತುತ್ತಾಗಿರುವ ಮೂಡಲಗಿ ತಾಲೂಕಿನ ಜನರಿಗೆ ತೊಂದರೆಯಾಗದಂತೆ ಕುಡಿಯುವ ನೀರಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. ಪಿಡಿಓ ಮತ್ತು ಗ್ರಾಮ ಆಡಳಿತ ಅಧಿಕಾರಿಗಳು ಸೇರಿ ಸಮನ್ವಯತೆಯಿಂದ ಕೆಲಸ ಮಾಡುವಂತೆ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸೂಚನೆ ನೀಡಿದರು.ಶುಕ್ರವಾರ ಗೋಕಾಕ ಮತ್ತು ಮೂಡಲಗಿ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲು ಅಧಿಕಾರಿಗಳಿಗೆ ತಾಕೀತು ಮಾಡಿದರು. ಮಳೆಯ ಪ್ರಮಾಣ ಕಡಿಮೆಯಾದ್ದರಿಂದ ತಾಲೂಕು ಬರಪೀಡಿತ ಪ್ರದೇಶವಾಗಿದೆ. ಹಿಡಕಲ್ ಜಲಾಶಯವನ್ನು ನಂಬಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲೆಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆಯೋ? ಅಲ್ಲಲ್ಲಿ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅಗತ್ಯವಿದ್ದರೆ ಟ್ಯಾಂಕರ್ ಮೂಲಕ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಸೂಚಿಸಿದರು.ಮುಂದಿನ ಜನವರಿ, ಫೆಬ್ರವರಿ, ಮಾರ್ಚ್ ತಿಂಗಳತನಕ ನೀರಿನ ಅಭಾವ ಮುಂದುವರಿಯಬಹುದು. ಸ್ಥಳೀಯ ಮಟ್ಟದ ಅಧಿಕಾರಿಗಳು ಸಮನ್ವಯ ಸಾಧಿಸಿ ಸ್ಪಂದನೆ ಮಾಡಲು ಸೂಚನೆ ನೀಡಿದರು. ರೈತರು ಮತ್ತು ಸಾರ್ವಜನಿಕರಿಗೆ ಸಮರ್ಪಕವಾಗಿ ವಿದ್ಯುತ್ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ರಸ್ತೆಗಳ ಅಭಿವೃದ್ಧಿಗೆ ಈಗಾಗಲೇ ಅನುದಾನ ಬಂದು ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡುವಂತೆ ತಿಳಿಸಿದರು.ಈಗಾಗಲೇ ಕಂದಾಯ ಗ್ರಾಮಕ್ಕಾಗಿ ಜೋಕಾನಟ್ಟಿ, ಹಳೆ ಯರಗುದ್ರಿ, ಮನ್ನಾಪೂರ, ಸಂಗನಕೇರಿ( ಅರಭಾವಿ), ಬಡಲಕ್ಕನವರ ತೋಟ, ತೋಕರಟ್ಟಿ, ಹಣಮಾಪೂರ(ಕೆ), ಗುರ್ಲಾಪೂರ ಮತ್ತು ಕಂದಾಯ ಉಪ ಗ್ರಾಮಕ್ಕಾಗಿ ಕಲ್ಲೊಳ್ಳಿ ಬಸವನಗರ, ಇಂದಿರಾನಗರ ಅರಭಾವಿ, ಶಿವಶರಣ ಹರಳಯ್ಯ ನಗರ, ಹೇಮರೆಡ್ಡಿ ಮಲ್ಲಮ್ಮ ನಗರ, ಹನುಮಾನ ನಗರ ರಚನೆ ಕುರಿತು ಬೆಳಗಾವಿ ಡಿಡಿಎಲ್‌ಆರ್ ಅವರಿಗೆ ಪ್ರಾಥಮಿಕ ಅಧಿಸೂಚನೆಗಾಗಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.ಮೂಡಲಗಿ ತಹಸೀಲ್ದಾರ ಶ್ರೀಶೈಲ ಗುಡುಮೆ, ಗೋಕಾಕ ತಾಪಂ ಇಓ ಪರಶುರಾಮ ಗಸ್ತಿ, ಮೂಡಲಗಿ ತಾಪಂ ಇಓ ನೆರ್ಲೆಕರ, ಶಿಕ್ಷಣಾಧಿಕಾರಿಗಳಾದ ಜಿ.ಬಿ.ಬಳಗಾರ, ಪ್ರಕಾಶ ಹಿರೇಮಠ, ತಾಲೂಕು ಮಟ್ಟದ ವಿವಿಧ ಅಧಿಕಾರಿಗಳ, ಪಿಡಿಒಗಳು, ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.

ಬಾಕ್ಸ್‌

ತೊಂದರೆ ಕೊಟ್ಟರೆ ಸುಮ್ಮನಿರಲ್ಲ: ಎಚ್ಚರಿಕೆ

ಸಾರ್ವಜನಿಕರು ಮತ್ತು ರೈತರಿಗೆ ಅಧಿಕಾರಿಗಳು ವಿನಾಕಾರಣ ಸತಾಯಿಸಿ ತೊಂದರೆ ಕೊಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ರೈತರ ಕೆಲಸಗಳಿಗೆ ತೊಂದರೆ ಕೊಟ್ಟರೆ ಸುಮ್ಮನಿರಲ್ಲ. ಸುಧಾರಿಸಿಕೊಂಡರೆ ಒಳ್ಳೆಯದು. ಇಲ್ಲದಿದ್ದಲ್ಲಿ ಬೇಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ತಕ್ಕ ಶಾಸ್ತಿ ಮಾಡಬೇಕಾಗುತ್ತದೆ ಎಂದು ಖಡಕ್‌ ಎಚ್ಚರಿಕೆ ನೀಡಿದರು. ಜನರನ್ನು ಕಾಡುತ್ತಿರುವ ನೀವು ಮನುಷ್ಯರೇ? ಸಣ್ಣ ಕೆಲಸಕ್ಕಾಗಿ ತಿಂಗಳುಗಟ್ಟಲೇ ಕಚೇರಿಗೆ ಎಡತಾಕಿಸುತ್ತೀರಿ. ನಿಮಗೆ ನಾಚಿಕೆಯಾಗುವುದಿಲ್ಲವೇ,? ಎಂದು ಪ್ರಶ್ನಿಸಿದ ಅವರು, ಬೇರೆ ಶಾಸಕರಾಗಿದ್ದರೆ ನಿಮ್ಮ ಸ್ಥಿತಿ ಏನಾಗುತ್ತಿತ್ತು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಿ. ನನ್ನ ಸಹನೆ, ಸಮಾಧಾನವನ್ನು ಪರೀಕ್ಷಿಸಬೇಡಿ. ಕಾಟಾಚಾರಕ್ಕೆ ಸಭೆಗೆ ಬರುತ್ತೀರಿ? ಸಭೆಯಲ್ಲಿ ಮೊಬೈಲ್ ಬಳಕೆ ಮಾಡುತ್ತೀರಿ. ಎಲ್ಲವನ್ನೂ ಗಮನಿಸುತ್ತಿದ್ದೇನೆ. ಸುಧಾರಿಸಿಕೊಂಡರೆ ಒಳ್ಳೆಯದು. ಇಲ್ಲದಿದ್ದರೆ, ಅಧಿಕಾರಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೇ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬಿಗೆ ಸ್ಥಳೀಯ ರಿಕವರಿ ಆಧಾರದಲ್ಲಿ ನ್ಯಾಯಯುತ ಬೆಲೆ ನೀಡಲು ಆಗ್ರಹ
ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದರೆ ಸೂಕ್ತ ಕ್ರಮ