ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯೂ ಪ್ರಸಕ್ತ ಹಂಗಾಮಿನಲ್ಲಿ 3.50 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಿದ್ದು, ಕಬ್ಬು ಬೆಳೆಗಾರರು ಹೆಚ್ಚಿನ ಪ್ರಮಾಣದಲ್ಲಿ ಗುಣಮಟ್ಟದ ಕಬ್ಬು ಪೂರೈಕೆ ಮಾಡಬೇಕೆಂದು ಕಾರ್ಖಾನೆ ಅಧ್ಯಕ್ಷ ಬಸವರಾಜ ಬಾಳೇಕುಂದರಗಿ ಹೇಳಿದರು.
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯೂ ಪ್ರಸಕ್ತ ಹಂಗಾಮಿನಲ್ಲಿ 3.50 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಿದ್ದು, ಕಬ್ಬು ಬೆಳೆಗಾರರು ಹೆಚ್ಚಿನ ಪ್ರಮಾಣದಲ್ಲಿ ಗುಣಮಟ್ಟದ ಕಬ್ಬು ಪೂರೈಕೆ ಮಾಡಬೇಕೆಂದು ಕಾರ್ಖಾನೆ ಅಧ್ಯಕ್ಷ ಬಸವರಾಜ ಬಾಳೇಕುಂದರಗಿ ಹೇಳಿದರು.ತಾಲೂಕಿನ ಸಿದ್ದಸಮುದ್ರ ಬಳಿಯ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯ 2026-27 ನೇ ಸಾಲಿನ ಕಬ್ಬು ಅರೆಯುವ ಹಂಗಾಮ ಪ್ರಾರಂಭೋತ್ಸವದಲ್ಲಿ ಮಾತನಾಡಿದರು. ಪ್ರಸ್ತುತ ಹಂಗಾಮಿನಲ್ಲಿ ಕಬ್ಬಿನ ಅಭಾವ ಹೆಚ್ಚಿದ್ದು, ಈಗಾಗಲೇ ರೈತರಿಗೆ ಯಾವುದೇ ರೀತಿ ತೊಂದರೆ ಆಗದಂತೆ ಕಬ್ಬು ಕಟಾವು ಗ್ಯಾಂಗ್ ವ್ಯವಸ್ಥೆ ಮಾಡಲಾಗಿದೆ. ರೈತರು ಇದಕ್ಕೆ ಸಂಪೂರ್ಣ ಸಹಕಾರ ನೀಡಬೇಕು. ಕಾರ್ಖಾನೆಯ ಆಡಳಿತ ಮಂಡಳಿ ಸದಸ್ಯರು, ಕಾರ್ಮಿಕರು ಸಿಬ್ಬಂದಿ, ರೈತರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಪೂರೈಸಲು ಶ್ರಮಿಸಬೇಕು ಎಂದು ಮನವಿ ಮಾಡಿದರು.ಹೊಸೂರ ಗುರು ಮಡಿವಾಳೇಶ್ವರ ಮಠದ ಗಂಗಾಧರ ಸ್ವಾಮೀಜಿ, ಧಾರ್ಮಿಕ ದತ್ತಿ ಇಲಾಖೆಯ ನಿರ್ದೇಶಕ ಡಾ.ಮಹಾಂತೇಶ ಶಾಸ್ತ್ರೀ ಆರಾದ್ರಿಮಠ, ಹುಬ್ಬಳ್ಳಿ-ಬೈಲಹೊಂಗಲ ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ, ಹುಣಸಿಕಟ್ಟಿಯ ಚನ್ನಬಸವ ದೇವರು ಸಾನಿಧ್ಯವಹಿಸಿ ಮಾತನಾಡಿ, ದಿ.ರಮೇಶ ಬಾಳೇಕುಂದರಗಿ ಅವರು ಈ ಭಾಗದ ಕಬ್ಬು ಬೆಳೆಗಾರರ ಸಮಸ್ಯೆಯನ್ನು ಅರಿತು ಕಾರ್ಖಾನೆ ಹುಟ್ಟು ಹಾಕಿದರು. ಈಗ ಅದು ಹೆಮ್ಮರವಾಗಿ ಬೆಳೆದು ಕಬ್ಬು ಬೆಳೆಗಾರರಿಗೆ ಅನ್ನದಾತನಾಗಿ ಕೆಲಸ ಮಾಡುತ್ತಿದೆ. ಬೆಳೆಗಾರರು ಗುಣಮಟ್ಟದ ಕಬ್ಬು ಪೂರೈಕೆ ಮಾಡಿ ಕಾರ್ಖಾನೆ ಪ್ರಗತಿಗೆ ಕೈ ಜೋಡಿಸಬೇಕು ಎಂದರು.ನಿರ್ದೇಶಕ ಪ್ರಕಾಶ ಮೂಗಬಸವ ಮಾತನಾಡಿ, ಕಾರ್ಖಾನೆಯ ಆಧಾರ ಸ್ತಂಭವಾಗಿದ್ದ ದಿ.ಆರ್.ಸಿ.ಬಾಳೇಕುಂದರಗಿ ಅವರ ಸ್ಮರಣೆ ಮಾಡುವುದು ಕರ್ತವ್ಯವಾಗಿದೆ. ಸಹಕಾರಿ ಕ್ಷೇತ್ರದಲ್ಲಿ ಒಂದು ಸಂಸ್ಥೆಯನ್ನು ಹುಟ್ಟು ಹಾಕುವುದು ಸುಲಭದ ಕೆಲಸವಲ್ಲ. ಖಾಸಗಿ ಕಾರ್ಖಾನೆಯ ಪೈಪೋಟಿಯ ಮಧ್ಯೆಯೂ ಈ ಸಕ್ಕರೆ ಕಾರ್ಖಾನೆ ರೈತರಿಗೆ ಒಳ್ಳೆಯ ಸೇವೆ ನೀಡುತ್ತಿದೆ. ತಮ್ಮೆಲ್ಲರ ಸಹಕಾರ ಸದಾ ಇರಬೇಕೆಂದು ಮನವಿ ಮಾಡಿದರು.ಸರ್ಕಾರ ನಿಗದಿಪಡಿಸಿದ ದರದಲ್ಲಿ ಕಬ್ಬು ಬೆಳೆಗಾರರಿಗೆ ದರ ನೀಡಬೇಕಾಗಿದ್ದು, ಕಬ್ಬು ಬೆಳೆಗಾರರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಪೂರೈಕೆ ಮಾಡಿ ಮುಂದಿನ ಯೋಜನೆಗಳಿಗೆ ಸಹಕಾರ ನೀಡಬೇಕೆಂದರು.
ಈ ಸಂದರ್ಭದಲ್ಲಿ ದಿ.ಆರ್.ಸಿ.ಬಾಳೇಕುಂದರಗಿ ಸ್ಮರಣಾರ್ಥ 2025-26ನೇ ಶೈಕ್ಷಣಿಕ ವರ್ಷದಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ಕಾರ್ಮಿಕ ಮತ್ತು ಷೇರುದಾರರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ನಂತರ ಶ್ರೀಗಳನ್ನು ಸತ್ಕರಿಸಲಾಯಿತು. ಕಾರ್ಖಾನೆ ಉಪಾಧ್ಯಕ್ಷ ಮಹಾಬಳೇಶ್ವರ ಕುಡಸೋಮಣ್ಣವರ, ನಿರ್ದೇಶಕರಾದ ಮಹಾಂತೇಶ ಮತ್ತಿಕೊಪ್ಪ, ಉಮೇಶ ಬಾಳಿ, ರಾಚಪ್ಪ ಮಟ್ಟಿ, ಕಾರ್ತಿಕ ಮಲ್ಲೂರ, ಅಶೋಕ ಯರಗೊಪ್ಪ, ಮಲ್ಲಪ್ಪ ಅಷ್ಠಗಿ, ಅನಿತಾ ಮೆಟಗುಡ್ಡ, ಕಸ್ತೂರಿ ಸೋಮನಟ್ಟಿ, ಅದೃಶ್ಯಪ್ಪ ಕೊಟಬಾಗಿ, ಅಶೋಕ ಬಾಳೇಕುಂದರಗಿ, ರಾಮಚಂದ್ರ ಕಕ್ಕಯ್ಯನವರ, ಸಣ್ಣಭೀಮಶೆಪ್ಪ ಅಂಬಡಗಟ್ಟಿ, ರಾಜಶೇಖರ ಎತ್ತಿನಮನಿ, ಶ್ರೀಶೈಲ ಶರಣಪ್ಪನವರ, ಶಿವಾನಂದ ದೂತಗುಂಡಿ, ಬಸಪ್ಪ ಬೋಳಗೌಡ್ರ, ಶ್ರೀಶೈಲ ಮೂಗಬಸವ, ಮಹಾಂತೇಶ ತುರಮರಿ, ಸಿದ್ಧನಗೌಡ ಪಾಟೀಲ ಉಪಸ್ಥಿತರಿದ್ದರು.ವ್ಯವಸ್ಥಾಪಕ ನಿರ್ದೇಶಕ ಅಶೋಕ ಬೊಮ್ಮಣ್ಣವರ ಸ್ವಾಗತಿಸಿ, ನಿರೂಪಿಸಿದರು. ಬಾಬು ಖಂಡೋಜಿ ರೈತ ಗೀತೆ ಹಾಡಿದರು. ಈ ಸಂದರ್ಭದಲ್ಲಿ ಕಾರ್ಮಿಕರು, ಸಿಬ್ಬಂದಿ, ರೈತರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.