ಸರ್ಕಾರಿ ಶಾಲಾ ಮಕ್ಕಳಿಗೆ ವಿಮಾನಯಾನ ಪ್ರವಾಸ ಭಾಗ್ಯ!

KannadaprabhaNewsNetwork |  
Published : Nov 07, 2026, 03:00 AM IST
ಸರ್ಕಾರಿ ಶಾಲಾ ಮಕ್ಕಳಿಗೆ ವಿಮಾನಯಾನ ಪ್ರವಾಸ ಭಾಗ್ಯ ಕಲ್ಪಿಸಿದ ಮುಖ್ಯಶಿಕ್ಷಕ | Kannada Prabha

ಸಾರಾಂಶ

ಗುರುಬ್ರಹ್ಮ ಗುರುವಿಷ್ಣುಃ ಗುರುರ್ದೇವೋ ಮಹೇಶ್ವರಃ! ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೂ ಗುರುವೇ ನಮಃ ಎಂದು ನಾವೆಲ್ಲ ಪಾಠ ಹೇಳುವ ಶಿಕ್ಷಕರನ್ನು ಗೌರವಿಸುತ್ತೇವೆ. ಅಳೆದು ತೂಗಿ ನೋಡಿದರೂ ಈ ಪದಗಳಿಗೆ ಒಂದು ಕೈ ಮೇಲೆ ಎಂಬಂತೆ ಇಲ್ಲಿನ ಮುಖ್ಯ ಶಿಕ್ಷಕರೊಬ್ಬರು ತಮ್ಮ 3 ತಿಂಗಳ ಸಂಬಳದ ಹಣದಲ್ಲೇ ಸರ್ಕಾರಿ ಶಾಲೆಯ 20 ಮಕ್ಕಳಿಗೆ ವಿಮಾನದಲ್ಲಿ ಶೈಕ್ಷಣಿಕ ಪ್ರವಾಸ ಮಾಡಿಸುತ್ತಿದ್ದಾರೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರಗುರುಬ್ರಹ್ಮ ಗುರುವಿಷ್ಣುಃ ಗುರುರ್ದೇವೋ ಮಹೇಶ್ವರಃ! ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೂ ಗುರುವೇ ನಮಃ ಎಂದು ನಾವೆಲ್ಲ ಪಾಠ ಹೇಳುವ ಶಿಕ್ಷಕರನ್ನು ಗೌರವಿಸುತ್ತೇವೆ. ಅಳೆದು ತೂಗಿ ನೋಡಿದರೂ ಈ ಪದಗಳಿಗೆ ಒಂದು ಕೈ ಮೇಲೆ ಎಂಬಂತೆ ಇಲ್ಲಿನ ಮುಖ್ಯ ಶಿಕ್ಷಕರೊಬ್ಬರು ತಮ್ಮ 3 ತಿಂಗಳ ಸಂಬಳದ ಹಣದಲ್ಲೇ ಸರ್ಕಾರಿ ಶಾಲೆಯ 20 ಮಕ್ಕಳಿಗೆ ವಿಮಾನದಲ್ಲಿ ಶೈಕ್ಷಣಿಕ ಪ್ರವಾಸ ಮಾಡಿಸುತ್ತಿದ್ದಾರೆ.

ಮಕ್ಕಳಿಗೆ ವಿಮಾನ ಭಾಗ್ಯ ಕಲ್ಪಿಸಿದ ಶಿಕ್ಷಕ:

ಕಳೆದ 30 ವರ್ಷಗಳಿಂದ ಸರ್ಕಾರಿ ಶಾಲೆಯ ಶಿಕ್ಷಕರಾಗಿ ಪಾಠ ಮಾಡುತ್ತಿರುವ ವಿಠ್ಠಲ ಭೈರಗೊಂಡ ರವರು ಪ್ರಸ್ತುತವಾಗಿ ಚಡಚಣ ತಾಲೂಕಿನ ಹಳೆ ದೂಳಖೇಡ ಶಾಲೆಯ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಶಾಲೆಯ 6 ಹಾಗೂ 7ನೇ ತರಗತಿಯ 12ಹೆಣ್ಣು ಹಾಗೂ 8 ಗಂಡು ಸೇರಿ ಒಟ್ಟು 20 ಬಡ ಮಕ್ಕಳಿಗೆ ಉಚಿತವಾಗಿ ನವ್ಹೆಂಬರ್‌ 13ರಿಂದ 18ರ ವರೆಗೆ ಶಾಲಾ ಶೈಕ್ಷಣಿಕ ಪ್ರವಾಸ ಮಾಡಿಸುತ್ತಿದ್ದಾರೆ. ಸೋಲಾಪುರದಿಂದ ಪುನಾ ವರೆಗೆ ರೈಲಿನಲ್ಲಿ ಹಾಗೂ ಇಂದೋರ್‌ನಿಂದ ದೆಹಲಿಗೆ ವಿಮಾನದಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಅದಕ್ಕಾಗಿಯೇ ಸೆಪ್ಟೆಂಬರ್‌ ತಿಂಗಳಿನಲ್ಲಿಯೇ ಇಂಡಿಗೋ ಏರಲೈನ್ಸ್ ನಲ್ಲಿ ಟಿಕೆಟ್ ಬುಕ್ ಮಾಡಿಸಿದ್ದು, ಟಿಕೆಟ್‌ಗಾಗಿಯೇ 2ಲಕ್ಷ ರೂಪಾಯಿ ಖರ್ಚಾಗಿದ್ದು, ಪ್ರವಾಸ ಮುಗಿಯುವುದರಲ್ಲಿ ಇನ್ನೂ 2 ಲಕ್ಷ ರೂ ಖರ್ಚಾಗಬಹುದು ಎನ್ನುತ್ತಾರೆ ಶಿಕ್ಷಕ.ಯಾರು ಈ ಮಾದರಿ ಶಿಕ್ಷಕ:

ಜಿಲ್ಲೆಯ ಚಡಚಣ ತಾಲೂಕಿನ ಹಳೆ ದೂಳಖೇಡ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ವಿಠ್ಠಲ ಭೈರಗೊಂಡ ರವರು ಸುಮಾರು ₹2-3 ಲಕ್ಷ ಖರ್ಚು ಮಾಡಿ ತಮ್ಮ ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನದಲ್ಲಿ ದೆಹಲಿಗೆ ಶೈಕ್ಷಣಿಕ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ. ಇಬ್ಬರು ಸಹಶಿಕ್ಷಕರೊಂದಿಗೆ ಪ್ರವಾಸಕ್ಕೆ ತೆರಳುತ್ತಿರುವ ವಿಠ್ಠಲ ಭೈರಗೊಂಡ, ಸರ್ಕಾರಿ ಶಾಲಾ ಮಕ್ಕಳಿಗೆ ವಿಮಾನಯಾನ ಭಾಗ್ಯ ಕಲ್ಪಿಸಿದ್ದಾರೆ.

ಯಾವಾಗ ಪ್ರವಾಸ ಆರಂಭ: ನ.13ರಂದು ಸೋಲಾಪೂರ ಪುಣೆ ಮಾರ್ಗವಾಗಿ ದೆಹಲಿಗೆ ತೆರಳುವ ಪ್ರವಾಸ ತಂಡ ಸುಮಾರು 4 ದಿನಗಳ ವರೆಗೆ ಶೈಕ್ಷಣಿಕ ಪ್ರವಾಸದಲ್ಲಿರುತ್ತಾರೆ. ಸರ್ಕಾರಿ ಶಾಲಾ ಮಕ್ಕಳಿಗೆ ವಿಮಾನ ಪ್ರಯಾಣದ ಮೂಲಕ ಶೈಕ್ಷಣಿಕ ಪ್ರವಾಸ ಮಾಡಿಸುತ್ತಿರುವ ಮಾದರಿ ಶಿಕ್ಷಕ ವಿಠ್ಠಲ ಭೈರಗೊಂಡ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಪಾಲಕರು, ಸಾರ್ವಜನಿಕರು ಹರ್ಷ ವ್ಯಕ್ತ ಪಡಿಸಿದ್ದಾರೆ.ಎಲ್ಲೆಲ್ಲಿ ಟೂರ್‌: ನ.13ರಿಂದ ಪ್ರಾರಂಭವಾಗುವ ಶೈಕ್ಷಣಿಕ ಪ್ರವಾಸವೂ ದೆಹಲಿಯ ಪ್ರೇಕ್ಷಣೀಯ ಸ್ಥಳಗಳಾದ ಕುತೂಬಮಿನಾರ್‌, ರಾಜಘಾಟ, ಕೆಂಪುಕೋಟೆ, ಇಂದಿರಾ ಪ್ಯಾಲೇಸ್, ಇಂಡಿಯಾ ಗೇಟ್ ಸೇರಿದಂತೆ ಇತರೆ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿ ಮಕ್ಕಳ ಕಲಿಕೆ ಇಮ್ಮಡಿಗೊಳಿಸಲಿದ್ದಾರೆ. ನಂತರ ದೆಹಲಿ ಸುತ್ತಮುತ್ತಲಿನ ಆಗ್ರಾದ ತಾಜಮಹಲ್, ಯಮುನಾ ನದಿ, ಪತೇಪೂರ ಸಿಕ್ರಿ, ಮಥೂರಾ ಬೃಂದಾವನ ಸೇರಿದಂತೆ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಲಿದ್ದಾರೆ.

ಎಲ್ಲರಂತೆ ನಮ್ಮ ಮಕ್ಕಳಿಗೂ ವಿಮಾನದಲ್ಲಿ ಕುಳಿತುಕೊಳ್ಳುವ ಆಸೆಯಿರುತ್ತದೆ. ಹಾಗಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ವಿಮಾನದಲ್ಲಿ ಶೈಕ್ಷಣಿಕ ಪ್ರವಾಸ ಮಾಡಬೇಕೆಂಬ ಸದುದ್ದೇಶದಿಂದ ಈ ಕಾರ್ಯ ಕೈಕೊಂಡಿರುವೆ. ಇದಕ್ಕೆ ಸಹಶಿಕ್ಷಕರು, ಅಧಿಕಾರಿಗಳು, ಪಾಲಕರ ಅನುಮತಿ ಪಡೆಯಲಾಗಿದೆ.

-ವಿಠ್ಠಲ ಭೈರಗೊಂಡ, ಮುಖ್ಯಗುರುಗಳು, ಸರ್ಕಾರಿ ಪ್ರಾಥಮಿಕ ಶಾಲೆ ಧೂಳಖೇಡ.ಶಾಲಾ ಶಿಕ್ಷಕರು, ಪಾಲಕರು ಹಾಗೂ ಎಸ್‌ಡಿಎಂಸಿಯವರು ಬಿಇಓ ಕಚೇರಿಗೆ ಮನವಿ ಮಾಡಿಕೊಂಡ ಹಿನ್ನೆಲೆ ವಿಮಾನ ಪ್ರವಾಸಕ್ಕೆ ಅನುಮತಿಸಲಾಗಿದೆ. ಚಡಚಣ ತಾಲೂಕಿನ ಹಳೆ ದೂಳಖೇಡ ಶಾಲೆಯ ಮುಖ್ಯಗುರು ವಿಠ್ಠಲ ಭೈರಗೊಂಡ ತಮ್ಮ ಸ್ವಂತ ಖರ್ಚಿನಲ್ಲಿ ಸರ್ಕಾರಿ ಶಾಲಾ ಮಕ್ಕಳನ್ನು ವಿಮಾನದ ಮೂಲಕ ಶೈಕ್ಷಣಿಕ ಪ್ರವಾಸ ಮಾಡಿಸುತ್ತಿರುವುದು ಶ್ಲಾಘನೀಯಗಿದೆ. ಜಿಲ್ಲೆಯ ಶಿಕ್ಷಕರು ಇವರ ಕಾರ್ಯವನ್ನು ಮೆಚ್ಚಿಕೊಂಡಿದ್ದು, ಇಂತಹ ಕಾರ್ಯ ಸಮಾಜದಲ್ಲಿ ಹೆಚ್ಚಾಗಬೇಕು. ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಎಲ್ಲರೂ ಕೈಜೋಡಿಸಬೇಕು.

-ಎಚ್.ನಾಗೇಂದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಚಡಚಣ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬಿಗೆ ಸ್ಥಳೀಯ ರಿಕವರಿ ಆಧಾರದಲ್ಲಿ ನ್ಯಾಯಯುತ ಬೆಲೆ ನೀಡಲು ಆಗ್ರಹ
ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದರೆ ಸೂಕ್ತ ಕ್ರಮ