ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಅಧಿಕ ಉಷ್ಣಾಂಶಕ್ಕೆ ಸಂಬಂಧಿಸಿದಂತೆ ಆರೋಗ್ಯ ರಕ್ಷಿಸಿಕೊಳ್ಳುವುದರ ಕುರಿತು ಹೇಳಿಕೆ ಮೂಲಕ ಸಲಹೆ ನೀಡಿರುವ ಅವರು, ಬಿಸಿಲಿನ ತಾಪದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸೂಕ್ತ ಮುಂಜಾಗ್ರತಾ ಕ್ರಮ ವಹಿಸಬೇಕು. ಜತೆಗೆ ಬೇಸಿಗೆ ಎದುರಿಸಲು ಆಯುಷ್ ಉಪಾಯಗಳನ್ನು ಅಳವಡಿಸಿಕೊಂಡು, ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದಿದ್ದಾರೆ.
ವಿಶೇಷವಾಗಿ ಹಿರಿಯ ನಾಗರೀಕರು, ಮಕ್ಕಳು ತೀವ್ರ ಬಿಸಿಲಿನ ತಾಪಕ್ಕೆ ಬರಬಾರದು. ಬಿಸಿಲಿನ ತಾಪದಿಂದ ಚರ್ಮ ಕಪ್ಪಾಗುವುದು, ಅಲರ್ಜಿ, ತುಟಿ ಒಣಗುವುದು, ಮೂಗಿನಲ್ಲಿ ರಕ್ತಸ್ರಾವ, ದೇಹದ ಉಷ್ಣಾಂಶದಲ್ಲಿ ಏರಿಕೆ, ಸುಸ್ತು, ತಲೆ ಸುತ್ತುವುದು, ಎಲೆಕ್ಟ್ರೋಲೈಟ್‍ಗಳಲ್ಲಿ ಏರುಪೇರಿನಂತಹ ಲಕ್ಷಣಗಳು ಕಂಡುಬರುತ್ತವೆ. ನೀರಿನ ಮೂಲದಿಂದ ಹರಡುವ ಸಾಂಕ್ರಾಮಿಕ ರೋಗಗಳೂ ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಇವುಗಳನ್ನು ತಡೆಗಟ್ಟಲು ಸಾರ್ವಜನಿಕರು ವಿಶೇಷ ಜಾಗ್ರತೆ ವಹಿಸಬೇಕು ಎಂದಿದ್ದಾರೆ.ತೀವ್ರ ಬಿಸಿಲಿದ್ದಾಗ ಮನೆಯಿಂದ ಹೊರಗಡೆ ಹೋಗಬೇಡಿ. ಬಿಸಿಲಿನಿಂದ ರಕ್ಷಿಸಿಕೊಳ್ಳಲು ಮರದ ನೆರಳನ್ನು ಆಶ್ರಯಿಸಿ. ಹತ್ತಿಯ ಬಟ್ಟೆಗಳನ್ನೇ ಧರಿಸಿ, ಮೇಲಿಂದ ಮೇಲೆ ನೀರನ್ನು ಕುಡಿಯುತ್ತಿರಿ. ಮನೆಯಿಂದ ಹೊರಡುವಾಗ ಕಡ್ಡಾಯವಾಗಿ ಶುದ್ಧನೀರನ್ನು ಜೊತೆಗೆ ತೆಗೆದುಕೊಂಡು ಹೋಗಿ. ತಂಪುಪಾನೀಯ ಐಸ್‌ಕ್ರೀಮ್ ನಂತಹ ಕೃತಕ ತಂಪು ವಸ್ತುಗಳಿಗಿಂತ ನೈಸರ್ಗಿಕವಾದ ಹಣ್ಣಿನ ರಸ, ಕಬ್ಬಿನಹಾಲು, ಎಳನೀರು ಹಾಗೂ ಶರಬತ್ತುಗಳನ್ನು ಸೇವಿಸಬೇಕು. ಇವುಗಳಿಂದ ದೇಹಕ್ಕೆ ಪೋಷಕಾಂಶವು ದೊರೆಯುತ್ತದೆ ಹಾಗೂ ದೇಹಕ್ಕೂ ತಂಪು.
ಮನೆಯಿಂದ ಹೊರಗೆ ಹೋಗುವಾಗ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಅವಶ್ಯವಿರುವ ಛತ್ರಿ, ತಂಪು ಕನ್ನಡಕ, ವಸ್ತ್ರಗಳನ್ನು ತೆಗೆದುಕೊಂಡು ಹೋಗಿ. ಶ್ರಮದಾಯಕ ಕೆಲಸಗಳನ್ನು ತೀವ್ರ ಬಿಸಿಲ ತಾಪವಿದ್ದಾಗ ಮಾಡಬಾರದು. ಇವೆಲ್ಲಾ ಮುಂಜಾಗ್ರತೆ ಕ್ರಮಗಳನ್ನು ವಹಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು. ಬಿಸಿಲಿನಿಂದ ರಕ್ಷಣೆ, ಬೇಸಿಗೆ ಕಾಲದಲ್ಲಿ ಅನುಸರಿಸಬೇಕಾದ ಜೀವನಶೈಲಿ, ಆಹಾರ ವಿಹಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಆಯುಷ್ ಚಿಕಿತ್ಸಾಲಯಗಳಿಗೆ ಭೇಟಿ ನೀಡಬಹುದಾಗಿದೆ.
ವರ್ಷದಿಂದ ವರ್ಷಕ್ಕೆ ಬಿಸಿಲಿನ ತಾಪಮಾನ ಹೆಚ್ಚುತ್ತಿರುವುದು ತೀವ್ರ ಕಳವಳಕಾರಿ, ಸಾರ್ವಜನಿಕರು ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಿ ಬೇಸಿಗೆಕಾಲದ ಕಾಯಿಲೆಗಳು ಹಾಗೂ ಉಷ್ಣ ಹವಾಮಾನದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಹಾಗೂ ವಾತಾವರಣದ ಉಷ್ಣತೆಯನ್ನು ತಗ್ಗಿಸಲು ಈಗಿನಿಂದಲೇ ಎಷ್ಟು ಸಾಧ್ಯವೂ ಅಷ್ಟು ಗಿಡಮರಗಳನ್ನು ಬೆಳೆಸಲು ಮುಂದಾಗಬೇಕು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ಎಸ್.ನಾಗಸಮುದ್ರ ಮನವಿ ಮಾಡಿದ್ದಾರೆ.