ಭದ್ರಾವತಿ: ಜನನ-ಮರಣ ನಡುವಿನ ಬದುಕಿನ ಸಾಹಿತ್ಯವೇ ಜಾನಪದವಾಗಿದ್ದು, ಇದು ೬೪ ವಿದ್ಯೆಗಳ ತಾಯಿಯಾಗಿದೆ. ಜಾನಪದ ಕಲೆಗಳಲ್ಲಿ ಅದ್ಭುತ ಶಕ್ತಿ ಅಡಗಿವೆ. ಇಂತಹ ಜಾನಪದ ಕಲೆಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ಆಧುನಿಕ ಸರ್ವಜ್ಞ ಯುಗಧರ್ಮ ರಾಮಣ್ಣ ಹೇಳಿದರು.
ಕರ್ನಾಟಕ ಜಾನಪದ ಪರಿಷತ್ ತಾಲೂಕು ಶಾಖೆ, ಹಿರಿಯೂರು ಹೋಬಳಿ ಘಟಕ ನೇತೃತ್ವದಲ್ಲಿ ಮೊದಲ ಬಾರಿಗೆ ತಾಲೂಕಿನ ಗೊಂದಿ ಗ್ರಾಮದ ಶ್ರೀ ಪಾಂಡುರಂಗ ಸಾಧಕಾಶ್ರಮದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಜಾನಪದ ಸಮ್ಮೇಳನ ಹಾಗೂ ಜಾನಪದ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಬದುಕಿನಲ್ಲಿ ಅನುಭವಿಸಿರುವ ನೋವು-ನಲಿವು, ನಡೆ-ನುಡಿ, ಆಚಾರ-ವಿಚಾರ, ಸಂಸ್ಕೃತಿ-ಸಂಸ್ಕಾರ, ಬದುಕು-ಬವಣೆ ಒಟ್ಟಾರೆ ಇವುಗಳ ಸಾಹಿತ್ಯವೇ ಜಾನಪದವಾಗಿದ್ದು, ಹುಟ್ಟಿನಿಂದ ಸಾವಿನವರೆಗೂ ಜೊತೆ ಜೊತೆಗೆ ಬಂದಿದೆ. ನಮಗೆ ಸಾವಿದೆ, ಆದರೆ ಜಾನಪದಕ್ಕೆ ಸಾವಿಲ್ಲ. ಜಾನಪದ ಈ ಭೂಮಿ ಮೇಲೆ ಎಂದಿಗೂ ಶಾಶ್ವತವಾಗಿ ಉಳಿಯಲಿದೆ. ಇಂತಹ ಜಾನಪದ ಕಲೆಗಳನ್ನು ಮೈಗೂಡಿಸಿಕೊಂಡಾಗ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದರು.
ಹಿರಿಯ ಮುಖಂಡ, ಉದ್ಯಮಿ ಬಿ.ಕೆ ಜಗನ್ನಾಥ್ ಮಾತನಾಡಿ, ಇಂದಿನವರಿಗೆ ಜಾನಪದ ಕುರಿತು ಅರಿವಿಲ್ಲ. ನಮ್ಮ ಪೂರ್ವಿಕರಿಂದ ಬಂದಿರುವ ಜಾನಪದ ಕಲೆಗಳು ಬದುಕಿನ ಅನುಭವದ ಸಾರಗಳಾಗಿವೆ. ನಾವುಗಳು ನಮ್ಮ ಮಕ್ಕಳಿಗೆ ಜಾನಪದ ಕಲೆಗಳನ್ನು ತಿಳಿಸಿಕೊಡಬೇಕಾಗಿದೆ ಎಂದರು.ಇದೇ ವೇಳೆ ಕಲಾವಿದರಾದ ಲಕ್ಷ್ಮಮ್ಮ(ಸೋಬಾನೆ ಪದ), ಭಾಗ್ಯಬಾಯಿ (ಲಂಬಾಣಿ ನೃತ್ಯ), ವೆಂಕಟರಮಣ (ತಮಟೆ ವಾದನ), ಕಣ್ಣನ್ (ಭಜನೆ ಪದ), ಜಂಬೂಸ್ವಾಮಿ (ಜಾನಪದ ಗಾಯನ), ಶಿವಾಜಿ ರಾವ್ (ಡೊಳ್ಳು ಕುಣಿತ) ಮತ್ತು ಹನುಮಂತ್‌ರಾವ್ (ರಂಗಕಲೆ) ಅವರುಗಳಿಗೆ ಜಾನಪದ ಸಿರಿ ಪ್ರಶಸ್ತಿ ನೀಡಲಾಯಿತು.
ಗೊಂದಿ ಶ್ರೀ ಪಾಂಡುರಂಗ ಸಾಧಕಾಶ್ರಮದ ಮಾತಾ ಮುಕ್ತಾನಂದಮಯಿ ದಿವ್ಯ ಸಾನಿಧ್ಯವಹಿಸಿದ್ದರು. ಪರಿಷತ್ ತಾಲೂಕು ಶಾಖೆ ಅಧ್ಯಕ್ಷ ಎಂ.ಆರ್ ರೇವಣಪ್ಪ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮಕ್ಕೂ ಮುನ್ನ ಗ್ರಾಮದಲ್ಲಿ ಜಾನಪದ ಮೆರವಣಿಗೆ ನಡೆಸಲಾಯಿತು. ಪರಿಷತ್ ತಾಲೂಕು ಶಾಖೆಯ ಸಂಘಟನಾ ಕಾರ್ಯದರ್ಶಿ ಬಿ.ಎಚ್ ಪ್ರಶಾಂತ್, ಕೋಶಾಧ್ಯಕ್ಷೆ ಲತಾ ಪಾಂಡುರಂಗೇಗೌಡ, ಸಲಹಾ ಸಮಿತಿ ಸದಸ್ಯರಾದ ಭಾಗ್ಯ ಮಂಜುನಾಥ್, ಚಂದ್ರಶೇಖರ್ ಚಕ್ರಸಾಲಿ, ಶಿವರಾಜ್, ಸಂಚಾಲಕ ಸಂಪತ್‌ಕುಮಾರ್ ಸೇರಿದಂತೆ ತಾಲೂಕು ನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಸಮ್ಮೇಳನಾಧ್ಯಕ್ಷ ಲಕ್ಷ್ಮಣ್‌ರಾವ್ ಬೋರಾತ್, ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್, ಹಿರಿಯೂರು ಹೋಬಳಿ ಘಟಕ ಅಧ್ಯಕ್ಷ ಜಯರಾಂ ಗೊಂದಿ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ನಾಗೇಂದ್ರಪ್ಪ, ಬಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಶಿವಕುಮಾರ್, ಅರಳಿಕೊಪ್ಪ ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ, ಸದಸ್ಯರಾದ ಬಿ.ಸುರೇಶ್, ಎಸ್.ರಾಜು, ಕಸಾಪ ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ ಇತರರು ಇದ್ದರು.