ಕನ್ನಡಪ್ರಭ ವಾರ್ತೆ ಮೈಸೂರು
ಪ್ರೊ. ಮುಜಾಫರ್ ಅಸ್ಸಾದಿ ಅವರು ಮೈಸೂರು ವಿಶ್ವವಿದ್ಯಾನಿಲಯದ ಗುರುತರ ಪ್ರಾಧ್ಯಾಪಕರಾಗಿದ್ದವರು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ತಿಳಿಸಿದರು.ನಗರದ ಮಾನಸ ಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಮೈಸೂರು ವಿವಿ ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ಅಧ್ಯಯನ ವಿಭಾಗವು ಸೋಮವಾರ ಆಯೋಜಿಸಿದ್ದ ಪ್ರೊ. ಮುಜಾಫರ್ ಅಸ್ಸಾದಿ ನುಡಿ ನಮನ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಅಸ್ಸಾದಿ ಅವರು ಖ್ಯಾತ ಶಿಕ್ಷಣ ತಜ್ಞ,ರಾಜಕೀಯ ವಿಜ್ಞಾನಿ, ಸಾಮಾಜಿಕ ಚಿಂತಕರಾಗಿದ್ದರು. 300 ಹೆಚ್ಚು ಸಂಶೋಧನಾ ಲೇಖನಗಳು, 14 ವಿಜೇತ ಕೃತಿಗಳನ್ನು ರಚಿಸಿದ್ದಾರೆ. ಅವರು ರಾಜಕೀಯ, ಸಾಮಾಜಿಕ ನ್ಯಾಯ, ದಲಿತ, ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಹೀಗಾಗಿ, ಈ ನಿಟ್ಟಿನಲ್ಲಿ ಅವರು ಹಲವಾರು ಕೆಲಸಗಳನ್ನು ಸರ್ಕಾರದ ಮಟ್ಟದವರೆಗೂ ಮಾಡಿದ್ದಾರೆ. ಅವುಗಳನ್ನು ಕಾರ್ಯ ರೂಪಕ್ಕೆ ತರುವ ನಿಟ್ಟಿನಲ್ಲಿ ಮತ್ತು ಕೊಡುಗೆಗಳನ್ನು ನೆನಪಿಸುವ ಕಾರ್ಯವನ್ನು ವಿದ್ಯಾರ್ಥಿಗಳು ಮಾಡಬೇಕು. ಇದಕ್ಕೆ ಅವರ ಅಧ್ಯಯನ ಕಡೆಗೆ ಹೆಚ್ಚಿನ ಗಮನಹರಿಸಬೇಕು ಎಂದು ಅವರು ಸಲಹೆ ನೀಡಿದರು.ದಲಿತ ದೌರ್ಜನ್ಯ ಮತ್ತು ರೈತರ ಆತ್ಮಹತ್ಯೆಗಳ ಕಾರ್ಯಕ್ರಮದಲ್ಲಿ ಅವರು ಮಾಡಿದ ಭಾಷಣ ಪ್ರಭಾವ ಬೀರಿತು. ರೈತರ ಮೇಲೆ ಅಪಾರ ಕಾಳಜಿ ಹೊಂದಿದ್ದರು. ಕಷ್ಟದಲ್ಲಿರುವ ರೈತರಿಗೆ ಸಹಾಯ ಮಾಡಲು ಸರ್ಕಾರಕ್ಕೆ ಸಲಹೆ ಕೊಡುತ್ತಿದ್ದರು. ಅಸ್ಸಾದಿ ಅವರು ನಮ್ಮನ್ನು ಅಗಲಿರಬಹುದು. ಆದರೆ, ಅವರು ಮಾಡಿರುವ ಕೆಲಸಗಳು ಸದಾ ನಮ್ಮೊಂದಿಗೆ ಇರಲಿವೆ ಎಂದು ಅವರು ಹೇಳಿದರು.
ನಮ್ಮ ಮಲೆನಾಡ ಬಗ್ಗೆ ಕರಾವಳಿ ಕನ್ನಡದಲ್ಲಿ ಮಾತನಾಡುತ್ತಿದ್ದೆವು. ಕನ್ನಡ ಪದಪುಂಜಗಳೇ ಅವರಲಿತ್ತು. ಕೆಲವು ಪದಗಳನ್ನು ಪುಸ್ತಕಗಳಲ್ಲಿ ಬಳಸಿದ್ದಾರೆ. ಅಸ್ಸಾದಿ ಅವರು ಯಾವಾಗಲೂ ನಗುತ್ತಿದ್ದರು. ಬೇಸರ ಮಾಡಿಕೊಂಡಿದ್ದನ್ನು ಕಂಡಿರಲಿಲ್ಲ. ಎಲ್ಲರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದರು. ಅಧ್ಯಯನ ಚಟುವಟಿಕೆಯಲ್ಲಿ ಸಾಮಾಜಿಕ ನ್ಯಾಯ, ಜಾತಿ, ರಾಜಕೀಯ ಭಾಗಗಳು ಭೌತಿಕ ಸಾಮಾಜಿಕ ಕೊಡುಗೆ ನೆನಪಾಗಿ ಇರಲಿವೆ ಎಂದರು.ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ಅಧ್ಯಯನ ವಿಭಾಗದ ಅಧ್ಯಕ್ಷ ಡಾ. ಕೃಷ್ಣ ಹೊಂಬಾಳ್, ಪ್ರೊ. ಶಬೀನಾ, ಪ್ರೊ.ಜಿ.ಟಿ. ರಾಮಚಂದ್ರಪ್ಪ, ಸಂತೋಷ್, ಟಿ. ರಾಹುಲ್, ಮನು, ಯೋಗೀಶ್ ಮೊದಲಾದವರು ಇದ್ದರು.
ವಿದ್ಯಾರ್ಥಿಗಳು ಪ್ರೊ. ಅಸ್ಸಾದಿ ಅವರನ್ನು ಓದಬೇಕು. 30 ವರ್ಷದ ಸಾಧನೆಗಳನ್ನು ವಿಶ್ಲೇಷಣೆ ಮಾಡಬೇಕು. ಮೈಸೂರು ವಿವಿಯಲ್ಲಿ ಪ್ರಾಧ್ಯಾಪಕರ ಕೊರತೆ ಆಗುತ್ತಿದೆ. ಇದು ವಿವಿಯ ತಲೆ ನೋವಾಗಿದೆ. ರಾಜ್ಯಶಾಸ್ತ್ರ ವಿಭಾಗದಲ್ಲಿ ಪ್ರೊ. ಕೃಷ್ಣ ಹೊಂಬಾಳ್ ಏಕೈಕ ಪ್ರಾಧ್ಯಾಪಕರಾಗಿದ್ದಾರೆ.- ಪ್ರೊ.ಎನ್.ಕೆ. ಲೋಕನಾಥ್, ಕುಲಪತಿ, ಮೈಸೂರು ವಿವಿ
ಪ್ರೊ. ಮುಜಾಫರ್ ಅಸ್ಸಾದಿ ಅವರ ಜ್ಞಾನದ ಆಳ-ಅಗಲ ಯಾವುದನ್ನು ಅರಿಯದ ಮುಸ್ಲಿಂ ಸಮುದಾಯದಲ್ಲಿ ಬಾಳುತ್ತಿದ್ದರು. ಅಸ್ಸಾದಿ ಅವರ ನಿಧನ ಮುಸ್ಲಿಂ ಸಮುದಾಯಕ್ಕೆ ಆದ ದೊಡ್ಡ ಅಘಾತ. ಈಗಲಾದರೂ ಮುಸ್ಲಿಂ ಸಮುದಾಯದ ಅವರ ಪುಸ್ತಕಗಳನ್ನು ಓದಬೇಕು.- ಪ್ರೊ. ಶಬೀನಾ