ಮಳೆಗಾಲಕ್ಕೆ ಮುನ್ನ ಕಾಮಗಾರಿ ಮುಗಿಸಿ: ತುಷಾರ್‌

KannadaprabhaNewsNetwork |  
Published : Apr 11, 2026, 01:45 AM IST
GBA

ಸಾರಾಂಶ

ನಗರದ ರಾಜಕಾಲುವೆಗಳಲ್ಲಿ ಹೂಳೆತ್ತುವ ಮೊದಲು ಡ್ರೋನ್ ಮೂಲಕ ಸಮೀಕ್ಷೆ ನಡೆಸಿ ಸೂಕ್ತ ರೀತಿಯಲ್ಲಿ ಯೋಜಿಸಿ ಕಾಮಗಾರಿಗಳನ್ನು ನಡೆಸುವಂತೆ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಜಿಬಿಎ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

 ಬೆಂಗಳೂರು :  ನಗರದ ರಾಜಕಾಲುವೆಗಳಲ್ಲಿ ಹೂಳೆತ್ತುವ ಮೊದಲು ಡ್ರೋನ್ ಮೂಲಕ ಸಮೀಕ್ಷೆ ನಡೆಸಿ ಸೂಕ್ತ ರೀತಿಯಲ್ಲಿ ಯೋಜಿಸಿ ಕಾಮಗಾರಿಗಳನ್ನು ನಡೆಸುವಂತೆ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಜಿಬಿಎ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪೂರ್ವ ಮುಂಗಾರು ಮಳೆ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಜಲಾವೃತಗೊಳ್ಳುವ ನಾಗವಾರ, ಯಲಹಂಕ ಸೇರಿ ವಿವಿಧ ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿದ ನಂತರ ಅಧಿಕಾರಿಗಳ ಜೊತೆ ಸಭೆ ನಡೆಸಿದರು.

ಪ್ರಮುಖ ರಾಜಕಾಲುವೆಗಳಲ್ಲಿ ಆದ್ಯತೆ ಮೇರೆಗೆ ಹೂಳೆತ್ತುವ ಕೆಲಸ ಆಗಬೇಕು. ಡ್ರೋನ್ ಮೂಲಕ ಪರಿಶೀಲಿಸಿ ನೀರು ನಿಲ್ಲುವ ಸ್ಥಳಗಳನ್ನು ಗುರುತಿಸಿ ದುರಸ್ತಿ ಕಾರ್ಯ ಕೈಗೊಳ್ಳಬೇಕು ನೀರು ಹರಿಯುವ ಜಾಗಗಳಲ್ಲಿ ಕಸವನ್ನು ತೆರವುಗೊಳಿಸಿ ಸ್ವಚ್ಛವಾಗಿಸಬೇಕು. ಆಯಾ ನಗರ ಪಾಲಿಕೆಗಳ ಹಿರಿಯ ಅಧಿಕಾರಿಗಳು ಹಾಗೂ ಸಂಚಾರ ಪೊಲೀಸ್ ಅಧಿಕಾರಿಗಳು ಪ್ರವಾಹ ಪೀಡಿತ ಪ್ರದೇಶಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ ಸಮಸ್ಯೆಗಳನ್ನು ಬಗೆಹರಿಸುವಂತೆ ಅವರು ಸೂಚಿಸಿದರು.

ನಿಯಂತ್ರಣ ಕೊಠಡಿ ಸ್ಥಾಪನೆ:

ನಗರ ಪಾಲಿಕೆ ನಿಯಂತ್ರಣ ಕೊಠಡಿಗಳಿಗೆ ಬೆಸ್ಕಾಂ ಹಾಗೂ ಜಲಮಂಡಳಿ ಅಧಿಕಾರಿಗಳನ್ನು ನಿಯೋಜಿಸಬೇಕು. ಎಸ್‌ಡಿಆರ್‌ಎಫ್ ಹಾಗೂ ಎನ್‌ಡಿಆರ್‌ಎಫ್ ಅಧಿಕಾರಿಗಳ ಪಟ್ಟಿ ಸಿದ್ಧಪಡಿಸಬೇಕು. ಅಗತ್ಯವಿರುವ ಎಲ್ಲ ಉಪಕರಣಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಜಿಬಿಎ ವ್ಯಾಪ್ತಿಯಲ್ಲಿ 75 ವಿಭಾಗಗಳು ಹಾಗೂ 150 ಉಪ ವಿಭಾಗಗಳು ಇವೆ. 20 ಅಗ್ನಿಶಾಮಕ ಠಾಣೆಗಳು ಹಾಗೂ ಎಸ್‌ಡಿಆರ್‌ಎಫ್‌ನ ಒಂದು ಕಂಪನಿ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ ಜಲಮಂಡಳಿ, ಮೆಟ್ರೋ, ರೈಲ್ವೆ, ಕೆ-ರೈಡ್ ಜೊತೆ ಸಮನ್ವಯ ಸಾಧಿಸಿ ವಾಟ್ಸಪ್ ಗುಂಪುಗಳನ್ನು ರಚಿಸಿಕೊಳ್ಳಬೇಕು. ನಗರ ಪಾಲಿಕೆಗಳ ಆಯುಕ್ತರು ಅಗ್ನಿಶಾಮಕ ತಂಡಗಳೊಂದಿಗೆ ಸಂಪರ್ಕದಲ್ಲಿದ್ದು, ವಿಪತ್ತು ನಿರ್ವಹಣೆಯಲ್ಲಿ ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ತುಷಾರ್ ಗಿರಿನಾಥ್ ಸೂಚಿಸಿದರು.

ಈ ವೇಳೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಬಿಡಿಎ ಆಯುಕ್ತ ಮಣಿವಣ್ಣನ್ ಮತ್ತು ಇತರ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಸಿಲ್ಕ್ ಬೋರ್ಡ್ ಜಂಕ್ಷನ್‌ ಕೆಲಸ ಮಾಸಾಂತ್ಯದೊಳಗೆ ಮುಗಿಸಿ

ಸಿಲ್ಕ್ ಬೋರ್ಡ್ ಜಂಕ್ಷನ್‌ಗೆ ಭೇಟಿ ನೀಡಿದ ತುಷಾರ್ ಗಿರಿನಾಥ್, ಮಳೆಗಾಲದಲ್ಲಿ ಈ ಜಂಕ್ಷನ್‌ನಲ್ಲಿ ಜಲಾವೃತ ಆಗುವುದನ್ನು ತಪ್ಪಿಸಲು 3.5 ಮೀಟರ್ ಎತ್ತರದ ಗ್ರೇಟಿಂಗ್ಸ್ ಅಳವಡಿಸುವ ಮೊದಲ ಹಂತದ ಕಾಮಗಾರಿಯನ್ನು ಈ ತಿಂಗಳ ಅಂತ್ಯದೊಳಗಾಗಿ ಪೂರ್ಣಗೊಳಿಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಬೇಕು. ಉಳಿದ ಕೆಲಸ ಮೇ ಅಂತ್ಯದೊಳಗಾಗಿ ಪೂರ್ಣಗೊಳಿಸಬೇಕು ಎಂದರು.

ಪ್ರವಾಹವಾಗುವ ಪ್ರದೇಶಗಳಿಗೆ ಭೇಟಿ

ಕೇಂದ್ರೀಯ ವಿಹಾರ್ ಹಾಗೂ ಕೋಗಿಲು ಜಂಕ್ಷನ್, ಟಾಟಾನಗರ, ಹೆಬ್ಬಾಳ ಕೆರೆ ಹೂಳೆತ್ತುವ ಕಾಮಗಾರಿ, ಹೆಬ್ಬಾಳ ಜಂಕ್ಷನ್, ಮಾನ್ಯತಾ ಟೆಕ್ ಪಾರ್ಕ್, ವೀರಣ್ಣಪಾಳ್ಯ, ನಾಗವಾರ ಜಂಕ್ಷನ್, ಹೆಚ್.ಬಿ.ಆರ್ ಲೇಔಟ್, ಗೆದ್ದಲಹಳ್ಳಿಯಲ್ಲಿ ಪ್ರವಾಹ ತಡೆಗಟ್ಟಲು ಕೈಗೊಂಡಿರುವ ಕಾಮಗಾರಿಗಳನ್ನು ಪರಿಶೀಲಿಸಿದರು. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ತುಷಾರ್ ಗಿರಿನಾಥ್ ನಿರ್ದೇಶನ ನೀಡಿದರು.

ಮಳೆಯಿಂದ ಜಲಾವೃತವಾಗುವ ಪ್ರದೇಶಗಳಿಗೆ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಭೇಟಿ ನೀಡಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸಂಜೆ ಧಾರಾಕಾರ ಮಳೆಗೆ 57 ಮರಗಳು ಧರೆಗೆ
ಕಾಶಿಗೆ ಹೋಗಿದ್ದ ಅಧಿಕಾರಿ ಮನೇಲಿಚಿನ್ನ ದೋಚಿದ್ದ ಇಬ್ಬರು ಕಳ್ಳರ ಸೆರೆ