ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಜಿಲ್ಲಾಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಪ್ಲಾಜಾ, ಹೆದ್ದಾರಿಗಳ ಇಕ್ಕೆಲಗಳು, ಬೈಪಾಸ್ ರಸ್ತೆಗಳು ಸೇರುವ ಸ್ಥಳ ಹಾಗೂ ನಗರ ಮತ್ತು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ರಸ್ತೆಗಳ ಅಕ್ಕಪಕ್ಕದಲ್ಲಿ ಅನಧಿಕೃತವಾಗಿ ಗೂಡಂಗಡಿಗಳನ್ನು ಹಾಕಿಕೊಂಡಿರುವುದರಿಂದ, ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದೆ, ಅಲ್ಲದೆ ಅಪಘಾತಗಳಿಗೂ ಕಾರಣವಾಗುತ್ತಿವೆ ಎಂದರು.
ಹಿರಿಯೂರು ನಗರದಲ್ಲಿ ಬೈಪಾಸ್ ರಸ್ತೆಯ ಅಕ್ಕಪಕ್ಕದಲ್ಲಿ ಹೆಚ್ಚಿನ ಗೂಡಂಗಡಿಗಳು ಇದ್ದು, ಇಲ್ಲಿ ಸಾಲು ಸಾಲಾಗಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಅಲ್ಲದೆ ಟೋಲ್ ಸಂಗ್ರಹಿಸುವ ಕಡೆಗಳಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಗೂಡಂಗಡಿಗಳ ಬಗ್ಗೆ ಮಾಹಿತಿ ಪಡೆದು, ಈ ಅಂಗಡಿಗಳು ನಿರ್ಮಿಸಿರುವ ಸ್ಥಳ ಯಾರಿಗೆ ಸೇರಿದ್ದು, ಕೃಷಿಯೇತರ ಭೂಮಿಯಾಗಿ ಪರಿವರ್ತಿಸಲಾಗಿದೆಯೇ, ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು. ಬೆಸ್ಕಾಂ ಇಲಾಖೆ ಅಧಿಕಾರಿಗಳು ಅನಧಿಕೃತ ಗೂಡಂಗಡಿಗಳಿಗೆ ಒದಗಿಸಿರುವ ವಿದ್ಯುತ್ ಸಂಪರ್ಕವನ್ನು ತ್ವರಿತವಾಗಿ ಕಡಿತಗೊಳಿಸಬೇಕು. ವಿರೋಧ ಕಂಡುಬಂದಲ್ಲಿ, ಪೊಲೀಸ್ ಬಂದೋಬಸ್ತ್ ಪಡೆದು ಕೂಡಲೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಿದರು.ಅಪಘಾತಗಳ ಸಂಖ್ಯೆಯಲ್ಲಿ ರಾಜ್ಯದಲ್ಲಿಯೇ ಚಿತ್ರದುರ್ಗ ಜಿಲ್ಲೆ ನಾಲ್ಕನೆ ಸ್ಥಾನದಲ್ಲಿದೆ. ಈ ಕುರಿತಂತೆ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಿ, ಅಪಘಾತಗಳ ಸಂಖ್ಯೆ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಕುರಿತಂತೆ ಹಲವು ಬಾರಿ ಸಭೆಗಳಲ್ಲಿ ಸಲಹೆ, ಸೂಚನೆಗಳನ್ನು ನೀಡಿದರೂ ಪಾಲನೆ ಮಾಡುತ್ತಿಲ್ಲ. ಮತ್ತೆ ಸಭೆ ಸೇರಿದಾಗಲೇ ಈ ಬಗ್ಗೆ ಮಾತನಾಡುತ್ತೀರಿ. ಸಭೆಯಲ್ಲಿ ನಾವೇನು ಭಜನೆ ಮಾಡಲು ಸೇರುತ್ತೇವೆಯೇ ಎಂದು ಅಧಿಕಾರಿಗಳ ನಡೆಗೆ ಅಸಮಾಧಾನ ಹೊರಹಾಕಿದ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು, ಅಪಘಾತಗಳು ಸಂಭವಿಸಿದ ವಿಷಯಗಳಲ್ಲಿ ನಿರ್ಲಕ್ಷ್ಯ ತೋರುವಂತಹ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ, ಬೆಸ್ಕಾಂ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಸೇರಿದಂತೆ ಆಯಾ ಅಧಿಕಾರಿಗಳನ್ನು ಕೂಡ ಪ್ರತಿವಾದಿಗಳನ್ನಾಗಿ ಮಾಡಿ ಎಫ್‍ಐಆರ್ ದಾಖಲಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
20 ವರ್ಷಗಳ ಮೇಲ್ಪಟ್ಟ ಮೈನ್ಸ್ ಲಾರಿಗಳು ಓಡಾಟ ಈಗಾಗಲೇ ನಿರ್ಬಂಧಿಸಲಾಗಿದ್ದು, ಒಂದು ವೇಳೆ ಇಂತಹ ಲಾರಿಗಳು ಸಂಚಾರ ಮಾಡಿದರೆ ಅಂತಹ ವಾಹನಗಳನ್ನು ಸೀಜ್ ಮಾಡಬೇಕು. 20 ವರ್ಷ ಮೇಲ್ಪಟ್ಟ ವಾಹನಗಳ ಓಡಾಟ ಇಲ್ಲದಿರುವ ಬಗ್ಗೆ ದೃಢೀಕರಣ ನೀಡುವಂತೆ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ನಾಗರಾಜ್, ಡಿವೈಎಸ್‍ಪಿ ಗಳಾದ ದಿನಕರ್, ಶಿವಕುಮಾರ್, ಸತ್ಯನಾರಾಯಣ ರಾವ್ ನಗರಸಭೆ ಪೌರಾಯುಕ್ತೆ ಲಕ್ಷ್ಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.