ಕನ್ನಡಪ್ರಭ ವಾರ್ತೆ ಉಡುಪಿ
ನಗರದ ಅಂಬಲಪಾಡಿಯಲ್ಲಿ ಶೆಟ್ಟಿ ಲಂಚ್ ಹೋಮ್ ನಡೆಸುತ್ತಿದ್ದ ರಮಾನಂದ ಶೆಟ್ಟಿ (53) ಮೃತರು. ಅವರು ಪತ್ನಿ, ಉಡುಪಿ ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಅಶ್ವಿನಿ ಮತ್ತು ಮಕ್ಕಳಾದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಅಂಶುಲಾ ಶೆಟ್ಟಿ ಹಾಗೂ 8ನೇ ತರಗತಿ ವಿದ್ಯಾರ್ಥಿ ಅಭಿಕ್ ಶೆಟ್ಟಿ ಅವರೊಂದಿಗೆ ವಾಸಿಸುತ್ತಿದ್ದರು.
ಸಂಪೂರ್ಣ ಹವಾನಿಯಂತ್ರಿತವಾದ ಈ ಬಂಗಲೆಯಲ್ಲಿ ಮುಂಜಾನೆ 5.30ರ ಸುಮಾರಿಗೆ ದಟ್ಟ ಹೊಗೆ ತುಂಬಿಕೊಂಡಿತು. ಅಕ್ಕಪಕ್ಕದವರು ಇದನ್ನು ಗಮನಿಸಿ ಧಾವಿಸಿದಾಗ ಬೆಂಕಿ ಬಂಗಲೆಯೊಳಗೆ ವ್ಯಾಪಿಸಿತ್ತು. ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ, ಹರಸಾಹಸದಿಂದ ಬೆಂಕಿಯನ್ನು ನಂದಿಸಿ ಬಾಗಿಲು ಒಡೆದು ಒಳಹೊಕ್ಕು ಒಂದು ಬೆಡ್ ರೂಮ್‌ನಲ್ಲಿ ಹೊರಬರಲಾಗದೇ ಕೂಗುತ್ತಿದ್ದ ಮಕ್ಕಳಿಬ್ಬರನ್ನು ಹೊರಗೆ ಕರೆ ತಂದರು. ಇನ್ನೊಂದು ಬೆಡ್ ರೂಮ್‌ನಲ್ಲಿದ್ದ ದಂಪತಿ ಹೊಗೆಯಿಂದ ಉಸಿರುಗಟ್ಟಿ ಅರೆಪ್ರಜ್ಞಾವಸ್ಥೆಯಲ್ಲಿದ್ದರು. ಅವರನ್ನು ತಕ್ಷಣ ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಗೆ ರವಾನಿಸಲಾಯಿತು.ಆದರೆ ರಮಾನಂದ ಶೆಟ್ಟಿ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಅಶ್ವಿನಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಇಬ್ಬರು ಮಕ್ಕಳು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಉಡುಪಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿನಾಯಕ್ ನೇತೃತ್ವದಲ್ಲಿ ಸಿಬ್ಬಂದಿ ರಾಘವೇಂದ್ರ, ಸುಧೀರ್, ವಿನಾಯಕ್, ರವಿ, ಖಾಝಾ ಹುಸೇನ್, ತೌಸಿಫ್, ಶಹಬಾಸ್, ಜಿಲ್ಲಾ ಪೋಲಿಸ್‌ನ ಹೆಚ್ಚುವರಿ ಎಸ್ಪಿ ಎಸ್.ಟಿ. ಸಿದ್ದಲಿಂಗಪ್ಪ, ನಗರ ಠಾಣಾ ಎಸ್.ಐ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ರೀಲ್ಸ್ ಮೂಲಕ ಜನಜಾಗೃತಿಯಶಸ್ವಿ ಉದ್ಯಮಿಯಾಗಿದ್ದ ರಮಾನಂದ ಶೆಟ್ಟಿ ಮತ್ತು ಅಶ್ವಿನಿ ಹೈಸ್ಕೂಲು ದಿನಗಳಿಂದಲೇ ಪ್ರೀತಿಸಿ ಮದುವೆಯಾಗಿದ್ದರು. ಅಪ್ಪಟ ಸನಾತನ ಸಂಸ್ಕಾರಪ್ರಿಯರಾಗಿದ್ದ ಅಶ್ವಿನಿ ಶೆಟ್ಟಿ, ಸಾಮಾಜಿಕ ಜಾಲತಾಣಗಳ್ಲಲಿ ರೀಲ್ಸ್‌ಗಳ ಮೂಲಕ ಹಿಂದೂ ಧರ್ಮ, ಸಂಸ್ಕೃತಿ, ಆಚಾರವಿಚಾರಗಳನ್ನು ಹೇಳುತ್ತಾ ತನ್ನದೇ ಅಭಿಮಾನಿ ಬಳಗವನ್ನು ಹೊಂದಿದ್ದರು. ಬಿಜೆಪಿಯಲ್ಲಿ ಸಕ್ರಿಯರಾಗಿದ್ದ ಅವರು, ಸಾಮಾಜಿಕ ಕ್ಷೇತ್ರ, ಸಾಹಿತ್ಯ, ನೃತ್ಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದರು.