ಕನ್ನಡಪ್ರಭ ವಾರ್ತೆ ಹಾವೇರಿ
ಅಗ್ನಿ ಅವಘಡದಿಂದಾಗಿ ಮನೆಯಲ್ಲಿದ್ದ ವಸ್ತುಗಳು ಸುಟ್ಟು ಕರಕಲುಗೊಂಡ ಘಟನೆ ಭಾನುವಾರ ನಗರದ ಕಂದುವಾಡ ಓಣಿಯಲ್ಲಿ ನಡೆದಿದೆ.ಸದಾನಂದ ಸ್ವಾಮಿ ಎಂಬುವವರು ವಾಸವಿದ್ದ ಮನೆಯಲ್ಲಿ ಬೆಳಗ್ಗೆ ದೀಪ ಹಚ್ಚಿ ಕೆಲಸಕ್ಕೆ ಹೋಗಿದ್ದ ವೇಳೆ ಈ ಘಟನೆ ಸಂಭವಿಸಿದೆ. ಅಗ್ನಿ ಅವಘಡದಿಂದಾಗಿ ಮನೆಯಲ್ಲಿನ ವಸ್ತುಗಳು ಸುಟ್ಟು ಲಕ್ಷಾಂತರ ರು. ಹಾನಿ ಸಂಭವಿಸಿದೆ ಎನ್ನಲಾಗುತ್ತಿದೆ. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಡೆಗಟ್ಟಿದ್ದಾರೆ. ಈ ಕುರಿತು ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಣಿಬೆನ್ನೂರಿನಲ್ಲಿ ಮನೆ, ಕಾರು ಕಳ್ಳತನ; ಆರೋಪಿ ಬಂಧನ: ರಾಣಿಬೆನ್ನೂರು ನಗರದಲ್ಲಿ ಮನೆ ಹಾಗೂ ಕಾರು ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಶಹರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.ಪ್ರಕರಣದಲ್ಲಿ ಬೆಳಗಾವಿ ಜಿಲ್ಲೆಯ ಮಂಡೋಲಿಯ ಮಲ್ಲಪ್ಪ ಉರ್ಪ್ ಮಹೇಶ ತಂದೆ ಆನಂದ ಗೆನುಚೆ(24) ಬಂಧಿತ ವ್ಯಕ್ತಿ. ಆರೋಪಿಯ ಸ್ನೇಹಿತರಾದ ನಿತೀಶ, ಜಾಫರ್, ಜಾಫರನ ಸ್ನೇಹಿತ ಜಾವಿದ ಪರಾರಿಯಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಇತ್ತೀಚೆಗೆ ನಗರದಲ್ಲಿ ಮನೆ ಹಾಗೂ ಕಾರು ಕಳ್ಳತನವಾದ ಕುರಿತು ದೂರು ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಕಳ್ಳತನ ಮಾಡಿದ ಕಾರನ್ನು ಹರಿಹರಕ್ಕೆ ತೆಗೆದುಕೊಂಡು ಹೋಗುವ ಸಮಯದಲ್ಲಿ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ ಪಕ್ಕ, ಹಲಗೇರಿ ಬೈಪಾಸ್ ಬಿಡ್ಡ ಹತ್ತಿರ ಸರ್ವಿಸ್ ರಸ್ತೆಯಲ್ಲಿ, ವಾಹನಗಳನ್ನು ತಪಾಸಣೆ ಮಾಡುವ ವೇಳೆ ಸಂಶಯ ವ್ಯಕ್ತಪಡಿಸಿ ಆರೋಪಿತರನ್ನು ಕಾರು ಸಮೇತ ಠಾಣೆಗೆ ಕರೆದುಕೊಂಡು ಬಂದು ವಿಚಾರಿಸಿದಾಗ ಪ್ರಕರಣ ಬಯಲಿಗೆ ಬಂದಿದೆ. ಆರೋಪಿತರು ಕಳ್ಳತನ ಮಾಡಿ ಬಂದ ಹಣದಿಂದ ಸಾರಾಯಿ ಕುಡಿಯುವುದು, ಜೂಜಾಟ ಆಡುವುದು, ಓಸಿ ಆಡುತ್ತಿದ್ದರು ಎಂದು ತಿಳಿದುಬಂದಿದೆ.ಎಸ್‌ಪಿ ಹಾಗೂ ಹೆಚ್ಚುವರಿ ಎಸ್‌ಪಿ ಹಾಗೂ ಡಿವೈಎಸ್‌ಪಿ ಮಾರ್ಗದರ್ಶನದಲ್ಲಿ ಕೈಗೊಂಡ ತನಿಖೆ ತಂಡದಲ್ಲಿ ಸಿಪಿಐಡಾ. ಶಂಕರ, ಪಿಎಸ್‌ಐ ಗಡ್ಡೆಪ್ಪ ಗುಂಜಟಗಿ, ಎಚ್.ಎನ್. ದೊಡ್ಡಮನಿ, ಸಿ.ಬಿ. ಕಡ್ಲೆಪ್ಪನವರ, ಪಿ.ಕೆ. ಸನದಿ, ರಮೇಶ ಕುಸಗೂರ, ವಿ.ಕೆ. ಬಣಕಾರ, ವಿಠಲ್ ಡಿ.ಬಿ., ಎಂ.ಎಚ್. ಪಾಟೀಲ, ಮಾರುತಿ ಹಾಲಭಾವಿ, ಸತೀಶ ಮಾರಕಟ್ಟಿ ಪಾಲ್ಗೊಂಡಿದ್ದರು.