ಕುದೂರು: ಗ್ರಾಮದ ಭೈರವನದುರ್ಗ ಬೆಟ್ಟದಲ್ಲಿ ಅರಣ್ಯ ಪ್ರದೇಶದ ಸ್ವಲ್ಪ ಭಾಗ ಬೆಂಕಿಗಾಹುತಿಯಾಗಿದೆ. ಬೆಟ್ಟದಲ್ಲಿ ಸಂಜೆ ಬೆಂಕಿ ಕಾಣಿಸಿಕೊಂಡು ಸುತ್ತಲಿನ ಅರಣ್ಯ ಪ್ರದೇಶ ಆವರಿಸಿದೆ. ಕಿಡಿಗೇಡಿಗಳ ಕೃತ್ಯದಿಂದಲೇ ಘಟನೆ ನಡೆದಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಕುದೂರು ಗ್ರಾಮದ ಭೈರವನದುರ್ಗ ಬೆಟ್ಟದ ತುಂಬಾ ನೀಲಗಿರಿ, ಅಕೇಶಿಯಾ. ಬೂರುಗ, ಎಲಚಿ ಮತ್ತು ಕುರುಚಲು ಗಿಡ, ಮರ ಮತ್ತು ಪೊದೆಗಳಿಂದ ಕೂಡಿದೆ. ಬೆಟ್ಟದಲ್ಲಿ ಅನೇಕ ವನ್ಯಜೀವಿಗಳು, ಪಕ್ಷಿ ಸಂಕುಲಕ್ಕೂ ಪೆಟ್ಟಾಗಿದೆ.
ಬೆಟ್ದದ ತಪ್ಪಲಿನಲ್ಲಿ ಮಧ್ಯಪಾನ-ಧೂಮಪಾನ ಮಾಡುವ ಕೆಲವು ಕಿಡಿಗೇಡಿಗಳು ಬೀಡಿ ಸಿಗರೇಟು ಸೇದಿ ಎಸೆಯುತ್ತಾರೆ ಇದರಿಂದ ಬೆಂಕಿ ಇಡೀ ಬೆಟ್ಟವನ್ನು ಹರಡಿಕೊಳ್ಳುತ್ತದೆ.ಕೆಂಪೇಗೌಡರ ಇತಿಹಾಸದ ಕುರುಹುಗಳಿರುವ ಬೆಟ್ಟವಿದು. ಕೆಂಪೇಗೌಡರಿಗೆ ದೀಕ್ಷೆ ನೀಡಿದ ಗುರುಗಳ ಸಮಾಧಿಯಿರುವ ಸ್ಥಳವಿರುವುದು ಇದೇ ಭೈರವನದುರ್ಗದಲ್ಲಿ. ಇಂತಹ ಇತಿಹಾಸವಿರುವ ದುರ್ಗವನ್ನು ಸಂರಕ್ಷಿಸಿಬೇಕೆಂದು ಗ್ರಾಮಸ್ಥರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕುದೂರು ಭೈರವನದುರ್ಗಕ್ಕೆ ಕಿಡಿಗೇಡಿಗಳು ಹಚ್ಚಿರುವ ಬೆಂಕಿ ಬೆಟ್ಟವನ್ನು ಆವರಿಸುತ್ತಿರುವುದು.