ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಬೆಳಗ್ಗೆ ಟಯರ್ ಸಂಗ್ರಹಿಸಿಟ್ಟಿದ್ದ ತಗಡಿನ ಶೆಡ್ ಹೊರಗೆ ಕಸ ಗೂಡಿಸಿ ಅದಕ್ಕೆ ಬೆಂಕಿ ಹಚ್ಚಿದ್ದು, ಅದು ಸಾವಕಾಶವಾಗಿ ಉರಿಯುತ್ತ ಶೆಡ್ ಒಳಗಡೆ ಇಟ್ಟಿದ್ದ ಟೈಯರ್ ಗಳಿಗೆ ತಗುಲಿದೆ. ಇಡೀ ಶೆಡ್ ಬೆಂಕಿ ಆವರಿಸಿ ಬೆಳಗ್ಗೆ 9 ರಿಂದ ಒಂದು ತಾಸು ಉರಿಯಿತು. ಬೆಂಕಿ ನಂದಿಸಲು ಅಕ್ಕಪಕ್ಕದ ಜನ ಸಾಕಷ್ಟು ಪ್ರಯತ್ನ ಪಟ್ಟರೂ ಪ್ರಯೋಜನವಾಗಲಿಲ್ಲ. ಕೆಲಹೊತ್ತು ಸುತ್ತಮುತ್ತಲ ಪ್ರದೇಶವನ್ನು ಬೆಂಕಿ ಮತ್ತು ಹೊಗೆ ಆವರಿಸಿತ್ತು. ಜನ ಭಯಭೀತರಾಗಿದ್ದರು.
ಪಕ್ಕದಲ್ಲಿಯೇ ನಾಲ್ಕಾರು ಪ್ಲಾಸ್ಟಿಕ್ ಚರಂಡಿ, ನೀರು ಪೂರೈಕೆಯ ಪೈಪ್ ಗಳ ಹಾಗೂ ಇತರೆ ಗೋದಾಮುಗಳು, ಮನೆಗಳು, ಪೆಟ್ರೋಲ್ ಬಂಕ್ ಸಹ ಇದೆ. ಸುಮಾರು ಒಂದು ಗಂಟೆಕಾಲ ಶೆಡ್ ಹೊತ್ತಿ ಉರಿದಿದೆ. ಪುರಸಭೆ ನೀರಿನ ವಾಹನ ಬಂದು ಬೆಂಕಿ ಸಂದಿಸಿದೆ. ಬಾದಾಮಿಯಿಂದ ಅಗ್ನಿಶಾಮಕ ವಾಹನ ಆಗಮಿಸುವಷ್ಟರಲ್ಲಿ ಶೆಡ್ ಸಂಪೂರ್ಣ ಸುಟ್ಟು ಕರಕಲಾಗಿ ಬೆಂಕಿ ನಂದಿತ್ತು.ಅಕ್ಕಪಕ್ಕದ ಗೋದಾಮುಗಳ ಬೀಗ ಹಾಕಿ ಮಾಲಿಕರು ಇಲ್ಲದ ಕಾರಣ ಅವುಗಳ ಗೋದಾಮುಗಳ ಒಳಗಡೆ ವಸ್ತುಗಳು ಏನಾಗಿವೆ ಎಂದು ತಿಳಿದುಬಂದಿಲ್ಲ. ಯಾವುದೇ ಜೀವ ಹಾನಿಯಾಗಿಲ್ಲ.