ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಮತ್ತು ಆಧ್ಯಾತ್ಮದ ಅರಿವು ಅವಶ್ಯಕ. ಭೌತಿಕ ಸಂಪತ್ತು ಅಳಿದರೂ ಆಧ್ಯಾತ್ಮದ ಸಂಪತ್ತು ಶಾಶ್ವತ. ಅಜ್ಞಾನವನ್ನು ತೊರೆದು ಜ್ಞಾನ ಸಂಪಾದಿಸುವುದು, ಅನ್ಯಾಯದ ವಿರುದ್ಧ ನಿಲ್ಲುವುದು ಸತ್ಯದ ಮಾರ್ಗದಲ್ಲಿ ನಡೆಯುವುದು ಮತ್ತು ಸಮಾಜದ ಒಳಿತಿಗಾಗಿ ಬದುಕನ್ನು ಸಮರ್ಪಿಸಿಕೊಳ್ಳುವುದೇ ನಿಜವಾದ ಶಕ್ತಿಯ ಆರಾಧನೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯರು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಮತ್ತು ಆಧ್ಯಾತ್ಮದ ಅರಿವು ಅವಶ್ಯಕ. ಭೌತಿಕ ಸಂಪತ್ತು ಅಳಿದರೂ ಆಧ್ಯಾತ್ಮದ ಸಂಪತ್ತು ಶಾಶ್ವತ. ಅಜ್ಞಾನವನ್ನು ತೊರೆದು ಜ್ಞಾನ ಸಂಪಾದಿಸುವುದು, ಅನ್ಯಾಯದ ವಿರುದ್ಧ ನಿಲ್ಲುವುದು ಸತ್ಯದ ಮಾರ್ಗದಲ್ಲಿ ನಡೆಯುವುದು ಮತ್ತು ಸಮಾಜದ ಒಳಿತಿಗಾಗಿ ಬದುಕನ್ನು ಸಮರ್ಪಿಸಿಕೊಳ್ಳುವುದೇ ನಿಜವಾದ ಶಕ್ತಿಯ ಆರಾಧನೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯರು ಅಭಿಪ್ರಾಯಪಟ್ಟರು.ಕಡಪಟ್ಟಿ ಶ್ರೀ ಬಸವಣ್ಣ ದೇವಸ್ಥಾನದ ಆವರಣದ ಮಾನವ ಧರ್ಮ ಮಂಟಪದಲ್ಲಿ ಭಾನುವಾರ ಜರುಗಿದ ದಸರಾ ಧರ್ಮ ಸಮ್ಮೇಳನ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ನವರಾತ್ರಿ ಮತ್ತು ದಸರಾ ಉತ್ಸವಗಳು ಈ ಶಕ್ತಿ ತತ್ವವನ್ನು ನಮಗೆ ಸ್ಮರಿಸುತ್ತದೆ. ದೇವಿಯ ಒಂಭತ್ತು ರೂಪಗಳ ಆರಾಧನೆಯ ಮೂಲಕ ಮನುಷ್ಯನು ತನ್ನೊಳಗಿನ ಭಕ್ತಿ ಜ್ಞಾನ ಧೈರ್ಯ ಸಹನೆ ಕರುಣೆ ವಿವೇಕ ಮತ್ತು ಆತ್ಮವಿಶ್ವಾಸವನ್ನು ಜಾಗೃತಗೊಳಿಸಬೇಕೆಂಬ ಸಂದೇಶವನ್ನು ಉತ್ಸವಗಳು ಸಾರುತ್ತವೆ. ಪುರಾಣಗಳಲ್ಲಿ ವರ್ಣಿಸಲ್ಪಟ್ಟ ಮಹಿಷಾಸುರನ ಸಂಹಾರವು ಕೇವಲ ಒಬ್ಬ ಅಸುರನ ಅಂತ್ಯದ ಕಥೆಯಲ್ಲ. ಅದು ಅಹಂಕಾರದ ಮೇಲೆ ವಿನಯದ ವಿಜಯ ಅನ್ಯಾಯದ ಮೇಲೆ ನ್ಯಾಯದ ವಿಜಯ ಅಜ್ಞಾನದ ಮೇಲೆ ಜ್ಞಾನದ ವಿಜಯ ಮತ್ತು ಅಧರ್ಮದ ಮೇಲೆ ಧರ್ಮದ ವಿಜಯವಾಗಿದೆ. ದುಷ್ಟ ಶಕ್ತಿಗಳ ಧಮನ ಸಾತ್ವಿಕ ಶಕ್ತಿಗಳ ಸಂರಕ್ಷಣೆ ದೇವಿಯ ಅವತಾರದ ಮೂಲ ಉದ್ದೇಶ. ಶಕ್ತಿ ಆರಾಧನೆಯ ನಾಡಹಬ್ಬವನ್ನು ರಂಭಾಪುರಿ ಪೀಠ ಪ್ರಾಚೀನ ಕಾಲದಿಂದ ಆಚರಿಸುತ್ತಾ ಬಂದಿದೆ.

ಗುರು ಪೀಠದಲ್ಲಿ ಆಚರಿಸುವ ನವರಾತ್ರಿ ನಾಡಹಬ್ಬಭಕ್ತರ ಕಲ್ಯಾಣಕ್ಕಾಗಿ ಜನಮನದ ಶಾಂತಿ ಸಾಮರಸ್ಯಕ್ಕಾಗಿ ನಾಡಿನ ನಾನಾ ಭಾಗಗಳಲ್ಲಿ ವಿಧಿವತ್ತಾಗಿ ಆಚರಿಸುತ್ತ ಬಂದಿರುವ ಇತಿಹಾಸವಿದೆ. ಜಮಖಂಡಿ ನಗರದಲ್ಲಿ ಅದ್ಧೂರಿಯಾಗಿ ದಸರಾ ಧರ್ಮ ಸಮ್ಮೇಳನ ಜರುಗುತ್ತಿರುವುದು ತಮಗೆ ಅಪಾರ ಹರುಷ ತಂದಿದೆ ಎಂದರು.

ಜಮಖಂಡಿಯ ಗೌರಿಶಂಕರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಮರೆಗುದ್ದಿ ಅಡವಿಸಿದ್ದೇಶ್ವರ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಉಪನ್ಯಾಸ ಹಿಪ್ಪರಗಿಯ ಪ್ರೊ.ಸಿ.ಜಿ. ಮಠಪತಿ ಮಾತನಾಡಿ, ಶಕ್ತಿ ಎಂದರೆ ಅಧಿಕಾರದ ಪ್ರದರ್ಶನವಲ್ಲ. ಅದು ರಕ್ಷಣೆಗೆ ಬಳಕೆಯಾಗುವ ಸಾಮರ್ಥ್ಯ. ಶಕ್ತಿ ಎಂದರೆ ದ್ವೇಷ ಹರಡುವುದಲ್ಲ. ಪ್ರೀತಿ ಮತ್ತು ಸಾಮರಸ್ಯ ಬೆಳೆಸುವ ಮನೋಬಲ ಕುಗ್ಗಿದವರನ್ನು ಮೇಲೆತ್ತುವ ಉದಾತ್ತ ಗುಣ. ಇಂತಹ ಸಾತ್ವಿಕ ಶಕ್ತಿಯೇ ವ್ಯಕ್ತಿ ಮತ್ತು ಸಮಾಜವನ್ನು ಉನ್ನತ ಮಟ್ಟಕ್ಕೆ ಕೊಂಡೊಯುತ್ತವೆ. ನವರಾತ್ರಿಯಲ್ಲಿ ನವಶಕ್ತಿಯರ ಆರಾಧನೆ ನಡೆಯುತ್ತದೆ. ಶೈಲ ಪುತ್ರಿ ಬ್ರಹ್ಮಚಾರಿಣಿ ಚಂದ್ರಘಟಾ ಕುಷ್ಮಾಂಡ ಸ್ಕಂದಮಾತೆ ಕಾತ್ಯಾಯಿನಿ ಕಾಳರಾತ್ರಿ ಮಹಾಗೌರಿ ಮತ್ತು ಸಿದ್ಧಿದಾತ್ರಿ ಎಂಬ ಹೆಸರಿನಿಂದ ದೇವಿಯನ್ನು ಪೂಜಿಸಿ ಪವಿತ್ರರಾಗುವ ನಾಡಹಬ್ಬವಿದು. ನಮ್ಮೆಲ್ಲರ ಬಾಳಿಗೆ ಜ್ಞಾನದ ಜ್ಯೋತಿ ಸನ್ಮಾರ್ಗವನ್ನು ತೋರಲಿ ಎಂದು ಹೇಳಿದರು.

ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಶಾಸಕ ನಾಡೋಜ ಜಗದೀಶ ಗುಡಗುಂಟಿ ಮಾತನಾಡಿ, ದಸರಾ ಧರ್ಮ ಸಮ್ಮೇಳನ ಸಕಲರ ಬಾಳಿನಲ್ಲಿ ಉದಾತ್ತ ಮೌಲ್ಯಗಳನ್ನು ಬೋಧಿಸುವುದರ ಮೂಲಕ ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕೆ ಈ ಸಮಾರಂಭ ಸಾಕ್ಷಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಅತಿಥಿಗಳಾಗಿ ಶಿವಪುತ್ರಯ್ಯ ಸಿದ್ದಗಿರಿಮಠ, ಶಂಕರ ಜಿರಲಿ, ಅಪ್ಪಾಸಾಹೇಬ ಪರಪ್ಪ ಚೌಗಲಾ,ಮಾಳಿ ಸಮಾಜ ಅಧ್ಯಕ್ಷ ಸಿದ್ದಪ್ಪ ಮೆಂಡಿಗೇರಿ ಪಾಲ್ಗೊಂಡಿದ್ದರು.

ಗುರುರಕ್ಷೆ: ಶರಣಬಸವ ಶಿವಾಚಾರ್ಯ ಸ್ವಾಮಿಗಳು ಹಿರೇಮಠ ಬನಹಟ್ಟಿ, ಜಮಖಂಡಿಯ ರುದ್ರಾವಧೂತ ಮಠದ ವೇದಾಂತಾಚಾರ್ಯ ಸಹಜಾನಂದ ಅವಧೂತರು, ಜಿ.ಕೆ. ಮಠದ ಹಿರಿಯ ವಕೀಲ ನಾಗಪ್ಪ ಗದಿಗೆಪ್ಪ ಸನದಿ, ದೇವಲ ಅಪ್ಪಾಸಾಹೇಬ ದೇಸಾಯಿ, ಗುಡೂರ-ಇಳಕಲ್ಲದ ಸುಶೀಲ ಅನ್ನದಾನ ಸ್ವಾಮೀಮಿ, ಸುನಂದಮ್ಮತಾಯಿ ಸಾರಂಗಮಠ ಶೂರ್ಪಾಲಿ ಸೇರಿದಂತೆ ಹಲವಾರು ಗಣ್ಯರಿಗೆ ಮತ್ತು ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು.

ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ಗದುಗಿನ ಗಾನಭೂಷಣ ವೀರೇಶ ಕಿತ್ತೂರ ಅವರಿಂದ ಪ್ರಾರ್ಥನಾ ಭಕ್ತಿಗೀತೆ ಜರುಗಿತು. ಶಿವಮೊಗ್ಗದ ಶಾಂತಾ ಆನಂದ ನಿರೂಪಿಸಿದರು.

ಸಮಾರಂಭದ ನಂತರ ಜಗದ್ಗುರುಗಳಿಗೆ ಗೌರವ ಸಮರ್ಪಣೆ ಜರುಗಿ ಬಂದ ಭಕ್ತರಿಗೆ ಅನ್ನ ದಾಸೋಹ ಜರುಗಿತು. ಬೆಳಗ್ಗೆ ಮೈಗೂರ ರಸ್ತೆಯಲ್ಲಿರುವ ಕಲೂತಿ ಕಲ್ಯಾಣ ಮಂಟಪದಲ್ಲಿ ಲೋಕ ಕಲ್ಯಾಣ ಮತ್ತು ವಿಶ್ವಶಾಂತಿ ಗಾಗಿ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಭಕ್ತರಿಗೆ ಶುಭ ಹಾರೈಸಿದರು. ಮಧ್ಯಾಹ್ನ ಜಗದ್ಗುರುಗಳು ವೀರಸಿಂಹಾಸನಕ್ಕೆ ಪೂಜೆ ಸಲ್ಲಿಸಿದರು.