ತ್ಯಾಜ್ಯ ವಿದ್ಯುತ್ ಘಟಕದಲ್ಲಿ ಬೆಂಕಿ: ಐವರಿಗೆ ಗಾಯ

KannadaprabhaNewsNetwork | Published : Jan 5, 2025 1:32 AM

ಸಾರಾಂಶ

ರಾಮನಗರ: ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಸ್ಥಾವರದಲ್ಲಿ ಸಂಭವಿಸಿದ ಅವಘಡದಲ್ಲಿ ಐವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಿಡದಿಯ ಬೈರಮಂಗಲ ಕ್ರಾಸ್ ನಲ್ಲಿರುವ ಕೆಪಿಸಿಎಲ್ ಪವರ್ ಕಾರ್ಪೋರೇಷನ್ ತ್ಯಾಜ್ಯ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಶನಿವಾರ ಸಂಜೆ ನಡೆದಿದೆ.

ರಾಮನಗರ: ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಸ್ಥಾವರದಲ್ಲಿ ಸಂಭವಿಸಿದ ಅವಘಡದಲ್ಲಿ ಐವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಿಡದಿಯ ಬೈರಮಂಗಲ ಕ್ರಾಸ್ ನಲ್ಲಿರುವ ಕೆಪಿಸಿಎಲ್ ಪವರ್ ಕಾರ್ಪೋರೇಷನ್ ತ್ಯಾಜ್ಯ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಶನಿವಾರ ಸಂಜೆ ನಡೆದಿದೆ.

ಘಟನೆಯಲ್ಲಿ ಅಮಲೇಶ್ (31), ಉಮೇಶ್ (29), ಸಂಟೊನ (31), ತರೂನ್ (29) ಹಾಗೂ ಲಕನ್ (28) ಗಾಯಗೊಂಡವರು. ಇವರೆಲ್ಲರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.

ಬಿಡದಿ ಕೈಗಾರಿಕಾ ಪ್ರದೇಶ ವ್ಯಾಪ್ತಿಯ ಭೈರಮಂಗಲ ಕ್ರಾಸ್‌ನಲ್ಲಿರುವ ಕರ್ನಾಟಕ ಪವರ್ ಕಾರ್ಪೋರೇಷನ್ ಲಿಮಿಟೆಡ್ ಸ್ವಾಮ್ಯದ ತ್ಯಾಜ್ಯ ವಿದ್ಯುತ್ ತಯಾರಿಕಾ ಘಟಕದಲ್ಲಿ ಶನಿವಾರ ಸಂಜೆ ಬೂದಿ ಸಾಗುವ ಕನ್ವೆಯರ್ ಕಳಚಿ ಬಿದ್ದ ಪರಿಣಾಮ ಕೆಲಸ ನಿರ್ವಹಿಸುತ್ತಿದ್ದ ಐವರು ಕಾರ್ಮಿಕರಿಗೆ ಗಂಭೀರ ಗಾಯಗಳಾಗಿವೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಕರ್ನಾಟಕ ಪವರ್ ಕಾರ್ಪೋರೇಷನ್ ಲಿಮಿಟೆಡ್ ಬಿಡದಿಯಲ್ಲಿ ರಾಜ್ಯದ ಮೊದಲ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಸ್ಥಾವರ ಸ್ಥಾಪಿಸಿದ್ದು, ಅದು ಪ್ರಾಯೋಗಿಕವಾಗಿ ಕಾರ್ಯಾಚರಣೆ ಆರಂಭಿಸಿತ್ತು.

ಈ ಘಟಕ ದಿನದ 24 ಗಂಟೆಯೂ ಕಾರ್ಯಾಚರಣೆಯಲ್ಲಿದ್ದು, ಸುಮಾರು 100 ರಿಂದ 110 ಕಾರ್ಮಿಕರು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಕಾರ್ಮಿಕರಲ್ಲಿ ಬಹುತೇಕರು ಬಿಹಾರ, ಉತ್ತರ ಪ್ರದೇಶ ರಾಜ್ಯದವರೇ ಆಗಿದ್ದಾರೆ.

ಘಟಕದಲ್ಲಿ ಒಣ ತ್ಯಾಜ್ಯವನ್ನು ಹೆಚ್ಚಿನ ತಾಪಮಾನದಲ್ಲಿ ಸುಡಲಾಗುತ್ತದೆ. ಅದರಿಂದ ಉತ್ಪತ್ತಿಯಾಗುವ ಶಾಖವನ್ನು ವಿದ್ಯುತ್ ಉತ್ಪಾದಿಸಲು ಬಳಸಲಾಗುತ್ತಿದೆ. ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕದಲ್ಲಿ ತ್ಯಾಜ್ಯ ಬಾಯ್ಲರ್‌ನಲ್ಲಿ ಬೆಂದು ಬೂದಿಯನ್ನು ಹೊರತರುವ ಕನ್ವೆಯರ್ ನಲ್ಲಿ ಬ್ಲಾಕ್ ಆಗಿದೆ. ಇಲ್ಲಿ ಬೂದಿಯೂ ತಾನಾಗಿಯೇ ಹರಿದು ಹೋಗುತ್ತಿತ್ತು. ಬ್ಲಾಕ್ ಆಗಿದ್ದ ಕಾರಣ ಕನ್ವೆಯರ್ ಅನ್ನು ಕಾರ್ಮಿಕರು ಓಪನ್ ಮಾಡಿದ್ದಾರೆ. ಏಕಾಏಕಿ ಕಳಚಿದ್ದರಿಂದ ಬೆಂಕಿಯುಂಡೆಯಂತಿದ್ದ ಬಿಸಿ ಬೂದಿಯು ಬಾಯ್ಲರ್ ಕೆಳಗೆ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರ ಮೇಲೆ ಸುರಿದಿದೆ. ಇದರಿಂದ ಕಾರ್ಮಿಕರ ಮೈ ಮೇಲಿನ ಚರ್ಮ ಸಂಪೂರ್ಣ ಸುಟ್ಟು ಹೋಗಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಸುರೇಶ್ , ರಾಮಚಂದ್ರಯ್ಯ, ಬಿಡದಿ ಠಾಣೆ ಸಿಪಿಐ ಶಂಕರ್‌ನಾಯಕ್ ಹಾಗೂ ಕೆಪಿಸಿಎಲ್ ಹಿರಿಯ ಅಧಿಕಾರಿಗಳು ಭೇಟಿನೀಡಿ ಪರಿಶೀಲನೆ ನಡೆಸಿದರು. ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

4ಕೆಆರ್ ಎಂಎನ್ 7,8.ಜೆಪಿಜಿ

7ತ್ಯಾಜ್ಯ ವಿದ್ಯುತ್ ತಯಾರಿಕಾ ಘಟಕಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

8.ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ತ್ಯಾಜ್ಯ ವಿದ್ಯುತ್ ತಯಾರಿಕಾ ಘಟಕದಲ್ಲಿ ಕನ್ವೆಯರ್ ಕಳಚಿ ತ್ಯಾಜ್ಯದ ಬೂದಿ ಚೆಲ್ಲಾಡಿರುವ ದೃಶ್ಯ.

Share this article