- ಗಾಜುಗಳನ್ನು ಒಡೆದು ಹೊರಬಂದು ಐವರು ಪಾರು - ಸಿಹಿ ಉತ್ಪನ್ನ ಪ್ಯಾಕಿಂಗ್ ವಸ್ತುಗಳು ಬೆಂಕಿಗೆ ಆಹುತಿ ಕನ್ನಡಪ್ರಭ ವಾರ್ತೆ ಮದ್ದೂರು ತಾಲೂಕಿನ ಗೆಜ್ಜಲಗೆರೆಯ ಮನ್‌ಮುಲ್‌ನಲ್ಲಿ ಇತ್ತೀಚೆಗೆ ಆರಂಭಗೊಂಡ ಮೆಗಾಡೇರಿ ಘಟಕದಲ್ಲಿ ಭಾನುವಾರ ಮುಂಜಾನೆ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿ ಕಾಣಿಸಿಕೊಂಡ ಕಟ್ಟಡದಲ್ಲಿ ದಟ್ಟಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿದ್ದ ಐವರು ಸಿಬ್ಬಂದಿ ಕಟ್ಟಡ ಗಾಜುಗಳನ್ನು ಒಡೆದು ಹೊರಬರುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೆಗಾಡೇರಿಯ ಮೊದಲ ಅಂತಸ್ತಿನಲ್ಲಿರುವ ನಂದಿನಿ ಸಿಹಿ ಉತ್ಪನ್ನ ಪ್ಯಾಕಿಂಗ್ ವಸ್ತುಗಳ ಘಟಕದಲ್ಲಿ ಬೆಳಗ್ಗೆ ೭.೧೫ರ ಸುಮಾರಿಗೆ ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು ಕೆಲವು ಯಂತ್ರೋಪಕರಣಗಳು ಸೇರಿದಂತೆ ಇತರೆ ವಸ್ತುಗಳು ಸುಟ್ಟು ಕರಕಲಾಗಿದ್ದು, ಲಕ್ಷಾಂತರ ರು. ಹಾನಿ ಸಂಭವಿಸಿದೆ. ಅಗ್ನಿ ಅವಘಡ ಸಮಯದಲ್ಲಿ ಪಕ್ಕದ ಗೋದಾಮಿನಲ್ಲಿದ್ದ ಕೋಟ್ಯಂತರ ರು. ಮೌಲ್ಯದ ತುಪ್ಪ, ಬೆಣ್ಣೆ, ಮತ್ತಿತರ ವಸ್ತುಗಳಿಗೆ ಯಾವುದೇ ಹಾನಿಯಾಗಿಲ್ಲ. ಮನ್‌ಮುಲ್ ನೌಕರರ ಸಮಯ ಪ್ರಜ್ಞೆಯಿಂದಾಗಿ ಹೆಚ್ಚಿನ ಹಾನಿ ಸಂಭವಿಸುವುದು ತಪ್ಪಿದೆ. ಘಟನೆಯಲ್ಲಿ ಓರ್ವ ಫೈರ್‌ಮ್ಯಾನ್, ಮನ್‌ಮುಲ್‌ನ ಏಳು ಮಂದಿ ಕಾಯಂ ಹಾಗೂ ಹಂಗಾಮಿ ನೌಕರರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎಲ್ಲರೂ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಮೆಗಾ ಡೇರಿ ಘಟಕದಲ್ಲಿ ಮೊದಲ ಪಾಳಿಯ ಕರ್ತವ್ಯಕ್ಕೆ ಆಗಮಿಸಿದ್ದ ಹಂಗಾಮಿ ನೌಕರರಾದ ಸಿದ್ದಪ್ಪ, ಪ್ರಸನ್ನ, ಲೋಕೇಶ್, ಶಿವಣ್ಣ ನಂದೀಶ್ ಸೇರಿದಂತೆ ಸುಮಾರು ೨೦ ಜನರು ಕರ್ತವ್ಯದಲ್ಲಿದ್ದಾಗ ಘಟಕದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಬರುತ್ತಿರುವುದನ್ನು ಗಮನಿಸಿದ್ದಾರೆ. ಈ ಬಗ್ಗೆ ನೌಕರರು ಮನ್‌ಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಮಂಜೇಶ್ ಹಾಗೂ ಒಕ್ಕೂಟದ ಅಧ್ಯಕ್ಷ ಹಾಗೂ ನಿರ್ದೇಶಕರಿಗೆ ಮಾಹಿತಿ ನೀಡಿದ್ದಾರೆ. ನಂತರ ಮದ್ದೂರು ಅಗ್ನಿಶಾಮಕ ಠಾಣೆಗೆ ದೂರವಾಣಿ ಕರೆ ಮಾಡಿದ್ದಾರೆ. ಮಂಡ್ಯ, ಶ್ರೀರಂಗಪಟ್ಟಣ, ಮೈಸೂರು ಹೆಬ್ಬಾಳ ಮತ್ತು ಮದ್ದೂರಿನಿಂದ ಆರು ವಾಹನಗಳಲ್ಲಿ ಆಗಮಿಸಿದ ಅಗ್ನಿ ಶಾಮಕದಳದ ಸಿಬ್ಬಂದಿ ಪ್ರಾದೇಶಿಕ ಅಧಿಕಾರಿ ನವೀನ್ ಮತ್ತು ಮಂಡ್ಯ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕೆ.ಪಿ.ಗುರುರಾಜ್ ಹಾಗೂ ಮುಖ್ಯ ಅಧಿಕಾರಿ ಜಯರಾಮಯ್ಯ ನೇತೃತ್ವದಲ್ಲಿ ಸುಮಾರು ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯ ಕೆನ್ನಾಲಿಗೆ ಆವರಣದಲ್ಲಿದ್ದ ಅಮೋನಿಯಂ ಸಿಲಿಂಡರ್‌ಗಳು ಹಾಗೂ ಮತ್ತಿತರ ಘಟಕಗಳಿಗೆ ಹಬ್ಬದಂತೆ ತಡೆಯುವಲ್ಲಿ ಯಶಸ್ವಿಯಾಗಿದರು. ನಂತರ ಒಕ್ಕೂಟದ ಕಾಯಂ ಸಿಬ್ಬಂದಿ ಗೆಜ್ಜಲಗೆರೆ ಆಸುಪಾಸಿನ ಜನರ ನೆರವಿನಿಂದ ಬೆಂಕಿ ನಂದಿಸಿದ್ದಾರೆ. ಬೆಂಕಿ ಅವಘಡ ಸಂಬಂಧ ಮದ್ದೂರು ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. --------- ಏನಾಯ್ತು? ಬೆಳಗ್ಗೆ ೭.೧೫ರ ಸುಮಾರಿಗೆ ಸಿಹಿ ಉತ್ಪನ್ನ ಪ್ಯಾಕಿಂಗ್ ವಸ್ತುಗಳ ದಾಸ್ತಾನು ಕಟ್ಟಡದ ಮೂಲೆಯಲ್ಲಿ ಯಂತ್ರವೊಂದಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಈ ಸಮಯದಲ್ಲಿ ಸಿಬ್ಬಂದಿ ಉಪಾಹಾರ ಸೇವನೆಗೆ ತೆರಳಿದ್ದರು. ಬೆಂಕಿಯ ಜ್ವಾಲೆ ಇಡೀ ಘಟಕವನ್ನು ಆವರಿಸಿಕೊಂಡಾಗ ಬೀರುವಿನಲ್ಲಿದ್ದ ದಾಖಲೆಗಳು, ಪ್ಯಾಕಿಂಗ್ ವಸ್ತುಗಳನ್ನು ಆವರಿಸಿಕೊಂಡಿದೆ. ನಂತರ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸಿದರಾದರೂ ಜ್ವಾಲೆ ತೀವ್ರಗೊಂಡು ಅನಾಹುತ ತಡೆಯಲು ಸಾಧ್ಯವಾಗಲಿಲ್ಲ. ನಂತರ ಗಾಜುಗಳನ್ನು ಒಡೆದು ಹೊಗೆ ಹೊರಗೆ ಹೋಗುವಂತೆ ಮಾಡಿದರು. ಅಷ್ಟರಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ಹತೋಟಿಗೆ ತಂದರು. ------------ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ ಅಗ್ನಿ ಅವಘಡ ಸಂಭವಿಸಿದ ಮನ್‌ಮುಲ್‌ಗೆ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್ ಅವರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂದಿನಿ ಸಿಹಿ ಉತ್ಪನ್ನ ಪ್ಯಾಕಿಂಗ್ ಘಟಕದಲ್ಲಿ ವಸ್ತುಗಳು ಹಾನಿಗೊಳಗಾಗಿರುವ ಬಗ್ಗೆ ವ್ಯವಸ್ಥಾಪಕ ನಿರ್ದೇಶಕ ಡಾ.ಮಂಜೇಶ್ ಅವರಿಂದ ಮಾಹಿತಿ ಪಡೆದುಕೊಂಡರು. ಬಳಿಕ ಸಿಹಿ ಉತ್ಪನ್ನಗಳ ಪ್ಯಾಕಿಂಗ್ ವ್ಯವಸ್ಥೆ ಕುರಿತಂತೆ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ತಾಕೀತು ಮಾಡಿದರು. ಮನ್‌ಮುಲ್ ಅಧ್ಯಕ್ಷ ಬೋರೇಗೌಡ, ನಿರ್ದೇಶಕಿ ರೂಪಾ, ಒಕ್ಕೂಟದ ವಿವಿಧ ವಿಭಾಗಗಳ ವ್ಯವಸ್ಥಾಪಕರು ಮತ್ತು ಅಧಿಕಾರಿಗಳಿದ್ದರು. ---------- ಬೆಂಕಿ ಅವಘಡ ತಡೆಗೆ ಸುರಕ್ಷತಾ ಕ್ರಮಗಳಿಲ್ಲ: ಕೆ.ಪಿ.ಗುರುರಾಜ್ ಮನ್‌ಮುಲ್ ಮೆಗಾಡೇರಿ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿರುವ ಬಗ್ಗೆ ಒಕ್ಕೂಟದ ಆಡಳಿತ ಮಂಡಳಿ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೆ ಕಟ್ಟಡ ನಿರ್ಮಿಸಿದೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕೆ.ಪಿ.ಗುರುರಾಜ್ ಆಕ್ಷೇಪ ವ್ಯಕ್ತಪಡಿಸಿದರು. ಮೆಗಾಡೇರಿ ಕಟ್ಟಡ ನಿರ್ಮಾಣದ ನಂತರ ಬೆಂಕಿ ಅವಘಡ ಸಂಬಂಧ ಸುರಕ್ಷತಾ ಕ್ರಮಗಳ ಬಗ್ಗೆ ಅಗ್ನಿಶಾಮಕ ದಳದಿಂದ ಯಾವುದೇ ನಿರಾಕ್ಷೇಪಣಾ ಪತ್ರ ಪಡೆದಿಲ್ಲ. ಡೇರಿ ಸುರಕ್ಷತೆ ಬಗ್ಗೆ ಮಾತ್ರ ಎನ್‌ಒಸಿ ಪಡೆದಿದ್ದಾರೆ. ಅಗ್ನಿ ಸುರಕ್ಷತೆ ಬಗ್ಗೆ ಆಡಳಿತ ಮಂಡಳಿ ಎನ್‌ಒಸಿ ಪಡೆದುಕೊಂಡಿಲ್ಲ. ಆ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮ ಕೈಗೊಳ್ಳದಿರುವ ಬಗ್ಗೆ ಮನ್‌ಮುಲ್ ಆಡಳಿತ ಮಂಡಳಿಗೆ ನೋಟಿಸ್ ಜಾರಿ ಮಾಡಬಹುದು. ಈ ಬಗ್ಗೆ ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳುವ ಬಗ್ಗೆ ತೀರ್ಮಾನಿಸಲಾಗುವುದು ಎಂದರು. ಮೆಗಾ ಡೇರಿಯ ತುಪ್ಪ ಮತ್ತು ಬೆಲ್ಲದ ಯೂನಿಟ್‌ಗೆ ಬೆಂಕಿ ಹರಡುವ ಸಾಧ್ಯತೆಗಳಿತ್ತು. ನಮ್ಮ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಆಗಮಿಸಿ ಬೆಂಕಿ ನಂದಿಸಿದ್ದರಿಂದ ಸಂಭವಿಸಬಹುದಾದ ದೊಡ್ಡ ಅವಘಡ ತಪ್ಪಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಸಂಭವಿಸಿದೆಯೋ ಅಥವಾ ಬೇರೆ ಕಾರಣವಿದಿಂದ ಬೆಂಕಿ ಅವಘಡ ಸಂಭವಿಸಿದೆಯೇ ಎಂಬ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲಾಗುವುದು ಎಂದರು. --------------- ಬೆಂಕಿ ಅನಾಹುತದಲ್ಲಿ ಪ್ಯಾಕಿಂಗ್ ಮಾಡುವ ವಸ್ತುಗಳು ಹಾನಿಯಾಗಿರುವುದು ಬಿಟ್ಟರೆ ಉಳಿದಂತೆ ಇತರೆ ಘಟಕಗಳಿಗೆ ಹಾನಿಯಾಗಿಲ್ಲ. ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಒಕ್ಕೂಟಕ್ಕೆ ಸಂಭವಿಸಬಹುದಾಗಿದ್ದ ಕೋಟ್ಯಂತರ ರು. ನಷ್ಟ ತಪ್ಪಿದೆ. ಘಟನೆ ಬಗ್ಗೆ ವಿಮಾ ಕಂಪನಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ ನಂತರ ಹಾನಿಯ ನಿಖರ ಅಂದಾಜು ತಿಳಿಯಲಿದೆ. - ಬೋರೇಗೌಡ, ಅಧ್ಯಕ್ಷರು, ಮನ್‌ಮುಲ್