ಸಂತೋಷ ದೈವಜ್ಞ
ಮುಂಡಗೋಡ: ಸುಮಾರು ₹3 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಪಟ್ಟಣದ ಅಗ್ನಿಶಾಮಕ ಠಾಣೆ ಕಟ್ಟಡ ಕಾಮಗಾರಿ ಪೂರ್ಣಗೊಂಡು ಆರು ತಿಂಗಳು ಕಳೆದರೂ ಉದ್ಘಾಟನೆಯ ಭಾಗ್ಯ ಲಭಿಸಿಲ್ಲ. ಇದರಿಂದ ಅಗ್ನಿಶಾಮಕ ಠಾಣೆ ಸಿಬ್ಬಂದಿಗೆ ಸುಸಜ್ಜಿತ ಸೂರು ಸಿಗದೇ ಸಮಸ್ಯೆ ಎದುರಿಸುವುದು ಇಂದಿಗೂ ತಪ್ಪಿಲ್ಲ.ಕೆಲವು ವರ್ಷಗಳ ಹಿಂದೆ ತಾಲೂಕಿನ ಯಾವುದೇ ಮೂಲೆಯಲ್ಲಿ ಅಗ್ನಿ ಅನಾಹುತ ನಡೆದರೂ ಆ ಸಮಯದಲ್ಲಿ ಶಿರಸಿ, ಹುಬ್ಬಳ್ಳಿ, ಹಾನಗಲ್ ತಾಲೂಕಿಗೆ ಮಾಹಿತಿ ನೀಡಿ ಅಗ್ನಿಶಾಮಕ ವಾಹನ ಕರೆಸಬೇಕಾಗಿತ್ತು. ಆ ವಾಹನ ಬರುವಷ್ಟರಲ್ಲಿ ಬೆಂಕಿ ಸಂಪೂರ್ಣ ವ್ಯಾಪಿಸಿ ಹೆಚ್ಚು ಅನಾಹುತ ಸಂಭವಿಸುತ್ತಿತ್ತು. ಹೀಗಾಗಿ ಹಲವು ವರ್ಷಗಳಿಂದ ಪ್ರತ್ಯೇಕ ಅಗ್ನಿಶಾಮಕ ಠಾಣೆ ಬೇಕೆಂಬ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ೨೦೧೩ರಲ್ಲಿ ಅಂದಿನ ಶಾಸಕ ವಿ.ಎಸ್. ಪಾಟೀಲ ಇಚ್ಚಾಶಕ್ತಿ, ಪ್ರಯತ್ನದ ಫಲವಾಗಿ ತಾಲೂಕಿಗೆ ಪ್ರತ್ಯೇಕ ಅಗ್ನಿಶಾಮಕ ಠಾಣೆ ಮಂಜೂರಾಯಿತು. ಇಲ್ಲಿಯ ಪಂಚಾಯತ್ ರಾಜ್ ಇಲಾಖೆಯ ಕಚೇರಿ ಆವರಣದಲ್ಲಿ ತಾತ್ಕಾಲಿಕ ಅಗ್ನಿಶಾಮಕ ಠಾಣೆ ನಿರ್ಮಿಸಿ, ವಾಹನ ನಿಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ೨೦೨೦ರಲ್ಲಿ ಎಪಿಎಂಸಿ ಆವರಣದಲ್ಲಿ ಪಪಂನಿಂದ ಕೊಳವೆಬಾವಿ ಕೊರೆದು ತಾತ್ಕಾಲಿಕ ಶೆಡ್ ನಿರ್ಮಿಸಿ ಅಗ್ನಿಶಾಮಕ ಠಾಣೆ ಸ್ಥಳಾಂತರಿಸಲಾಯಿತು. ಆ ಬಳಿಕ ಶಾಸಕ ಶಿವರಾಮ ಹೆಬ್ಬಾರ ಸಚಿವರಾದ ವೇಳೆ ಅಗ್ನಿಶಾಮಕ ಠಾಣೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಎಪಿಎಂಸಿ ಆವರಣದಲ್ಲಿ ಲೀಜ್ ಮೂಲಕ ಜಾಗ ಪಡೆದು ಸುಮಾರು ₹3 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು ಅನುದಾನ ನೀಡಿದ್ದರು. ಅದರಂತೆ ಸುಸಜ್ಜಿತ ಅಗ್ನಿಶಾಮಕ ಠಾಣೆ ಕಟ್ಟಡ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಜ್ಜಾಗಿದೆ.
ಅವ್ಯವಸ್ಥೆಯ ಆಗರ: ಈಗಿನ ಅಗ್ನಿಶಾಮಕ ಠಾಣೆ ಶೆಡ್ ಚಾವಣಿಯು ಮಳೆ ಬಂದರೆ ಸೋರುತ್ತದೆ. ಮಳೆನೀರು ಒಳಗೆ ನುಗ್ಗುತ್ತದೆ. ಸಿಬ್ಬಂದಿ ಅದರಲ್ಲಿಯೇ ಮಲಗುತ್ತಾರೆ. ರಾತ್ರಿ ವೇಳೆಯಲ್ಲಿ ಮಳೆ ಬಂದರಂತೂ ಸಿಬ್ಬಂದಿ ಸ್ಥಿತಿ ಆ ದೇವರಿಗೆ ಪ್ರೀತಿ. ಸುತ್ತ ಅರಣ್ಯ ಪ್ರದೇಶವಿರುವುದರಿಂದ ಹಾವುಗಳು ಒಳಗೆ ನುಗ್ಗುತ್ತವೆ. ಈಗಲೂ ಕಟ್ಟಡ ಉದ್ಘಾಟಿಸಿ ಉಪಯೋಗಕ್ಕೆ ನೀಡದಿದ್ದರೆ ಮಳೆಗಾಲದಲ್ಲಿ ಮತ್ತಷ್ಟು ಪರದಾಡಬೇಕಿದೆ. ತಕ್ಷಣ ಠಾಣೆ ಉದ್ಘಾಟಿಸಿದರೆ ಈ ಸಮಸ್ಯೆಗೆ ಪರಿಹಾರ ಸಿಕ್ಕಂತಾಗುತ್ತದೆ ಎನ್ನುವುದು ಅಗ್ನಿಶಾಮಕ ಠಾಣೆ ಸಿಬ್ಬಂದಿಯ ಅಂಬೋಣ.ಹೆಚ್ಚುವರಿ ವಾಹನಕ್ಕೆ ಆಗ್ರಹ: ಸದ್ಯ ಇಲ್ಲಿಯ ಅಗ್ನಿಶಾಮಕ ಠಾಣೆಯಲ್ಲಿ ಒಂದು ವಾಹನ ಕಾರ್ಯ ನಿರ್ವಹಿಸುತ್ತಿದೆ. ಇದರಿಂದ ಒಂದಕ್ಕಿಂತ ಹೆಚ್ಚು ಕಡೆ ಅಗ್ನಿ ಅಪಘಾತ ನಡೆದರೆ ತಕ್ಷಣ ಸ್ಥಳಕ್ಕೆ ಧಾವಿಸಲಾಗುವುದಿಲ್ಲ. ತಾಲೂಕು ವಿಸ್ತಾರವಾಗಿರುವುದರಿಂದ ಕನಿಷ್ಠ ೨ ಅಗ್ನಿಶಾಮಕ ವಾಹನಗಳನ್ನು ನೀಡಬೇಕಿದೆ. ಸ್ವಂತ ಕಟ್ಟಡ ಇಲ್ಲದ ಕಾಣರದಿಂದ ಒಂದು ಅಗ್ನಿಶಾಮಕ ವಾಹನ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ಹೊಸದಾಗಿ ನಿರ್ಮಾಣ ಮಾಡಲಾಗಿರುವ ಠಾಣೆಯಲ್ಲಿ ಮೂರು ಅಗ್ನಿಶಾಮಕ ವಾಹನ ನಿಲ್ಲಿಸುವ ವ್ಯವಸ್ಥೆ ಕಲ್ಪಿಸಲಾಗಿದ್ದು, ಅದರಂತೆ ಹೆಚ್ಚುವರಿ ವಾಹನ, ಸಿಬ್ಬಂದಿ ನೇಮಿಸಬೇಕು ಎನ್ನುವುದು ಪ್ರಜ್ಞಾವಂತ ನಾಗರಿಕರ ಆಗ್ರಹ.
ಅಗ್ನಿಶಾಮಕ ದಳ ಠಾಣೆ ಉದ್ಘಾಟನೆ ಬಗ್ಗೆ ಗೃಹಮಂತ್ರಿ ಬಳಿ ಚರ್ಚಿಸಲಾಗಿದೆ. ಶೀಘ್ರದಲ್ಲಿ ದಿನಾಂಕ ನಿಗದಿಪಡಿಸಿ, ಅಗ್ನಿಶಾಮಕ ವಾಹನ, ಸೌಲಭ್ಯಗಳನ್ನು ಒದಗಿಸಲಾಗುವುದು ಎನ್ನುತ್ತಾರೆ ಶಾಸಕ ಶಿವರಾಮ ಹೆಬ್ಬಾರ.ಅಗ್ನಿಶಾಮಕ ಠಾಣೆ ಇಲ್ಲದ ಸಂದರ್ಭದಲ್ಲಿ ಸಾಕಷ್ಟು ತೊಂದರೆ ಅನುಭವಿಸಿದ್ದೇವೆ. ಈಗ ಅಗ್ನಿಶಾಮಕ ಠಾಣೆ ಸ್ವಂತ ಕಟ್ಟಡ ನಿರ್ಮಾಣವಾಗಿದ್ದರೂ ಉದ್ಘಾಟನೆಗೆ ವಿಳಂಬ ಮಾಡುತ್ತಿರುವುದು ಶೋಚನಿಯ. ತಕ್ಷಣವೇ ಕಟ್ಟಡ ಉದ್ಘಾಟಿಸಿ ಅಗತ್ಯ ವಾಹನ, ಸಿಬ್ಬಂದಿ ನೇಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಸಂಗಮೇಶ ಬಿದರಿ.