ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸದಂತೆ ಜಾರಿ ನಿರ್ದೇಶನಾಲಯ(ಇ.ಡಿ)ಕ್ಕೆ ಹೈಕೊರ್ಟ್ ನಿರ್ದೇಶಿಸಿದೆ.
ಬೆಂಗಳೂರು : ಹಲವರಿಗೆ ಕೋಟ್ಯಂತರ ರುಪಾಯಿ ಮೌಲ್ಯದ ಚಿನ್ನಾಭರಣ ವಂಚಿಸಿದ ಪ್ರಕರಣದಲ್ಲಿ ಸಿಲುಕಿರುವ ಐಶ್ವರ್ಯಾ ಗೌಡ ಜೊತೆ ಹಣಕಾಸು ವ್ಯವಹಾರ ನಡೆಸಿರುವ ಆರೋಪ ಸಂಬಂಧ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸದಂತೆ ಜಾರಿ ನಿರ್ದೇಶನಾಲಯ(ಇ.ಡಿ)ಕ್ಕೆ ಹೈಕೊರ್ಟ್ ನಿರ್ದೇಶಿಸಿದೆ.
ತಮ್ಮ ವಿರುದ್ಧ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ (ಪಿಎಂಎಲ್‌ಎ) ಇ.ಡಿ. ನೀಡಿರುವ ಸಮನ್ಸ್ ರದ್ದು ಕೋರಿ ಶಾಸಕ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣವರ್ ಅವರ ಪೀಠ ಈ ಮಧ್ಯಂತರ ಆದೇಶ ಮಾಡಿದೆ.
ಇದಕ್ಕೂ ಮುನ್ನ ಇ.ಡಿ. ಪರ ಹಾಜರಿದ್ದ ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ ಕಾಮತ್ ಅವರು, ವಿನಯ್ ಕುಲಕರ್ಣಿ ಪರ ಮಧ್ಯಂತರ ನೀಡುವುದಕ್ಕೆ ಆಕ್ಷೇಪಿಸಿದರು. ಅರ್ಜಿಗೆ ಇ.ಡಿ. ಸಲ್ಲಿಸಿರುವ ಲಿಖಿತ ಆಕ್ಷೇಪಣೆ ಪರಿಗಣಿಸಬೇಕು. ತಮ್ಮ ವಾದ ಆಲಿಸದೆ ಮಧ್ಯಂತರ ಆದೇಶ ನೀಡಬಾರದು ಎಂದು ಕಾಮತ್ ನ್ಯಾಯಪೀಠವನ್ನು ಕೋರಿದರು.
ಆದರೆ, ಮಧ್ಯಂತರ ಆದೇಶಕ್ಕೆ ಇ.ಡಿ. ಆಕ್ಷೇಪಣೆ ಪರಿಗಣಿಸಲು ನಿರಾಕರಿಸಿದ ನ್ಯಾಯಪೀಠ, ವಿನಯ್ ಕುಲಕರ್ಣೀ ಪರ ಬಲವಂತದ ಕ್ರಮ ಜರುಗಿಸದಂತೆ ಸೂಚಿಸಿ ವಿಚಾರಣೆ ಮುಂದೂಡಿತು.
ಐಶ್ವರ್ಯಾ ಗೌಡ 75 ಕೋಟಿ ರು. ಅಕ್ರಮ ವಹಿವಾಟು ನಡೆಸಿದ್ದಾರೆ. ಆಕೆಗೆ ವಿನಯ್ ಕುಲಕರ್ಣಿ 24 ಕೋಟಿ ರು. ಸಾಲವಾಗಿ ನೀಡಿದ್ದಾರೆ ಎಂದು ಇ.ಡಿ. ಹೇಳಿತ್ತು. ಜೊತೆಗೆ, ಈ ವಿಚಾರವಾಗಿ ಏ.24 ಮತ್ತು 25ರಂದು ವಿನಯ್ ಕುಲಕರ್ಣಿ ಮನೆ ಮೇಲೆ ಇ.ಡಿ. ಅಧಿಕಾರಿಗಳು ದಾಳಿ ನಡೆಸಿ, ಹಲವು ದಾಖಲೆ ಜಪ್ತಿ ಮಾಡಿದ್ದರು. ಜೊತೆಗೆ, ವಿಚಾರಣೆಗೆ ಹಾಜರಾಗಲು ಸೂಚಿಸಿ ಸಮನ್ಸ್ ಜಾರಿ ಮಾಡಿದ್ದರು.
ಇದರಿಂದ ತಮ್ಮ ಮನೆ ಮೇಲೆ ದಾಳಿ ಮಾಡಿ ಶೋಧ ನಡೆಸಿರುವುದು, ಮನೆಯಿಂದ ಹಲವು ದಾಖಲೆ, ವಸ್ತುಗಳನ್ನು ಜಪ್ತಿ ಮಾಡಿರುವುದು, ಹೇಳಿಕೆ ದಾಖಲಿಸಿಕೊಂಡಿರುವ ಪ್ರಕ್ರಿಯೆಯನ್ನು ಕಾನೂನುಬಾಹಿರ ಎಂದು ಘೋಷಿಸುವಂತೆ ಕೋರಿ ವಿನಯ್ ಕುಲಕರ್ಣಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.