ಪ್ರತಿ ತಾಲೂಕಿಗೂ ಅಗ್ನಿಶಾಮಕ ಠಾಣೆ ಮಂಜೂರು: ಟಿ.ಡಿ.ರಾಜೇಗೌಡ

KannadaprabhaNewsNetwork | Published : Feb 19, 2024 1:34 AM

ಸಾರಾಂಶ

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ ಲಾಭದಾಯಿಕ ಸಂಸ್ಥೆಯಾಗಿದೆ ಎಂದು ಶಾಸಕ ಹಾಗೂ ಇಂಧನ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷ ಟಿ.ಡಿ.ರಾಜೇಗೌಡ ತಿಳಿಸಿದರು.

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ತುರ್ತು ಸೇವೆಯಡಿ ಬರುವ ಅಗ್ನಿ ಶ್ಯಾಮಕ ಠಾಣೆಯನ್ನು ಸರ್ಕಾರ ಪ್ರತಿ ತಾಲೂಕಿನಲ್ಲೂ ನಿರ್ಮಿಸುತ್ತಿದೆ ಎಂದು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಡಿ.ರಾಜೇಗೌಡ ತಿಳಿಸಿದರು.

ಭಾನುವಾರ ಹಿಳುವಳ್ಳಿ ಗ್ರಾಮದಲ್ಲಿ ನೂತನವಾಗಿ 3 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಅಗ್ನಿ ಶಾಮಕ ಠಾಣಾ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಗಾಳಿ, ಬೆಂಕಿ, ನೀರಿನಿಂದ ಅನಾಹುತ ತಡೆಯಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಾಗಿದೆ. ಬೆಂಕಿ ಬಿದ್ದಾಗ ತುರ್ತು ಕಾರ್ಯಾಚರಣೆ ಅಗತ್ಯವಾಗಿದ್ದು ಪ್ರತಿ ತಾಲೂಕಿನ ಅಗ್ನಿಶಾಮಕ ದಳಕ್ಕೆ ಎಲ್ಲಾ ಮೂಲ ಭೂತ ಸೌಕರ್ಯ ಒದಗಿಸಿಕೊಡಬೇಕಾಗಿದೆ. ಅಗ್ನಿಶಾಮಕದಳದ ಸಿಬ್ಬಂದಿ ತುರ್ತು ಕಾರ್ಯಾಚರಣೆ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಾರೆ.ಅವರಿಗೆ ವಸತಿ ಗೃಹ ನಿರ್ಮಾಣ ಮಾಡಿಕೊಡುವ ಈ ಬಗ್ಗೆ ಸರ್ಕಾರದಲ್ಲೂ ಪ್ರಸ್ತಾಪ ಮಾಡುತ್ತೇನೆ. ಶೃಂಗೇರಿ ತಾಲೂಕಿನಲ್ಲಿ ಈಗಾಗಲೇ ಅಗ್ನಿಶಾಮಕ ಠಾಣೆ ನಿರ್ಮಿಸಲಾಗಿದ್ದು ಕೊಪ್ಪದಲ್ಲೂ ಶೀಘ್ರದಲ್ಲೇ ನಿರ್ಮಿಸುತ್ತೇವೆ ಎಂದು ಭರವಸೆ ನೀಡಿದರು. ಅಗ್ನಿಶಾಮಕ ದಳದ ಶಿವಮೊಗ್ಗ ಪ್ರಾಂತ್ಯದ ಮುಖ್ಯ ಅಧಿಕಾರಿ ಬಿ.ಎಂ.ತಿರುಮಲೇಶ್‌ ಮಾತನಾಡಿ, ನರಸಿಂಹರಾಜಪುರದಲ್ಲಿ ಅಗ್ನಿಶಾಮಕ ಠಾಣಾ ಕಚೇರಿ ನಿರ್ಮಿಸಲು 2 ಎಕರೆ ಜಾಗ ನೀಡಿದ್ದಾರೆ. 3 ಕೋಟಿ ರು.ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಠಾಣಾ ಕಟ್ಟಡಕ್ಕೆ ಶೀಘ್ರದಲ್ಲೇ ಟೆಂಡರ್‌ ಕರೆದು ಕಟ್ಟಡ ನಿರ್ಮಿಸಲಾಗುವುದು. ಅಗ್ನಿ ಶಾಮಕ ದಳದವರು ಸದಾ ಕಾಲ ಸಾರ್ವಜನಿಕರಿಗೆ ಸೇವೆ ನೀಡುತ್ತೇವೆ. ತುರ್ತು ಸಂದರ್ಭದಲ್ಲಿ ನಮ್ಮ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಮಾಡುತ್ತಾರೆ ಎಂದರು. ಅತಿಥಿಯಾಗಿದ್ದ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ ಮಾತನಾಡಿ, ಇದುವರೆಗೂ ಅಗ್ನಿಶಾಮಕ ದಳದ ಕಚೇರಿ ಪಟ್ಟಣ ವ್ಯಾಪ್ತಿಯಲ್ಲಿ ಬಾಡಿಗೆ ಕಟ್ಟಡದಲ್ಲಿತ್ತು. ಶಾಸಕರ ಪ್ರಯತ್ನದಿಂದ 3 ಕೋಟಿ ಮಂಜೂರಾಗಿದ್ದು ನೂತನ ಠಾಣಾ ಕಟ್ಟಡ ನಿರ್ಮಾಣವಾಗಲಿದೆ. ನರಸಿಂಹರಾಜಪುರ ಅಗ್ನಿಶಾಮಕ ದಳಕ್ಕೆ ಹೊಸ ವಾಹನದ ಅಗತ್ಯವಿದೆ ಎಂದರು. ಅತಿಥಿಗಳಾಗಿ ನಾಗಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೀನಾ ಬೆನ್ನಿ, ಗ್ರಾಮ ಪಂಚಾಯಿತಿ ಸದಸ್ಯೆ ಯಾಸ್ಮೀನ್, ಪಟ್ಟಣ ಪಂಚಾಯಿತಿ ಸದಸ್ಯ ಮುನಾವರ್‌ ಪಾಷಾ, ಬಗರ್ ಹುಕಂ ಸಮಿತಿ ಅಧ್ಯಕ್ಷ ಇ.ಸಿ.ಜೋಯಿ, ಅಗ್ನಿ ಶಾಮಕದಳದ ಶಿವಮೊಗ್ಗ ವಲಯದ ಅಧಿಕಾರಿ ಎಚ್.ರಾಜು, ಮೈಸೂರು ಹೌಸಿಂಗ್‌ ಕಾರ್ಪೋರೇಷನ್ ಕಾರ್ಯ ನಿರ್ವಹಣಾಧಿಕಾರಿ ಪದ್ಮಜಾ, ಇಂಜಿನಿಯರ್ ರವಿ, ಅಗ್ನಿಶಾಮಕ ದಳದ ಚಿಕ್ಕಮಗಳೂರು ವಲಯ ಅಧಿಕಾರಿ ಪ್ರವೀಣ್‌, ನರಸಿಂಹರಾಜಪುರ ಅಗ್ನಿ ಶಾಮಕದ ದಳದ ಠಾಣಾಧಿಕಾರಿ ಹೆನ್ರಿ ಡಿಸೋಜ ಇದ್ದರು. ಅಭಿನವ ಗಿರಿರಾಜ್ ಕಾರ್ಯಕ್ರಮ ನಿರ್ವಹಿಸಿದರು.

ನವೀಕರಿಸಬಹುದಾದ ಇಂಧನ ಅಭಿವೃದ್ದಿ ನಿಗಮ ಲಾಭದಾಯಕ ಸಂಸ್ಥೆ: ಟಿ.ಡಿ.ರಾಜೇಗೌಡ- ಪ್ರತಿ ವರ್ಷ ನಿಗಮಕ್ಕೆ 90 ಕೋಟಿ ಲಾಭ ಬರುತ್ತಿದೆ ।ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ ಲಾಭದಾಯಿಕ ಸಂಸ್ಥೆಯಾಗಿದೆ ಎಂದು ಶಾಸಕ ಹಾಗೂ ಇಂಧನ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷ ಟಿ.ಡಿ.ರಾಜೇಗೌಡ ತಿಳಿಸಿದರು.ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಫೆ.29 ರಂದು ನಿಗಮದ ಬೋರ್ಡಿನ ಸಭೆ ಕರೆದಿದ್ದೇನೆ. ಪ್ರತಿ ವರ್ಷ ನಿಗಮಕ್ಕೆ 90 ಕೋಟಿ ಲಾಭ ಬರುತ್ತಿದೆ. ನಿಗಮದಲ್ಲಿ 700 ರಿಂದ 800 ಕೋಟಿ ರು. ಠೇವಣಿ ಇದೆ.ಇದರಲ್ಲಿ 250 ಕೋಟಿ ರು. ಸಾಲ ನೀಡಲು ಒಪ್ಪಿಗೆ ನೀಡಿದ್ದೇವೆ.1.80 ಕೋಟಿ ಸಿ.ಆರ್.ಎಸ್ ಫಂಡಿನಲ್ಲಿದೆ. ಸರ್ಕಾರಕ್ಕೆ 23 ಕೋಟಿ ರು. ನೀಡಲು ನಿರ್ಧರಿಸಿದ್ದೇವೆ ಎಂದರು.ನವೀಕರಿಸಬಹುದಾದ ಇಂಧನ ನಿಗಮದ ಸಿ.ಆರ್‌.ಎಸ್‌ ಫಂಡಿನಿಂದ ಕೊಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಟೇಡಿಯಂ ನಿರ್ಮಿಸಲು 1 ಕೋಟಿ ರು.ನೀಡಲು ತೀರ್ಮಾನಿಸಿದ್ದೇವೆ. ಇಂಧನ ನಿಗಮದಿಂದ ಸೋಲಾರ್‌ಗೆ ಹೆಚ್ಚು ಒತ್ತು ನೀಡುತ್ತೇವೆ. ಸೋಲಾರ್‌ ಪಂಪ್ ಸೆಟ್‌ ನಿರ್ಮಿಸಿದರೆ ಕೇಂದ್ರ ಸರ್ಕಾರ ಶೇ 20 ರಷ್ಟು ಸಹಾಯ ಧನ ಹಾಗೂ ರಾಜ್ಯ ಸರ್ಕಾರ ಶೇ 80 ರಷ್ಟು ಸಹಾಯ ಧನ ನೀಡಲಿದೆ. ಈ ಬಗ್ಗೆ ಈಗಾಗಲೇ ಟೆಂಡರ್‌ ಕರೆದಿದ್ದೇವೆ ಎಂದರು.ಪ್ರತಿ ಮನೆ, ಮನೆಗಳಲ್ಲೂ ಸೋಲಾರ್‌ ದೀಪಕ್ಕೆ ಸಹಾಯ ಧನ ನೀಡುತ್ತೇವೆ. ಬಜೆಟ್‌ ನಲ್ಲೂ ಈ ಬಗ್ಗೆ ಪ್ರಸ್ತಾಪ ಮಾಡಲಾಗಿದೆ ಎಂದರು.ಶೃಂಗೇರಿ ಆಸ್ಪತ್ರೆಗೆ 100 ಹಾಸಿಗೆ: ರಾಜ್ಯದ 7 ತಾಲೂಕಿನ ಆಸ್ಪತ್ರೆಗಳನ್ನು 100 ಹಾಸಿಗೆಗೆ ಮೇಲ್ದರ್ಜೆಗೆ ಏರಿಸಲಾಗಿದ್ದು ಇದರಲ್ಲಿ ಶೃಂಗೇರಿ ಸರ್ಕಾರಿ ಆಸ್ಪತ್ರೆ ಸೇರಿದೆ. ರಾಜ್ಯದಲ್ಲಿ 5 ಗ್ಯಾರಂಟಿಗಾಗಿ 52 ಸಾವಿರ ಕೋಟಿ ರು. ನೀಡಿದ್ದೇವೆ ಎಂದರು.ರೇಲ್ವೆ ಬ್ಯಾರಿಕೇಡ್: ಮಲೆನಾಡಿನಲ್ಲಿ ಆನೆಗಳ ಕಾಟ ಜಾಸ್ತಿಯಾಗಿದ್ದು ಇದರ ಹತೋಟಿಗಾಗಿ ರೇಲ್ವೆ ಬ್ಯಾರಿಕೇಡ್ ನಿರ್ಮಿಸಲಾಗುವುದು. ಆನೆಗಳನ್ನು ಓಡಿಸಲು ಎಲಿಫಂಟ್ ಟಾಸ್ಕ್‌ ಪೋರ್ಸ್ ನ್ನು ನರಸಿಂಹರಾಜಪುರ ತಾಲೂಕಿನ ಮುತ್ತಿನಕೊಪ್ಪದಲ್ಲಿ ನಿರ್ಮಿಸಲಾಗುವುದು ಎಂದರು.ಈ ಹಿಂದೆ ಆನೆಗಳನ್ನು ದೇವಸ್ಥಾನದಲ್ಲಿ, ಜಾತ್ರೆಗಳಲ್ಲಿ, ಟಿಂಬರ್‌ ಎಳೆಯಲು ಬಳಸಲಾಗುತ್ತಿತ್ತು. ಈಗ ಮರಗಳನ್ನು ಎಳೆಯಲು ಕ್ರೇನ್ ಬಳಸಲಾಗುತ್ತಿದೆ. ಆನೆಗಳು ನಾಡಿಗೆ ನುಗ್ಗುತ್ತಿದೆ. ಆನೆಗಳ ಸಂಖ್ಯೆ ಜಾಸ್ತಿಯಾಗಿದೆ. ರೈತರ ಬದುಕು ದುಸ್ತರವಾಗುತ್ತಿದೆ.ಸರ್ಕಾರ, ಅರಣ್ಯ ಇಲಾಖೆ ಗಮನ ಹರಿಸಬೇಕಾಗಿದೆ. ಸದನದಲ್ಲೂ ಈ ಬಗ್ಗೆ ಪ್ರಸ್ತಾಪ ಮಾಡುತ್ತೇನೆ. ಕಾಡಿನಲ್ಲಿ ಆನೆಗಳ ಆಹಾರವಾದ ಬಿದಿರು, ಹಲಸು ಮುಂತಾದ ಗಿಡಗಳನ್ನು ಬೆಳೆದರೆ ಆನೆಗಳು ಕಾಡಿನಿಂದ ನಾಡಿಗೆ ಬರುವುದು ಕಡಿಮೆಯಾಗಬಹುದು ಎಂದು ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ, ನಗರ ಕಾಂಗ್ರೆಸ್‌ ಅಧ್ಯಕ್ಷ ಬಿಳಾಲುಮನೆ ಉಪೇಂದ್ರ, ತಾಲೂಕು ಬಗರ್‌ ಬುಕಂ ಸಮಿತಿ ಅಧ್ಯಕ್ಷ ಇ.ಸಿ.ಜೋಯಿ ಇದ್ದರು.

Share this article