ಅವಘಡಗಳ ವೇಳೆ ಅಗ್ನಿ ಶಾಮಕ ಠಾಣೆ ಸಿಬ್ಬಂದಿ ಸೇವೆ ಶ್ಲಾಘನೀಯ: ದೊಡ್ಡಯ್ಯ

KannadaprabhaNewsNetwork | Published : Apr 15, 2025 12:46 AM

ಸಾರಾಂಶ

ಬೆಂಕಿ ಅವಘಡಗಳು, ಪ್ರವಾಹ ಪರಿಸ್ಥಿತಿ, ಉಂಟಾದಾಗ ಠಾಣೆ ಸಿಬ್ಬಂದಿ ತಮ್ಮ ಪ್ರಾಣದ ಹಂಗು ತೊರೆದು ರಕ್ಷಣಾ ಕಾರ್ಯದಲ್ಲಿ ತೊಡಗುತ್ತಾರೆ. ಜನರಿಗೆ ಠಾಣೆ ಸಿಬ್ಬಂದಿ ಮೇಲೆ ಅದಮ್ಯ ನಂಬಿಕೆ ಹಾಗೂ ವಿಶ್ವಾಸ. ಈ ಹಿಂದೆ ರಾಜ್ಯದಲ್ಲಿ ಕೆಲವೇ ಅಗ್ನಿಶಾಮಕ ಠಾಣೆಗಳಿದ್ದವು. ಈಗ ಪ್ರತಿ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ತೆರೆಯಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಅಗ್ನಿಅವಘಡಗಳು ಸಂಭವಿಸಿದಾಗ ತುರ್ತು ಕರೆಗೆ ಸದಾ ಸ್ಪಂದಿಸುವ ಅಗ್ನಿಶಾಮಕ ಠಾಣೆ ಅಧಿಕಾರಿಗಳು ಹಾಗೂ ಸಿಬ್ಬಂದಿ ರಕ್ಷಣಾ ಕಾರ್ಯ ಶ್ಲಾಘನೀಯ ಎಂದು ನಿವೃತ್ತ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ದೊಡ್ಡಯ್ಯ ಪ್ರಶಂಸಿಸಿದರು.

ನಗರದ ಹೊರವಲಯದ ಅಗ್ನಿಶಾಮಕ ಠಾಣೆ ಕವಾಯತು ಮೈದಾನದಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಆಯೋಜಿಸಿದ್ದ ಅಗ್ನಿಶಾಮಕ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮರಿಗೆ ಪುಷ್ಪಗಚ್ಛ ನಮನ ಸಲ್ಲಿಸಿ ಮಾತನಾಡಿ, ಯಾವುದೇ ಅವಘಡ ಸಂಭವಿಸಿದರೂ ಮೊದಲಿಗೆ ಅಗ್ನಿಶಾಮಕ ಠಾಣೆಗೆ ಕರೆ ಬರುತ್ತವೆ. ತುರ್ತು ಪರಿಸ್ಥಿತಿಗೆ ಸ್ಪಂದಿಸುವ ಏಕೈಕ ಇಲಾಖೆ ಎಂಬುದು ಜನರ ಮನಸ್ಸಿನಲ್ಲಿ ಮೂಡಿದೆ ಎಂದರು.

ಬೆಂಕಿ ಅವಘಡಗಳು, ಪ್ರವಾಹ ಪರಿಸ್ಥಿತಿ, ಉಂಟಾದಾಗ ಠಾಣೆ ಸಿಬ್ಬಂದಿ ತಮ್ಮ ಪ್ರಾಣದ ಹಂಗು ತೊರೆದು ರಕ್ಷಣಾ ಕಾರ್ಯದಲ್ಲಿ ತೊಡಗುತ್ತಾರೆ. ಜನರಿಗೆ ಠಾಣೆ ಸಿಬ್ಬಂದಿ ಮೇಲೆ ಅದಮ್ಯ ನಂಬಿಕೆ ಹಾಗೂ ವಿಶ್ವಾಸ ಎಂದರು.

ಈ ಹಿಂದೆ ರಾಜ್ಯದಲ್ಲಿ ಕೆಲವೇ ಅಗ್ನಿಶಾಮಕ ಠಾಣೆಗಳಿದ್ದವು. ಈಗ ಪ್ರತಿ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ತೆರೆಯಲಾಗಿದೆ. ಸರ್ಕಾರ ತಾಂತ್ರಿಕ ಹಾಗೂ ಸುಸಜ್ಜಿತ ವಾಹನಗಳನ್ನು ಇಲಾಖೆಗೆ ನೀಡಿದೆ. ಇದರಿಂದ ಅನಾಹುತ ಸಂಭವಿಸಿದಾಗ ತುರ್ತು ಕರೆಗೆ ಸ್ಪಂದಿಸಿ ಸಾರ್ವಜನಿಕರ ಆಸ್ತಿ-ಪಾಸ್ತಿ ರಕ್ಷಣಾ ಕಾರ್ಯ ಉತ್ತಮವಾಗಿ ನಡೆಯುತ್ತಿದೆ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಪ್ರಶಂಸಿಸಿದರು.

ಸರ್ಕಾರ ಇಲಾಖೆಗೆ ಇನ್ನು ಹೆಚ್ಚಿನ ನೆರವು ನೀಡಬೇಕು. ಹುತಾತ್ಮರ ಹೆಸರಿನಲ್ಲಿ ಕಾರ್ಯಕ್ರಮ ಮಾಡುವುದು ಉತ್ತಮ ಕೆಲಸ. ಹುತಾತ್ಮರ ಆತ್ಮಕ್ಕೆ ಶಾಂತಿ ಸಿಗುವ ಜೊತೆಗೆ ಕುಟುಂಬ ವರ್ಗದವರಿಗೂ ಆತ್ಮಸ್ಥೈರ್ಯ ತುಂಬಿದತಾಗುತ್ತದೆ ಎಂದರು.

ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಿ.ಎಂ.ರಾಘವೇಂದ್ರ ಮಾತನಾಡಿ, 1944 ಏಪ್ರಿಲ್ 14 ರಂದು ಮುಂಬೈ ಬಂದರಿನ ವಿಕ್ಟೋರಿಯಾ ಡಾಕ್‌ನಲ್ಲಿ ಸ್ಫೋಟಕ ವಸ್ತುಗಳನ್ನು ಸಾಗಿಸುತ್ತಿದ್ದ ಹಡಗು ಘೋರ ಅಗ್ನಿ ಅನಾಹುತಕ್ಕೆ ಸಿಲುಕಿತ್ತು. ಈ ವೇಳೆ ಬೆಂಕಿ ನಂದಿಸಲು ಮುಂಬೈ ಫೈರ್ ಬ್ರಿಗೇಡ್‌ನ ಅಧಿಕಾರಿ ಹಾಗೂ ಸಿಬ್ಬಂದಿ ಕರ್ತವ್ಯ ನಿರತರಾಗಿದ್ದಾಗ ಹಡಗು ಸ್ಫೋಟಗೊಂಡು 66 ಮಂದಿ ವೀರ ಮರಣ ಹೊಂದಿದ್ದರು. ಈ ಹುತಾತ್ಮರ ನೆನಪಿಗಾಗಿ ಏಪ್ರಿಲ್ 14 ರಂದು ಪ್ರತಿ ವರ್ಷ ಹುತಾತ್ಮರ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.

ಪ್ರತಿ ವರ್ಷ ಏಪ್ರಿಲ್ 14 ರಿಂದ 20 ರವರೆಗೆ ದೇಶದಾದ್ಯಂತ ಅಗ್ನಿಶಾಮಕ ಸೇವಾ ಸಪ್ತಾಹವನ್ನು ಆಚರಿಸಿ ಸಾರ್ವಜನಿಕರಿಗೆ ಅಗ್ನಿ ಸುರಕ್ಷತೆ ಬಗ್ಗೆ ತಿಳಿವಳಿಕೆ ನೀಡಿ ಅಣಕು ಪ್ರದರ್ಶನ ನಡೆಸಲಾಗುತ್ತಿದೆ. ಸಾರ್ವಜನಿಕರ ಪ್ರಾಣ ಮತ್ತು ಆಸ್ತಿ ರಕ್ಷಣಾ ಕಾರ್ಯದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಬಲಿದಾನಗೈದು ಅಮರರಾದ ವೀರ ಅಗ್ನಿಶಾಮಕರಿಗೆ ಶ್ರದ್ಧಾಂಜಲಿ ಅರ್ಪಿಸಿಸಲಾಗುತ್ತಿದೆ ಎಂದರು.

ಇದೇ ವೇಳೆ ಗಣ್ಯರು ಹುತಾತ್ಮರಿಗೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು. ಭಾರತೀಯ ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾಧ್ಯಕ್ಷ ಜಿ.ಪಿ. ಭಕ್ತವತ್ಸಲ, ಅಗ್ನಿಶಾಮಕ ಠಾಣಾಧಿಕಾರಿ ವೆಂಕಟೇಶ್, ನಿವೃತ್ತ ಅಗ್ನಿಶಾಮಕ ಠಾಣಾಧಿಕಾರಿ ಶಿವಲಿಂಗಯ್ಯ, ನಿವೃತ್ತ ಅಗ್ನಿಶಾಮಕಾಧಿಕಾರಿಗಳಾದ ಪುಟ್ಟಸೋಮರಾಧ್ಯ, ಬೊಮ್ಮಯ್ಯ ರಾಘವೇಂದ್ರ, ಪ್ರಮುಖ ಅಗ್ನಿಶಾಮಕರು ಪ್ರಭಕಾರ್ ಶೆಟ್ಟಿ, ಹಾಜರಿದ್ದರು.

Share this article