ಈರಪ್ಪ ನಾಯ್ಕರ್
ಕಾರ್ತಿಕ ಮಾಸದೊಂದಿಗೆ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ವ್ರತಾಚರಣೆ, ಭಜನೆ, ಅನ್ನದಾನ ಹಾಗೂ ಶಬರಿಮಲೆ ಯಾತ್ರೆಯ ಸಂಭ್ರಮ ರಾಜ್ಯದೆಲ್ಲೆಡೆ ಮನೆಮಾಡಿದೆ. ಗಲ್ಲಿ-ಗಲ್ಲಿಗಳಲ್ಲಿ ತಾತ್ಕಾಲಿಕ ಅಯ್ಯಪ್ಪ ಸನ್ನಿಧಾನಗಳು ಸಿದ್ಧಗೊಳ್ಳುತ್ತಿವೆ. ಆದರೆ, ಭಕ್ತಿಯ ಸಂಭ್ರಮದ ನಡುವೆ ಅಗ್ನಿ ಸುರಕ್ಷತೆ ಮರೆಯಬಾರದು.ಕಳೆದ 2 ವರ್ಷದ ಹಿಂದೆ ಹುಬ್ಬಳ್ಳಿಯ ಉಣಕಲ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತ ಇಂದಿಗೂ ಮಾಸದ ನೋವು. ಗ್ಯಾಸ್ ಸಿಲಿಂಡರ್ ಸೋರಿಕೆ, ದೀಪದ ಕಿಡಿ ಮತ್ತು ಒಂದೇ ಕೋಣೆಯಲ್ಲಿ ಮಲಗಿದ್ದ ಮಾಲಾಧಾರಿಗಳು. ಕ್ಷಣಾರ್ಧದಲ್ಲಿ ಸಂಭವಿಸಿದ ದುರಂತ ಎಂಟು ಜೀವಗಳನ್ನು ಬಲಿ ಪಡೆದಿತ್ತು. ಈ ಕಹಿ ಘಟನೆ ಮರುಕಳಿಸದಂತೆ ರಾಜ್ಯದ ಎಲ್ಲ ಅಯ್ಯಪ್ಪ ಸನ್ನಿಧಾನಗಳಲ್ಲೂ ಈ ಬಾರಿ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಅಗತ್ಯವಾಗಿದೆ.
ಎಂಟು ಜೀವ ಬಲಿ ಪಡೆದ ಅಗ್ನಿ ದುರಂತ:2024ರ ಡಿ. 23ರಂದು ಹುಬ್ಬಳ್ಳಿಯ ಉಣಕಲ್‌ನ ಅಚ್ಚವ್ವನ ಕಾಲನಿ ಅಯ್ಯಪ್ಪ ಸನ್ನಿಧಾನದಲ್ಲಿ ಅಡುಗೆ ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಭೀಕರ ಸ್ಫೋಟ ಸಂಭವಿಸಿತ್ತು. ದೇವರ ಮುಂದೆ ಹಚ್ಚಿದ್ದ ದೀಪದ ಜ್ವಾಲೆ ಸೋರಿಕೆಯಾಗಿದ್ದ ಅನಿಲಕ್ಕೆ ತಗುಲಿದ ಪರಿಣಾಮ ಸಂಭವಿಸಿದ ದುರಂತದಲ್ಲಿ ಒಂದೇ ಕೋಣೆಯಲ್ಲಿ ಮಲಗಿದ್ದ ಒಂಬತ್ತು ಮಾಲಾಧಾರಿಗಳ ಪೈಕಿ ಎಂಟು ಮಂದಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಗ್ಯಾಸ್, ದೀಪ, ವಸ್ತ್ರಗಳೇ ಅಪಾಯ:
ಸನ್ನಿಧಾನಗಳಲ್ಲಿ ಮಾಲಾಧಾರಿಗಳ ಕಪ್ಪು-ನೀಲಿ ಪಂಚೆ, ಶಲ್ಯ, ಟವೆಲ್ ಹಾಗೂ ಹೊದಿಕೆಗಳನ್ನು ಎಲ್ಲೆಂದರಲ್ಲಿ ನೇತುಹಾಕುವುದು ಸಾಮಾನ್ಯ. ಇವು ದೀಪದ ಜ್ವಾಲೆಗೆ ತಗುಲಿದರೆ ಇಡೀ ಶೆಡ್‌ಗೆ ಬೆಂಕಿ ವ್ಯಾಪಿಸಬಹುದು. ಕರ್ಪೂರದ ಆರತಿ, ತುಪ್ಪದ ದೀಪ ಹಚ್ಚುವಾಗಲೂ ನಿರಂತರ ನಿಗಾ ಅಗತ್ಯ. ಮೇಲ್ಚಾವಣಿಯಲ್ಲಿ ಪ್ಲಾಸ್ಟಿಕ್ ತೋರಣ, ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ಅಲಂಕಾರಿಕ ವಸ್ತ್ರಗಳನ್ನು ಬಳಸುವುದನ್ನು ತಪ್ಪಿಸಬೇಕು.
- ಗ್ಯಾಸ್ ಸಿಲಿಂಡರ್ ಮತ್ತು ಅಡುಗೆ ಕೋಣೆಯನ್ನು ಪೂಜಾ ಹಾಗೂ ವಿಶ್ರಾಂತಿ ಸ್ಥಳದಿಂದ ಪ್ರತ್ಯೇಕಿಸಬೇಕು.
- ತುರ್ತು ಸಂದರ್ಭದಲ್ಲಿ ಹೊರಬರಲು ಪ್ರತ್ಯೇಕ ನಿರ್ಗಮನ ಮಾರ್ಗ ಇರಬೇಕು.
- ವಿದ್ಯುತ್ ವೈರಿಂಗ್ ಮತ್ತು ಸಂಪರ್ಕಗಳನ್ನು ಪರಿಶೀಲಿಸಿ, ಅನಗತ್ಯ ವಿದ್ಯುತ್ ಉಪಕರಣಗಳ ಬಳಕೆ ತಪ್ಪಿಸಬೇಕು.ಅಯ್ಯಪ್ಪ ಸನ್ನಿಧಾನಗಳಲ್ಲಿ ಶುದ್ಧ ಗಾಳಿ, ಬೆಳಕು ಬರುವ ವ್ಯವಸ್ಥೆ ಇರಬೇಕು. ಮಾಲಾಧಾರಿಗಳು ಉಳಿದುಕೊಳ್ಳಲು, ಪ್ರಸಾದ ತಯಾರಿಸಲು ಹಾಗೂ ಪೂಜೆ ಸಲ್ಲಿಸಲು ವ್ಯವಸ್ಥಿತ ಸೌಲಭ್ಯ ಕಲ್ಪಿಸಬೇಕು. ಮಾಲೆ ಧರಿಸಲು ಬರುವ ಭಕ್ತರಿಗೆ ಮತ್ತು ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದಾಗಲೂ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ವ್ರತಾಚರಣೆಯನ್ನು ಶ್ರದ್ಧೆ, ಶಿಸ್ತು ಹಾಗೂ ಸುರಕ್ಷತೆಯೊಂದಿಗೆ ಪಾಲಿಸಬೇಕು.