ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ
ಗ್ರಾಮದ ಎಸ್.ಎಲ್. ಬೈರಪ್ಪನವರ ತಾಯಿ ನೆನಪಿಗೋಸ್ಕರ ನಿರ್ಮಾಣ ಮಾಡಿರುವ ಶ್ರೀ ಗೌರಮ್ಮ ಸ್ಮಾರಕ ಗ್ರಂಥಾಲಯದ ಮುಂಭಾಗ ಎಸ್. ಎಲ್. ಭೈರಪ್ಪನವರ ಭಾವಚಿತ್ರಕ್ಕೆ ಪುಷ್ಪನಮನ ನೆರವೇರಿಸಿ ಗ್ರಾಮಸ್ಥರು ಶ್ರದ್ಧಾಂಜಲಿ ಅರ್ಪಿಸಿದರು.
ಗ್ರಾಮದ ಕೆರೆ ತುಂಬಿಸಿದ ಹುಟ್ಟೂರಿನ ಮಗ:ತಾಲೂಕು ಟಿಎಪಿಎಂಎಸ್ ನಿರ್ದೇಶಕ ಮತ್ತು ವೀರಶೈವ ಯುವ ಮುಖಂಡ ಎಸ್. ಚಿರಂಜೀವಿ ಮಾತನಾಡಿ, ಎಸ್.ಎಲ್. ಬೈರಪ್ಪನವರ ಕೊನೆಯ ದಿನಗಳಲ್ಲಿ ಗ್ರಾಮದ ಒಳಿತಿಗಾಗಿ ಗ್ರಾಮದ ರೈತರಿಗೆ ಶಾಶ್ವತ ಯೋಜನೆ ರೂಪಿಸುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರಿಗೆ ಗ್ರಾಮದ ಕೆರೆ ತುಂಬಿಸಲು ಅನುದಾನ ಕೊಡುವಂತೆ ಕೇಳಿದ್ದರು. ಅವರ ಮನವಿಗೆ ಸ್ಪಂದಿಸಿದ ಯಡಿಯೂರಪ್ಪನವರು ತಕ್ಷಣ ₹25 ಕೋಟಿ ಅನುದಾನ ಬಿಡುಗಡೆ ಮಾಡುವ ಮೂಲಕ ಯೋಜನೆಗೆ ಕಾಯಕಲ್ಪ ನೀಡಿದ್ದನ್ನು ಸ್ಮರಿಸಿದರು.
ಅವರ ಪಾರ್ಥೀವ ಶರೀರ ಗ್ರಾಮಕ್ಕೆ ತರಲಾಗದಿದ್ದರೂ ಮೈಸೂರಿನಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಕೊನೆಗೆ ಬೈರಪ್ಪನವರ ಮಕ್ಕಳು ಚಿತಾಬಸ್ಮವನ್ನು ಅವರ ಹುಟ್ಟೂರಿನ ಕೆರೆಯಲ್ಲಿ ವಿಸರ್ಜಿಸುವ ಮೂಲಕ ಅವರ ಆಸೆಯನ್ನು ಈಡೇರಿಸಲಾಗಿತ್ತು. ಕ್ಷೇತ್ರದ ಶಾಸಕರಾದ ಸಿ.ಎನ್. ಬಾಲಕೃಷ್ಣರವರು ಎಸ್.ಎಲ್. ಬೈರಪ್ಪನವರ ಆಶಯದಂತೆ ಗ್ರಾಮದಲ್ಲಿ ಸುಮಾರು ₹5 ಕೋಟಿ ವೆಚ್ಚದಲ್ಲಿ ಎಸ್.ಎಲ್. ಭೈರಪ್ಪ ಕಲೆ, ಸಾಹಿತ್ಯ, ಸಂಸ್ಕೃತ ಭವನ ನಿರ್ಮಾಣಕ್ಕೆ ಒತ್ತು ನೀಡಿದ್ದರು ಎಂದು ಹೇಳಿದರು.
ಗ್ರಾಮಸ್ಥರಾದ ವೀರೇಶ್ ಮಾತನಾಡಿ, ಎಸ್.ಎಲ್. ಬೈರಪ್ಪನವರು ಮಾನವನಾಗಿ ಜನಿಸಿದರೂ ದೈವ ಸ್ವರೂಪಿಯಾಗಿದ್ದರು. ಅವರ ಪರಿಶ್ರಮದಿಂದ ಗ್ರಾಮದ ಕೆರೆಗಳಿಗೆ ನೀರು ಬಂದಿದೆ, ಅವರು ನಿಧನರಾದ ಒಂದು ವರ್ಷದಿಂದ ಅವರ ತಾಯಿಯ ಸ್ಮಾರಕ ಭವನದಲ್ಲಿ ಅವರ ಭಾವಚಿತ್ರದ ಮುಂಭಾಗ ದೀಪವನ್ನು ಬೆಳಗಿಸಲಾಗುತ್ತಿದೆ. ಬೈರಪ್ಪನವರು ಹುಟ್ಟೂರಿನ ಹೆಮ್ಮೆಯ ಮಗ, ಅವರ ಅಗಲಿಕೆಯಿಂದ ಗ್ರಾಮ ಬಡವಾಗಿದೆ, ಅವರ ಹೆಸರಿನಲ್ಲಿ ಗ್ರಾಮದ ಪ್ರಾರಂಭದಲ್ಲಿ ಸ್ಮಾರಕ ಭವನ ನಿರ್ಮಾಣವಾಗಬೇಕಿತ್ತು ಜೊತೆಗೆ ಅವರ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ಕಲೆ ಮತ್ತು ಸಂಸ್ಕೃತಿ ಭವನದ ಕೆಲಸವೂ ಅಪೂರ್ಣಗೊಂಡಿದೆ. ಬೈರಪ್ಪನವರ ಹೆಸರಿನಲ್ಲಿ ಶಾಶ್ವತವಾದ ಯೋಜನೆ ಸರ್ಕಾರ ರೂಪಿಸಿಲ್ಲ, ಇದರಿಂದ ಗ್ರಾಮಸ್ಥರಿಗೆ ಮತ್ತು ಅವರ ಅಭಿಮಾನಿಗಳಿಗೆ ತೀವ್ರ ಬೇಸರ ತರಿಸಿದೆ ಎಂದರು.