ಉಷ್ಣಮಾರುತಕ್ಕೆ ಮೊದಲ ಸಾವು? ರಾಜ್ಯದಲ್ಲಿ ರಣಬಿಸಿಲು-ಕಲಬುರಗಿ ನರೇಗಾ ಕಾರ್ಮಿಕ ಬಲಿ

KannadaprabhaNewsNetwork |  
Published : Apr 01, 2024, 12:51 AM ISTUpdated : Apr 01, 2024, 04:31 AM IST
ತಾಪಮಾನ | Kannada Prabha

ಸಾರಾಂಶ

ರಾಜ್ಯದಲ್ಲಿ, ಅದರಲ್ಲೂ ವಿಶೇಷವಾಗಿ ಕರಾವಳಿ, ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಸಿಲಿನ ತಾಪ ಅಧಿಕವಾಗಿದ್ದು, ಕಲಬುರಗಿ ಜಿಲ್ಲೆಯಲ್ಲಿ ಉಷ್ಣಮಾರುತಕ್ಕೆ ಕೂಲಿ ಕಾರ್ಮಿಕನೊಬ್ಬ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

 ಕಲಬುರಗಿ: ರಾಜ್ಯದಲ್ಲಿ, ಅದರಲ್ಲೂ ವಿಶೇಷವಾಗಿ ಕರಾವಳಿ, ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಸಿಲಿನ ತಾಪ ಅಧಿಕವಾಗಿದ್ದು, ಕಲಬುರಗಿ ಜಿಲ್ಲೆಯಲ್ಲಿ ಉಷ್ಣಮಾರುತಕ್ಕೆ ಕೂಲಿ ಕಾರ್ಮಿಕನೊಬ್ಬ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಜಿಲ್ಲೆಯ ಆಳಂದ ತಾಲೂಕಿನ ದಣ್ಣೂರ ಗ್ರಾಮದಲ್ಲಿ ಭಾನುವಾರ ನರೇಗಾ ಕೂಲಿ ಕೆಲಸ ಮಾಡುವಾಗ ಕುಸಿದು ಬಿದ್ದು ಶರಣಪ್ಪ ಸಮಗಾರ (42) ಎಂಬುವರು ಮೃತಪಟ್ಟಿದ್ದಾರೆ.

ಶರಣಪ್ಪ ಅವರು ಬಿಸಿಲಿನ ತಾಪದಿಂದ ಅಥವಾ ಹೃದಯಾಘಾತದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ನರೋಣಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಸತ್ಯ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದೊಂದು ವಾರದಿಂದ ಕಲಬುರಗಿ ಸೇರಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ತಾಪಮಾನ 40ರ ಗಡಿ ದಾಟಿದೆ. ಭಾನುವಾರ ಕೂಡ ರಾಜ್ಯದಲ್ಲೇ ಅತಿ ಹೆಚ್ಚು ತಾಪಮಾನ, ಕಲಬುರಗಿಯಲ್ಲಿ (42 ಡಿಗ್ರಿ ಸೆಲ್ಸಿಯಸ್‌) ದಾಖಲಾಗಿತ್ತು. ಇದೇ ವೇಳೆ, ರಾಯಚೂರು ಹಾಗೂ ಬಾಗಲಕೋಟೆಗಳಲ್ಲಿ 40.4 ಡಿಗ್ರಿ, ಕೊಪ್ಪಳದಲ್ಲಿ 39.7, ವಿಜಯಪುರದಲ್ಲಿ 39.5 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು.

ಈ ಮಧ್ಯೆ, ಕಲಬುರಗಿ, ಬಾಗಲಕೋಟೆ, ರಾಯಚೂರು, ಕೊಪ್ಪಳ ಜಿಲ್ಲೆಗಳ ವ್ಯಾಪ್ತಿಯಲ್ಲಿ ಏ.2, 3, 4 ಹಾಗೂ 5ರಂದು ಉಷ್ಣಮಾರುತದ ಅಲೆ ಏಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಜಯನಗರ ಪಾಲಿಕೆ ಬಜಾರ್‌ ಮಳಿಗೆಗಳ ಇ-ಹರಾಜು ಮೂಲಕ ವಿತರಿಸಿ: ಮಹೇಶ್ವರ್ ರಾವ್ ಸೂಚನೆ
ರಸ್ತೆ ಅಪಘಾತ ಸೈಕಲ್‌ ಸವಾರ ಸಾವು