ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಭೀಮಸೇತು ಮುನಿವೃಂದ ಮಠದಲ್ಲಿರುವ ತುಳಸಿಕಟ್ಟೆಯಲ್ಲಿ ಏಳು ಸಾಲಿನ ಒಂದು ಶಾಸನವಿದ್ದು, ಇದು ಅಪರೂಪದ ತಿಗಳಾರಿ ಲಿಪಿಯಲ್ಲಿದೆ .ಇದುವರೆಗೆ ತೀರ್ಥಹಳ್ಳಿ ತಾಲೂಕಿನಲ್ಲಿ ಪತ್ತೆಯಾಗಿರುವ ಶಾಸನಗಳಲ್ಲಿ ಇದು ಮೊಟ್ಟಮೊದಲ ತಿಗಳಾರಿ ಲಿಪಿಯ ಶಾಸನವಾಗಿದೆ.
ಇದರಲ್ಲಿ ವಸುದೇವ ತೀರ್ಥರಿಂದಲೂ ವೃಂದಾವನ ಸೇವೆ ಅರ್ಪಿತ ಎಂದಿದೆ. ಅಂದರೆ ಈ ಮಠದ ಯತಿಗಳಾಗಿದ್ದ ಶ್ರೀ ವಸುದೇವ ತೀರ್ಥರು ಹಿಂದಿನ ಯತಿಗಳ ವೃಂದಾವನಗಳನ್ನು ನಿರ್ಮಿಸಿದ್ದಾರೆ. ಈಗಲೂ ಶ್ರೀ ಮಠದಲ್ಲಿ ಹಲವಾರು ಯತಿಗಳ ವೃಂದಾವನವನ್ನು ಕಾಣಬಹುದಾಗಿದೆ. ಲಿಪಿಯಾದಾರಿತವಾಗಿ ಇದು ಸುಮಾರು ಹದಿನಾರನೇ ಶತಮಾನದೆಂದು ಅಂದಾಜಿಸಬಹುದಾಗಿದೆ.ಇದೇ ತುಳಸಿ ವೃಂದಾವನದ ಇನ್ನೊಂದು ಭಾಗದಲ್ಲಿ ಕೆಳದಿ ಲಿಪಿಯ ಒಂದು ಶಾಸನವಿದೆ. ಇದು ಹತ್ತು ಸಾಲುಗಳನ್ನು ಒಳಗೊಂಡಿದೆ. ನಳ ಸಂವತ್ಸರದಲ್ಲಿ ರಾಮಚಂದ್ರನು ದೇವರ ಚರಣಗಳಿಗೆ ತೋಟ, ಕೆರೆ ಕಟ್ಟೆಗಳನ್ನು ದಾನವಾಗಿ ನೀಡಿದನೆಂದು ಬರೆಯಲಾಗಿದೆ. ಹೆಚ್ಚಿನ ವಿವರಗಳೇನು ಇದರಲ್ಲಿ ದಾಖಲಾಗಿಲ್ಲ.
ಶಾಸನ ತಜ್ಞರಾದ ಪ್ರೊ.ಜಿ.ಕೆ.ದೇವರಾಜ ಸ್ವಾಮಿ ಹಾಗೂ ಅರ್ಪಿತಾ ಅವರು ಈ ಲಿಪಿಗಳ ಅಧ್ಯಯನದಲ್ಲಿ ಸಹಕಾರ ನೀಡಿರುತ್ತಾರೆ. ಒಟ್ಟಿನಲ್ಲಿ ಅಪರೂಪದ ಶಾಸನವೊಂದು ಬೆಳಕಿಗೆ ಬಂದಿರುವುದು ತಾಲೂಕಿಗೆ ಹೆಮ್ಮೆಯ ವಿಚಾರವಾಗಿದೆ .