ಬೆಂಗಳೂರು : ಬಹುಭಾಷಾ ನಟಿ, ದಕ್ಷಿಣ ಭಾರತೀಯ ಚಿತ್ರರಂಗದ ಮೊದಲ ‘ಮಹಿಳಾ ಸೂಪರ್‌ಸ್ಟಾರ್’, ಪದ್ಮಭೂಷಣ ಪುರಸ್ಕೃತ ಹಿರಿಯ ಕಲಾವಿದೆ ಬಿ.ಸರೋಜಾದೇವಿ (87) ಅವರು ವಯೋಸಹಜ ಅನಾರೋಗ್ಯದಿಂದ ಸೋಮವಾರ ಬೆಳಗ್ಗೆ ನಗರದಲ್ಲಿ ನಿಧನರಾದರು.
ಮಂಗಳವಾರ ಬೆಳಗ್ಗೆ 11.30ರ ಸುಮಾರಿಗೆ ಸರೋಜಾದೇವಿ ಅವರ ಹುಟ್ಟೂರು ಚನ್ನಪಟ್ಟಣ ತಾಲೂಕಿನ ದಶಾವರದಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಪಾರ್ಥಿವ ಶರೀರದ ಅಂತ್ಯಕ್ರಿಯೆ ನೆರವೇರಿಸಲು ಕುಟುಂಬ ವರ್ಗದವರು ತೀರ್ಮಾನಿಸಿದ್ದಾರೆ.
ಮೃತರು ತಮ್ಮ ಪುತ್ರ ಗೌತಮ್ ಮತ್ತು ಅಪಾರ ಅಭಿಮಾನಿಗಳು, ಬಂಧು, ಮಿತ್ರರನ್ನು ಅಗಲಿದ್ದಾರೆ. ಬಿ.ಸರೋಜಾದೇವಿ ಅವರ ಪತಿ ಶ್ರೀಹರ್ಷ (1986ರಲ್ಲಿ) ನಿಧನರಾಗಿದ್ದರು. ಇವರ ದತ್ತು ಪುತ್ರಿ ಭುವನೇಶ್ವರಿ ಕೂಡ ಕೆಲ ವರ್ಷಗಳ ಹಿಂದೆ ಇಹಲೋಕ ತ್ಯಜಿಸಿದ್ದರು.
ಸರೋಜಾದೇವಿ ಅವರು ನಿತ್ಯ ಬೆಳಗ್ಗೆ ಎದ್ದು ದಿನಪತ್ರಿಕೆ ಓದುತ್ತಿದ್ದರು. ನಂತರ ಸ್ನಾನ ಮಾಡಿ, ಪೂಜೆ ಮಾಡಿ ತಿಂಡಿ ತಿನ್ನುತ್ತಿದ್ದರು. ಅದೇ ರೀತಿ ಸೋಮವಾರವೂ ಸ್ನಾನ ಮಾಡಿ ಪೂಜೆ ಮಾಡಿದ ಬಳಿಕ ಬೆಳಗ್ಗೆ 9 ಗಂಟೆ ವೇಳೆಗೆ ಟಿವಿ ಆನ್ ಮಾಡಿದ್ದರು. ಈ ವೇಳೆ ಅವರು ತುಂಬಾ ಸುಸ್ತಾಗಿದ್ದರು ಮತ್ತು ಅರೆಪ್ರಜ್ಞಾವಸ್ಥೆಗೆ ಹೋದರು. ಕೂಡಲೇ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಗೆ ದಾಖಲಿಸುವಷ್ಟರಲ್ಲೇ ಅವರು ಮೃತಪಟ್ಟಿದ್ದರು ಎಂದು ಕುಟುಂಬದ ಮೂಲಗಳು ಮಾಹಿತಿ ನೀಡಿವೆ.
ಸದಭಿರುಚಿಯ ಚಿತ್ರಗಳ ಮೂಲಕ ಹಲವು ದಶಕಗಳ ಕಾಲ ಸಿನಿಪ್ರಿಯರನ್ನು ರಂಜಿಸಿದ್ದ ಸರೋಜಾ ದೇವಿ ಅವರು ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿ ಬಹುಭಾಷೆಗಳಲ್ಲಿ ಸುಮಾರು 200 ಚಿತ್ರಗಳಲ್ಲಿ ನಟಿಸಿ, ‘ಅಭಿನಯ ಸರಸ್ವತಿ’ ಎಂದೇ ಖ್ಯಾತರಾಗಿದ್ದರು. ಕನ್ನಡದ ಮೇರುನಟ ಡಾ. ರಾಜ್‌ಕುಮಾರ್, ತಮಿಳಿನ ಸೂಪರ್ ಸ್ಟಾರ್ ಎಂಜಿಆರ್, ಶಿವಾಜಿ ಗಣೇಶನ್, ಜೆಮಿನಿ ಗಣೇಶನ್, ತೆಲುಗಿನ ಎನ್‌ಟಿಆರ್ ಸೇರಿ ಹಲವು ಸ್ಟಾರ್ ನಟರ ಜತೆಗೆ ನಟಿಸಿ ಅಸಂಖ್ಯಾತ ಅಭಿಮಾನಿಗಳ ಮನಗೆದ್ದಿದ್ದರು.ತಮಿಳಿನ ಸೂಪರ್ ಸ್ಟಾರ್ ಎಂಜಿಆರ್ ಜತೆಗೆ ಬಿ.ಸರೋಜಾ ದೇವಿ ಬರೋಬ್ಬರಿ 26 ಹಿಟ್ ಸಿನಿಮಾಗಳನ್ನು ನೀಡಿದ್ದರು. ಶಿವಾಜಿ ಗಣೇಶನ್ ಜತೆಗೆ 22 ಹಿಟ್ ಸಿನಿಮಾಗಳಲ್ಲಿ ಮಿಂಚಿದ್ದರು. ಇನ್ನೂ ಜೆಮಿನಿ ಗಣೇಶನ್ ಜತೆಗೆ 17 ಸಿನಿಮಾಗಳಲ್ಲಿ ಅಭಿನಯಿಸಿದ್ದರು. ತೆಲುಗು ಹಾಗೂ ಕನ್ನಡದಲ್ಲೂ ಬಿ. ಸರೋಜಾ ದೇವಿ ಬಹುಬೇಡಿಕೆಯ ನಟಿಯಾಗಿದ್ದವರು.
ಅಂತಿಮ ದರ್ಶನ:
ಮಲ್ಲೇಶ್ವರದಲ್ಲಿರುವ ಸ್ವಗೃಹದಲ್ಲಿ ಸೋಮವಾರ ಸರೋಜಾದೇವಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಹಿರಿಯ ನಟರಾದ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಜಗ್ಗೇಶ್, ಉಪೇಂದ್ರ, ಯೋಗರಾಜ್ ಭಟ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಹಿರಿಯ ನಟಿ ಮಾಲಾಶ್ರೀ, ತಾರಾ ಅನುರಾಧ, ಶೃತಿ, ಕಸಾಪ ಅಧ್ಯಕ್ಷ ಮಹೇಶ್ ಜೋಶಿ, ವಿಧಾನ ಪರಿಷತ್ತು ಸದಸ್ಯ ಟಿ.ಎ.ಶರವಣ, ಪ್ರಿಯಾಂಕ ಉಪೇಂದ್ರ ಸೇರಿ ಹಲವು ಗಣ್ಯರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಮಂಗಳವಾರ ಮುಂಜಾನೆವರೆಗೂ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿದೆ.
ಗಣ್ಯರ ನಮನ:
ಬಿ.ಸರೋಜಾದೇವಿ ಅವರ ನಿಧನಕ್ಕೆ ಪ್ರಧಾನಿ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಹಿರಿಯ ನಟ ರಜನಿಕಾಂತ್, ನಟಿ ಖುಷ್ಬು, ನಟ ಕಿಚ್ಚ ಸುದೀಪ್ ಸೇರಿ ಹಲವರು ಎಕ್ಸ್ ಖಾತೆಯಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.
ನೇತ್ರದಾನ
ಹಿರಿಯ ನಟಿ ಬಿ.ಸರೋಜಾದೇವಿ ಅವರು ಸಾಕಷ್ಟು ಸಮಾಜಮುಖಿ ಕಾರ್ಯ ಮಾಡಿದ್ದರು. ಈಗ ನೇತ್ರದಾನದ ಮೂಲಕ ಅವರು ನಿಧನದ ನಂತರವೂ ಸಾರ್ಥಕತೆ ಮೆರೆದಿದ್ದಾರೆ. ನಾರಾಯಣ ನೇತ್ರಾಲಯಕ್ಕೆ ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ.
-ಗಣ್ಯರ ಸಂತಾಪ--ಕೋಟ್‌ಗಳು
ಸಿನಿಮಾದ ಐಕಾನ್‌ಸರೋಜಾ ದೇವಿ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರು ಭಾರತೀಯ ಸಿನಿಮಾ ಮತ್ತು ಸಂಸ್ಕೃತಿಯ ಅನುಕರಣೀಯ ಐಕಾನ್ ಎಂದು ಸ್ಮರಿಸಲ್ಪಡುತ್ತಾರೆ. ಅವರ ವೈವಿಧ್ಯಮಯ ನಟನೆಯು ವಿವಿಧ ತಲೆಮಾರುಗಳ ಜನಮಾನಸದಲ್ಲಿ ಅಚ್ಚಳಿಯದಂತೆ ಬೇರೂರಿದೆ.
- ನರೇಂದ್ರ ಮೋದಿ, ಪ್ರಧಾನಿ
ಬಹದೊಡ್ಡ ನಷ್ಟ
ಕನ್ನಡದ ಹಿರಿಯ ನಟಿ ಬಿ.ಸರೋಜಾದೇವಿ ಕನ್ನಡ ಚಿತ್ರರಂಗ ಸೇರಿ ತಮಿಳು, ತೆಲುಗು ಮತ್ತು ಹಿಂದಿಯ ಸುಮಾರು 200 ಚಿತ್ರಗಳಲ್ಲಿ ನಟಿಸಿ, ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿದ್ದರು. ಸದಭಿರುಚಿಯ ಚಿತ್ರಗಳ ಮೂಲಕ ಹಲವು ದಶಕಗಳ ಕಾಲ ಸಿನಿಪ್ರಿಯರನ್ನು ರಂಜಿಸಿದ್ದ ಅವರ ಅಗಲಿಕೆ ಭಾರತೀಯ ಚಿತ್ರರಂಗಕ್ಕಾದ ಬಹುದೊಡ್ಡ ನಷ್ಟ.
- ಸಿದ್ದರಾಮಯ್ಯ, ಮುಖ್ಯಮಂತ್ರಿಗಳು
ಆತ್ಮೀಯರಾಗಿದ್ದರು
ಇಡೀ ದಕ್ಷಿಣ ಭಾರತಕ್ಕೆ ದೊಡ್ಡ ಗೌರವ ತಂದುಕೊಟ್ಟಿದ್ದ ಸರೋಜಾ ದೇವಿ ನನಗೆ ಆತ್ಮೀಯರಾಗಿದ್ದರು. ಕನ್ನಡ ಚಿತ್ರರಂಗ ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆಯುತ್ತಿರುವ ಈ ಹೊತ್ತಿನಲ್ಲಿ ಇಂತಹ ಹಿರಿಯರ ಮಾರ್ಗದರ್ಶನ ಅಗತ್ಯವಿತ್ತು. ಕಾಲನ ಕರೆಗೆ ಓಗೊಟ್ಟು ಅಪಾರ ಅಭಿಮಾನಿಗಳನ್ನು ಅಗಲಿ ಹೋಗಿರುವ ಇವರ ಆತ್ಮಕ್ಕೆ ಶಾಂತಿ ದೊರಕಲಿ.
- ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ
ಮೇರುನಟರಾದ ಡಾ.ರಾಜ್ ಕುಮಾರ್ ಅವರು ಸೇರಿ ಭಾರತದ ಎಲ್ಲಾ ಭಾಷೆಗಳ ದಿಗ್ಗಜ ನಾಯಕ ನಟರೆಲ್ಲರ ಜತೆ ನಟಿಸಿದ್ದ ಸರೋಜಾದೇವಿ ಅವರು, ಅಭಿಮಾನಿಗಳ ಪಾಲಿಗೆ ಅಭಿನಯ ಸರಸ್ವತಿ ಆಗಿದ್ದರು. ಅವರ ಅನನ್ಯ ಅಭಿನಯ ನಮ್ಮೆಲ್ಲರನ್ನೂ ಮಂತ್ರಮುಗ್ಧರನ್ನಾಗಿ ಮಾಡುತ್ತಿತ್ತು. ಅವರ ಅಗಲಿಕೆ ಚಿತ್ರರಂಗಕ್ಕೆ, ನಾಡಿಗೆ ಬಹುದೊಡ್ಡ ನಷ್ಟವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ- ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಕೈಗಾರಿಕಾ ಸಚಿವ
ದುಃಖದ ದಿನ
ಕನ್ಮಡ ಚಿತ್ರರಂಗದ ಹಿರಿಯ ನಟಿ ಬಿ.ಸರೋಜಾದೇವಿ ಕಿತ್ತೂರು ರಾಣಿ ಚೆನ್ನಮ್ಮನ ಪಾತ್ರಕ್ಕೆ ನೈಜತೆ ತಂದಿದ್ದರು. ಅವರ ನಿಧನ ಕರ್ನಾಟಕದ ಕಲಾಕ್ಷೇತ್ರಕ್ಕೆ ಅತ್ಯಂತ ದುಃಖದ ದಿನ. ಅಭಿನಯದ ಜೊತೆ ಗಂಭೀರತೆಯಲ್ಲಿ ಅಗ್ರಮಾನ್ಯರಾಗಿ ಅವರು ತಮ್ಮ ಅಭಿನಯದಿಂದ ನಮ್ಮ ಮನದಲ್ಲಿದ್ದಾರೆ.
- ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ.