ಕನ್ನಡಪ್ರಭ ವಾರ್ತೆ ಬೆಳಗಾವಿ
ಲೀವರ ಸಂಪೂರ್ಣವಾಗಿ ಕಾರ‍್ಯಕ್ಷಮತೆ ಕಳೆದುಕೊಂಡು ಜೀವನಮರಣದ ನಡುವೆ ಹೋರಾಡುತ್ತಿದ್ದ ರೋಗಿಗೆ ಯಶಸ್ವಿ ಲೀವರ್ ಕಸಿ ಶಸ್ತ್ರ ಚಿಕಿತ್ಸೆಯನ್ನು ನೆರವೇರಿಸಿ ಜೀವ ಉಳಿಸುವಲ್ಲಿ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಗ್ಯಾಸ್ಟ್ರೊಎಂಟ್ರಾಲಾಜಿ ತಜ್ಞವೈದ್ಯರ ತಂಡವು ಯಶಸ್ವಿಯಾಗಿದೆ. ತಂದೆಯನ್ನು ಉಳಿಸಿಕೊಳ್ಳಲೇಬೇಕೆಂಬ ಛಲತೊಟ್ಟಿದ್ದ ಮಗ ಲೀವರ್ ದಾನ ಮಾಡಿ ತಂದೆ-ಮಗನ ಬಾಂಧವ್ಯವನ್ನು ಸಮಾಜಕ್ಕೆ ತೋರಿಸಿ ಕೊಟ್ಟಿದ್ದಾನೆ.ಈ ಕುರಿತು ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ಮುಖ್ಯ ಗ್ಯಾಸ್ಟ್ರೊಎಂಟ್ರಾಲಾಜಿಸ್ಟ್ ಹಾಗೂ ಲೀವರ್ ತಜ್ಞ ವೈದ್ಯ ಡಾ.ಸಂತೋಷ ಹಜಾರೆ ಮಾಹಿತಿ ನೀಡಿದ ಅವರು, ಕೊನೆಯ ಹಂತದ ಲೀವರ್ ವೈಫಲ್ಯದಿಂದ ಬಳಲುತ್ತಿದ್ದ ತನ್ನ ತಂದೆಯ ಜೀವವನ್ನು ಉಳಿಸಲು ಅವರ 29 ವರ್ಷದ ಮಗ ತನ್ನ ಲೀವರ್‌ನ ಸ್ವಲ್ಪ ಭಾಗವನ್ನು ದಾನ ಮಾಡಿದ್ದು, ಶಸ್ತ್ರಚಿಕಿತ್ಸೆಯ ನಂತರ ದಾನಿ ಮತ್ತು ದಾನ ಪಡೆದ ರೋಗಿಯೂ ಕೂಡ ಗುಣಮುಖರಾಗಿದ್ದು, ದಾನಿ (ಮಗ) 8ನೇ ದಿನಕ್ಕೆ ಆಸ್ಪತ್ರೆಯಿಂದ ಬಿಡುಗಡೆಗೊಳ್ಳುತ್ತಿದ್ದಾರೆ ಎಂದರು.ರಾಯಬಾಗ ತಾಲೂಕಿನ 56 ವರ್ಷದ ರೈತನ ಲೀವರ್ ಸಂಪೂರ್ಣವಾಗಿ ಕಾರ‍್ಯಕ್ಷಮತೆಯನ್ನು ಕಳೆದುಕೊಂಡಾಗ ಲೀವರ್ ಕಸಿ ಶಸ್ತ್ರಚಿಕಿತ್ಸೆ ನೆರವೇರಿಸುವುದು ಅನಿವಾರ‍್ಯವಾಗಿತ್ತು. ತಡಮಾಡಿದರೇ ಜೀವಕ್ಕೆ ಅಪಾಯವಿದ್ದ ಕಾರಣ 29 ವರ್ಷದ ಮಗ ಲೀವರ್ ದಾನ ಮಾಡಿದರು. ಜೀವಂತ ವ್ಯಕ್ತಿಯ ಲೀವರ್ ತೆಗೆದು ಲೀವರ್ ಹಾಳಾದ ರೋಗಿಗೆ ಕಸಿ ಮಾಡಬೇಕಾಗಿತ್ತು. ಅತ್ಯಂತ ಕ್ಲಿಷ್ಕರವಾದ ಕಸಿ ಶಸ್ತ್ರಚಿಕಿತ್ಸೆಯನ್ನು ನೆರವೆರಿಸಿ ರೋಗಿಗೆ ಪುನರಜನ್ಮ ನೀಡುವಲ್ಲಿ ವೈದ್ಯರ ತಂಡ ಯಶಸ್ವಿಯಾಗಿದೆ. ಉತ್ತರ ಕರ್ನಾಟಕ, ದ.ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಲ್ಲಿಯೇ ಪ್ರಥಮ ಬಾರಿಗೆ ಜೀವಂತ ದಾನಿಯ ಲೀವರ್ ಕಸಿ ಮಾಡಿರುವುದು ಪ್ರಥಮ.ಅತ್ಯಂತ ಸಂಕೀರ್ಣ ಮತ್ತು ತಾಂತ್ರಿಕತೆಯಿಂದ ಕೂಡಿದ ಶಸ್ತ್ರಚಿಕಿತ್ಸೆಯನ್ನು ಬೆಂಗಳೂರಿನ ಆಸ್ಟರ್ ಆಸ್ಪತ್ರೆಯ ಸಹಕಾರದೊಂದಿಗೆ ಮುಖ್ಯ ಲೀವರ್ ಟ್ರಾನ್ಸ್ಪ್ಲಾಂಟ್ ಶಸ್ತ್ರಚಿಕಿತ್ಸಕ ಡಾ.ಸೋನಲ್ ಅಸ್ತಾನಾ, ಡಾ.ವಚನ ಹುಕ್ಕೇರಿ ಹಾಗೂ ಡಾ.ರೋಮೆಲ್.ಎಸ್ ಅವರ ನೇತೃತ್ವದಲ್ಲಿ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ಗ್ಯಾಸ್ಟ್ರೊಎಂಟ್ರಾಲಾಜಿ ಲೀವರ್ ಶಸ್ತ್ರಚಿಕಿತ್ಸಕರಾದ ಡಾ.ಸುದರ್ಶನ್ ಚೌಗಲೆ ಮತ್ತು ಡಾ.ಕಿರಣ್ ಉರಬಿನಹಟ್ಟಿ ತಂಡವು ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿತು ಎಂದರು.ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾತನಾಡಿ, ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು, ನುರಿತ ನರ್ಸಿಂಗ್ ಸಿಬ್ಬಂದಿ, ಕೈಗೆಟಕುವ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿರುವುದರಿಂದ ಇತ್ತಕಡೆ ರೋಗಿಗಳು ಹೆಚ್ಚಾಗಿ ಆಗಮಿಸುತ್ತಿದ್ದಾರೆ. ಕೆಎಲಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಇಲ್ಲಿಯವರೆಗೆ 101ಕ್ಕೂ ಹೆಚ್ಚು ಕಿಡ್ನಿ, 22 ಲೀವರ್ ಹಾಗೂ 14 ಹೃದಯ ಕಸಿ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲಾಗಿದೆ. ಅಲ್ಲದೇ ಅಸ್ಥಿಮಜ್ಜೆ ಕಸಿ ಕೂಡ ನೆರವೇರಿಸಲಾಗುತ್ತಿದೆ. ಉತ್ತರ ಕರ್ನಾಟಕದಲ್ಲಿಯೇ ಅತೀ ಹೆಚ್ಚು ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಯನ್ನು ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯು ನೆರವೇರಿಸಿರುವ ಕೀರ್ತಿಗೆ ಭಾಜನವಾಗಿದೆ ಎಂದರು.ಮೆದಳು ನಿಷ್ಕ್ರೀಯಗೊಂಡ ವ್ಯಕ್ತಿಯು ಮಾಡಿದ ದಾನದಿಂದ 22 ಯಶಸ್ವಿ ಲೀವರ್ ಕಸಿ ನೆರವೇರಿಸಿದ್ದು, ರೋಗಿಗಳು ತೋರಿದ ಪ್ರಿತಿ ವಿಶ್ವಾಸಕ್ಕೆ ಅವರಿಗೆ ಧನ್ಯವಾದಗಳು. ಆಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ಜೀವಂತ ವ್ಯಕ್ತಿಯು ಮಾಡಿದ ದಾನದಿಂದ ಲೀವರ್ ಕಸಿ ಮಾಡಲಾಗಿದ್ದು, ಕೇವಲ ನಮ್ಮ ಆಸ್ಪತ್ರೆಯೊಂದರಲ್ಲಿಯೇ 35ಕ್ಕೂ ಹೆಚ್ಚು ರೋಗಿಗಳು ಯಕೃತ್ತು ಕಸಿಗಾಗಿ ಕಾಯುತ್ತಿದ್ದಾರೆ. ಆದ್ದರಿಂದ ರೋಗಿಗಳ ಬೇಡಿಕೆಯನ್ನು ಪೂರೈಸಲು ಅಂಗಾಂಗ ದಾನಗಳು ಹೆಚ್ಚಾಗಬೇಕು. ಲೀವರ್ ವೈಫಲ್ಯಕ್ಕೊಳಗಾದ ರೋಗಿಗಳ ಕುಟುಂಬ ಸದಸ್ಯರು ಸ್ವಯಂಪ್ರೇರಣೆಯಿಂದ ಅಂಗಾಂಗ ದಾನ ಮಾಡಿ, ತಮ್ಮ ಪ್ರೀತಿಪಾತ್ರರ ಜೀವ ಉಳಿಸಬೇಕು ಎಂದರು.ಗೋಷ್ಠಿಯಲ್ಲಿ ಗ್ಯಾಸ್ಟ್ರೋಎಂಟ್ರಾಲಾಜಿ ಶಸ್ತ್ರ ಚಿಕಿತ್ಸಕರಾದ ಡಾ.ಸುದರ್ಶನ ಚೌಗಲಾ, ಲೀವರ್ ಕಸಿಶಸ್ತ್ರ ಚಿಕಿತ್ಸಕರಾದ ಡಾ.ಸೋನಲ್ ಆಸ್ಥಾನಾ, ಡಾ.ವಚನ ಹುಕ್ಕೇರಿ ಕ್ಲಿನಿಕಲ್ ಸರ್ವಿಸ್ ನಿರ್ದೇಶಕರಾದ ಡಾ.ಮಾಧವ್ ಪ್ರಭು, ಅರವಳಿಕೆ ತಜ್ಞವೈದ್ಯರಾದ ಡಾ.ರಾಜೇಶ ಮಾನೆ ಆಡಳಿತಾಧಿಕಾರಿ ಡಾ.ಬಸವರಾಜ್ ಬಿಜರಗಿ ಉಪಸ್ಥಿತರಿದ್ದರು.ಈ ಭಾಗದಲ್ಲಿ ಪ್ರಮುಖ ಬಹು ಅಂಗಾಂಗ ಕಸಿ ನೆರವೇರಿಸುವುದರ ಜೊತೆಗೆ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಬೋಧನಾ ಸೌಲಭ್ಯ ಹೊಂದಿರುವ ರಾಜ್ಯದ ಏಕೈಕ ಆಸ್ಪತ್ರೆ ಇದಾಗಿದೆ. ಕರ್ನಾಟಕ ಅಲ್ಲದೇ, ಗೋವಾ ಮಹಾರಾಷ್ಟ್ರ ಹಾಗೂ ವಿವಿಧ ರಾಜ್ಯಗಳ ನಗರಗಳಿಂದಲೂ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ.
-ಡಾ.ಪ್ರಭಾಕರ ಕೋರೆ, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರು.