ಕೊಪ್ಪಳ: ಚಿತ್ರಕಲಾ ಆಕಾಡೆಮಿ ಪ್ರಥಮ ಬಾರಿ ಚಿತ್ರಕಲಾ ರಾಷ್ಟ್ರೀಯ ಸಮ್ಮೇಳನ ಆಯೋಜನೆ ಮಾಡಲು ಮುಂದಾಗಿದ್ದು, ಇದಕ್ಕೆ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಈ ಕುರಿತು ಪ್ರಸ್ತಾವನೆಯನ್ನು ಆಕಾಡೆಮಿ ಸಲ್ಲಿಸಿದರೆ ಪ್ರಸಕ್ತ ಸಾಲಿನಲ್ಲಿ ಬಜೆಟ್‌ನಲ್ಲಿ ಅನುದಾನ ನೀಡಲಾಗುವುದು ಎಂದರು.
ಕರ್ನಾಟಕ ಲಲಿತಾ ಅಕಾಡೆಮಿಯ ಅಧ್ಯಕ್ಷ ಪ.ಸ.ಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಹಿತ್ಯ ಸಮ್ಮೇಳನ ಮಾದರಿಯಲ್ಲಿಯೇ ಪ್ರಥಮ ಬಾರಿಗೆ ರಾಷ್ಟ್ರೀಯ ಚಿತ್ರಕಲಾ ಸಮ್ಮೇಳ ಇಲಕಲ್ ನಲ್ಲಿ ಆಯೋಜನೆ ಮಾಡಲು ಚಿಂತನೆ ನಡೆಸಿದ್ದೇವೆ, ಇದಕ್ಕೆ ಸಚಿವರು ಸಮ್ಮತಿ ನೀಡಬೇಕು ಎಂದು ಮನವಿ ಮಾಡಿದ್ದರು.ಇದಕ್ಕೆ ತಮ್ಮ ಭಾಷಣದಲ್ಲಿ ಪ್ರತಿಕ್ರಿಯಿಸಿದ ಸಚಿವ ಶಿವರಾಜ ತಂಗಡಗಿ, ಇದು ಅತ್ಯುತ್ತಮ ಯೋಜನೆಯಾಗಿದ್ದು, ಅದರಲ್ಲೂ ಇಲಕಲ್ ನಲ್ಲಿ ಮಾಡುತ್ತಿರುವುದು ಇನ್ನೂ ಸಂತೋಷವನ್ನುಂಟು ಮಾಡಿದೆ. ಹೀಗಾಗಿ ಇದಕ್ಕೆ ಧನಸಹಾಯ ಸೇರಿದಂತೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ನಾನು ಇಲಾಖೆಯ ಸಚಿವನಾಗುವ ಮುನ್ನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಾಗೂ ಅಕಾಡೆಮಿಯ ಕಾರ್ಯಕ್ರಮಗಳು ಕೇವಲ ಬೆಂಗಳೂರಿಗೆ ಸೀಮಿತವಾಗಿದ್ದವು, ಆದರೆ, ಈಗ ಅವುಗಳನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಿದ್ದೇವೆ. ಪ್ರತಿ ಜಿಲ್ಲೆಯಲ್ಲಿಯೂ ನಡೆಸಲಾಗುತ್ತಿದ್ದು, ಉತ್ತರ ಕರ್ನಾಟಕಕ್ಕೆ ವಿಶೇಷ ಆದ್ಯತೆ ನೀಡಿ ಆಯೋಜನೆ ಮಾಡುತ್ತಿದ್ದಾರೆ.ಅಕಾಡೆಮಿ ಅಧ್ಯಕ್ಷರು ಮತ್ತು ಸದಸ್ಯರ ನೇಮಕ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ನನೆಗುದಿಗೆ ಬಿದ್ದಿತ್ತು. ಆದರೆ ಸಿಎಂ ಸಿದ್ದರಾಮಯ್ಯ ಅಷ್ಟೂ ಅಕಾಡೆಮಿಗಳನ್ನು ಏಕಕಾಲಕ್ಕೆ ನೇಮಕ ಮಾಡುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ತಕ್ಷಣ ನೇಮಕ ಮಾಡಲಾಯಿತು ಎಂದರು.
ಚಿತ್ರಕಲೆಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಬೆಂಗಳೂರಿನಲ್ಲಿ ನಡೆಯುವ ಚಿತ್ರಕಲಾ ಮೇಳದಲ್ಲಿ ನಾನೊಂದು ಕಲಾಕೃತಿಯನ್ನು ₹2.5 ಲಕ್ಷ ಕೊಟ್ಟು ಖರೀದಿಸಿದ್ದೇನೆ, ನಾನು ಪ್ರಥಮ ಬಾರಿಗೆ ಗಾಳಿಪಟ ಚಿತ್ರದ ಅಡಿಯಲ್ಲಿಯೇ ಸ್ಪರ್ಧೆ ಮಾಡಿ ಗೆಲವು ಸಾಧಿಸಿದ್ದೇನು. ಹೀಗಾಗಿ,ಆ ಕಲಾಕೃತಿ ನನ್ನನ್ನು ಸೆಳೆಯಿತು. ಹಾರುವ ಗಾಳಿಪಟದ ಎದುರಿಗೆ ಇರುವ ಮೆಟ್ಟಿಲುಗಳು ಎತ್ತ ಕಡೆಯಿಂದ ನೋಡಿದರೂ ಹಾಗೆ ಕಾಣಿಸುವ ವಿಶಿಷ್ಟ ಚಿತ್ರವದು ಎಂದು ಚಿತ್ರಕಲೆಯನ್ನು ಗುಣಗಾನ ಮಾಡಿದರು.ಕಲಾವಿದರಾದ ಬಿ.ಪಿ.ಕಾರ್ತಿಕ್, ಎ.ಜೆ.ದೊಡ್ಡಮನಿ, ಕಲಾಕುಲದೀಪ ಹಾಗೂ ರಾಜು ತೆರದಾಳ ಅವರ ಸಾಕ್ಷ್ಯ ಚಿತ್ರ ಪ್ರದರ್ಶನ ಮಾಡಲಾಯಿತು.
ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ಡಿಸಿ ಸುರೇಶ ಇಟ್ನಾಳ, ಜಿಪಂ ಸಿಇಓ ವರ್ಣಿತ್ ನೇಗಿ, ಎಸ್ಪಿ ಡಾ. ರಾಮ ಎಲ್ ಅರಸಿದ್ದಿ ಸೇರಿದಂತೆ ಅನೇಕರು ಇದ್ದರು.