ವಿಧಾನಮಂಡಲ ಕಲಾಪದಲ್ಲಿ ಪ್ರತಿಪಕ್ಷಗಳು ಸಚಿವ ಆರ್.ಬಿ.ತಿಮ್ಮಾಪುರ ರಾಜೀನಾಮೆಗೆ ಆಗ್ರಹ ಮುಂದುವರೆಸಲಿದ್ದು, ಡ್ರಗ್ಸ್ ಮಾಫಿಯಾ, ಕಾನೂನು ಅವ್ಯವಸ್ಥೆ, ವಲಸಿಗರ ಹಾವಳಿ, ರಾಜೀವ್‌ಗೌಡ ಧಮ್ಕಿ ಪ್ರಕರಣ ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿಬೀಳುವ ಸಾಧ್ಯತೆಯಿದೆ.
ಬೆಂಗಳೂರು : ಜಂಟಿ ಅಧಿವೇಶನದ ಭಾಗವಾಗಿ ಮಂಗಳವಾರದಿಂದ ಮುಂದುವರೆಯಲಿರುವ ವಿಧಾನಮಂಡಲ ಕಲಾಪದಲ್ಲಿ ಪ್ರತಿಪಕ್ಷಗಳು ಸಚಿವ ಆರ್.ಬಿ.ತಿಮ್ಮಾಪುರ ರಾಜೀನಾಮೆಗೆ ಆಗ್ರಹ ಮುಂದುವರೆಸಲಿದ್ದು, ಡ್ರಗ್ಸ್ ಮಾಫಿಯಾ, ಕಾನೂನು ಅವ್ಯವಸ್ಥೆ, ವಲಸಿಗರ ಹಾವಳಿ, ರಾಜೀವ್‌ಗೌಡ ಧಮ್ಕಿ ಪ್ರಕರಣ ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿಬೀಳುವ ಸಾಧ್ಯತೆಯಿದೆ.
ಮತ್ತೊಂದೆಡೆ ಆಡಳಿತರೂಢ ಕಾಂಗ್ರೆಸ್ ಸದಸ್ಯರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡದ ರಾಜ್ಯಪಾಲರ ನಡೆ, ವಿಬಿಜಿ ರಾಮ್‌ಜಿ ಕಾಯ್ದೆ ವಿಚಾರ, ಬಿಜೆಪಿ ಅವಧಿಯಲ್ಲಿನ ಕಾನೂನು ಅವ್ಯವಸ್ಥೆ ಹಾಗೂ 40% ಭ್ರಷ್ಟಾಚಾರ ಪ್ರಸ್ತಾಪಿಸಿ ತಿರುಗೇಟು ನೀಡಲು ಅಣಿಯಾಗಿದ್ದು, ಉಭಯ ಸದನಗಳಲ್ಲಿ ಕದನ ಕೋಲಾಹಲ ನಿರೀಕ್ಷಿಸಲಾಗಿದೆ.
ಗವರ್ನರ್ ಕ್ಷಮೆಗೆ ಆಗ್ರಹ:
ಗುರುವಾರ ಆರಂಭವಾದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ಪೂರ್ಣ ಭಾಷಣವನ್ನು ಓದದೆ ಹೊರ ನಡೆದಿದ್ದರು. ಇದು ತೀವ್ರ ವಿವಾದಕ್ಕೆ ಕಾರಣವಾಗಿದ್ದು, ರಾಜ್ಯಪಾಲರ ಕ್ಷಮೆಗೆ ಕಾಂಗ್ರೆಸ್ ಆಗ್ರಹಿಸಿದೆ. ಮತ್ತೊಂದೆಡೆ ಶುಕ್ರವಾರ ಬಿಜೆಪಿ ಸದಸ್ಯರು ಅಬಕಾರಿ ಹಗರಣ ಪ್ರಸ್ತಾಪಿಸಿದ್ದು, ಸಚಿವ ಆರ್.ಬಿ. ತಿಮ್ಮಾಪುರ ರಾಜೀನಾಮೆ ನೀಡಬೇಕು ಎಂದು ಹೋರಾಟ ನಡೆಸುತ್ತಿದ್ದಾರೆ. ಬಿಜೆಪಿ ಸದಸ್ಯರು ಸದನದ ಬಾವಿಯಲ್ಲಿ ಪ್ರತಿಭಟನಾನಿರತರಾಗಿದ್ದಾಗಲೇ ಸ್ಪೀಕರ್ ಅವರು ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದ್ದರು. ಹೀಗಾಗಿ ಮೂರು ದಿನಗಳ ಬಳಿಕ ಆರಂಭವಾಗುತ್ತಿರುವ ಕಲಾಪದಲ್ಲಿ ಮಂಗಳವಾರ ಮತ್ತೆ ಬಿಜೆಪಿ ಅಬಕಾರಿ ಹಗರಣವನ್ನೇ ಪ್ರಸ್ತಾಪಿಸಿ ಗದ್ದಲ ಸೃಷ್ಟಿಸುವ ಸಾಧ್ಯತೆಯಿದೆ.
ಜತೆಗೆ ಕಾನೂನು ಸುವ್ಯವಸ್ಥೆ ವೈಫಲ್ಯ, ಮಹಾರಾಷ್ಟ್ರ ಪೊಲೀಸರಿಂದ ಡ್ರಗ್ಸ್ ಫ್ಯಾಕ್ಟರಿ ಪತ್ತೆ ಕೋಗಿಲು ಬಡಾವಣೆ ಪ್ರಕರಣ, ಅಕ್ರಮ ವಲಸಿಗರ ಹಾವಳಿ ಬಗ್ಗೆ ಪ್ರಸ್ತಾಪಿಸಲಿದ್ದಾರೆ. ಶಿಡ್ಲಘಟ್ಟ ನಗರಸಭೆ ಆಯುಕ್ತರಿಗೆ ನಿಂದಿಸಿದ್ದ ರಾಜೀವ್‌ಗೌಡ ಪ್ರಕರಣವೂ ಬಿಸಿಬಿಸಿ ಚರ್ಚೆಗೆ ಕಾರಣವಾಗು ಸಾಧ್ಯತೆ ಇದೆ.
ಮಂಗಳವಾರ ಮಾತನಾಡಲಿರುವ ಎ.ಎಸ್. ಪೊನ್ನಣ್ಣ ಸೇರಿದಂತೆ ಕಾಂಗ್ರೆಸ್ ಸದಸ್ಯರು ರಾಜ್ಯಪಾಲರು ಒಕ್ಕೂಟ ವ್ಯವಸ್ಥೆ, ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಭಾಷಣವನ್ನು ಓದದಿರುವುದು ಶಾಸಕಾಂಗಕ್ಕೆ ಮಾಡಿದ ಅವಮಾನ ಎಂದು ಕ್ಷಮೆಗೆ ಆಗ್ರಹಿಸುವ ಸಾಧ್ಯತೆಯಿದೆ.
ಮನರೇಗಾ ಯೋಜನೆಗಾಗಿ ನಿರ್ಣಯ?:
ಜತೆಗೆ ಮನರೇಗಾ ವಿಚಾರವಾಗಿ ಪ್ರಸ್ತಾಪಿಸಿ ವಿಬಿ ಜಿ ರಾಮ್ ಜಿ ಯೋಜನೆ ತಿಸ್ಕರಿಸಲಿದ್ದಾರೆ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಬಡವರ ವಿರೋಧಿ ನೂತನ ಕಾಯಿದೆ ಜಾರಿ ಮಾಡುವುದಿಲ್ಲ. ಬದಲಿಗೆ ಮನರೇಗಾ ಮರು ಜಾರಿ ಮಾಡಬೇಕು ಎಂದು ಆಗ್ರಹಿಸಿ ನಿರ್ಣಯ ಮಾಡುವ ನಿರೀಕ್ಷೆಯಿದೆ.
