ನಾರಾಯಣಸ್ವಾಮಿಗೆ ಪ್ರಥಮ ಪ್ರಾಶಸ್ತ್ಯ ಮತ ನೀಡಿ: ಸಿ.ಟಿ.ರವಿ

KannadaprabhaNewsNetwork | Published : May 26, 2024 1:39 AM

ಸಾರಾಂಶ

ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿರವರ ಪರ ಹಮ್ಮಿಕೊಳ್ಳಲಾಗಿದ್ದ ಮತ ಪ್ರಚಾರ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಮಾಜಿ ಸಚಿವರಾದ ಕಾರಜೋಳ, ಭೈರತಿ ಹಾಗೂ ಸಿ.ಟಿ.ರವಿ ಭಾಗವಹಿಸಿ ಮತಯಾಚನೆ ಮಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಶಿಕ್ಷಣ ವಿರೋಧಿ, ವಿದ್ಯಾರ್ಥಿಗಳಿಗೆ ದ್ರೋಹ ಬಗೆಯುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಾದರೆ ಈ ಬಾರಿಯ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ವೈ.ಎ.ನಾರಾಯಣಸ್ವಾಮಿರವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸುವಂತೆ ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಶಿಕ್ಷಕರುಗಳಲ್ಲಿ ವಿನಂತಿಸಿದರು.

ಚಳ್ಳಕೆರೆ ರಸ್ತೆಯಲ್ಲಿರುವ ವಿನಾಯಕ ಕಲ್ಯಾಣ ಮಂಟಪದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿರವರ ಪರ ಹಮ್ಮಿಕೊಳ್ಳಲಾಗಿದ್ದ ಮತ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕರ ಬಲ ಹೊಂದಿರುವ ವೈ.ಎ.ನಾರಾಯಣಸ್ವಾಮಿ ಹಾಗೂ ಹಣ ಬಲವುಳ್ಳ ಕಾಂಗ್ರೆಸ್ ಅಭ್ಯರ್ಥಿ ನಡುವೆ ನಡೆಯುತ್ತಿರುವ ಈ ಚುನಾವಣೆಯಲ್ಲಿ ಒಂದೊಂದು ಮತಕ್ಕೂ ಪ್ರಾಮುಖ್ಯತೆಯಿದೆ. ಹಾಗಾಗಿ ಪ್ರಥಮ ಸುತ್ತಿನಲ್ಲಿಯೇ ವೈ.ಎ.ಎನ್. ಗೆಲ್ಲಿಸಿ ತುಘಲಕ್ ದರ್ಬಾರ್ ನಡೆಸುತ್ತಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಸಂದೇಶ ಕಳಿಸಬೇಕಿದೆ ಎಂದು ಶಿಕ್ಷಕರುಗಳಲ್ಲಿ ಮನವಿ ಮಾಡಿದರು.

ಅನುದಾನಿತ ಶಾಲೆಗಳು ಮುಚ್ಚುತ್ತಿವೆ. ಓಪಿಎಸ್. ಇನ್ನೂ ಕೈಸೇರಿಲ್ಲ. ಆತ್ಮನಿರ್ಭರ, ಭಾರತವನ್ನು ವಿಶ್ವಗುರುವಾಗಿಸಲು ಪ್ರಧಾನಿ ಮೋದಿರವರು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದಿದ್ದರೆ ಕಾಂಗ್ರೆಸ್ ಸರ್ಕಾರಕ್ಕೆ ಅದು ಬೇಕಿಲ್ಲ. ಶಿಕ್ಷಣದ ಜೊತೆ ರಾಜಕೀಯವಾಟವಾಡುತ್ತಿದೆ. ಶಿಕ್ಷಕರಿಗೆ ಬರೆ ಎಳೆಯುವ ನೀತಿ ಅನುಸರಿಸುತ್ತಿರುವ ಕನ್ನಡ ಬಾರದ ಶಿಕ್ಷಣ ಸಚಿವರನ್ನು ನಾಡಿಗೆ ಕೊಟ್ಟಂತ ಅಪಕೀರ್ತಿ ಸಿದ್ದರಾಮಯ್ಯನವರಿಗೆ ಸಲ್ಲಬೇಕು ಎಂದು ತರಾಟೆ ತೆಗೆದುಕೊಂಡರು.

ಮಾಜಿ ಸಚಿವ ಭೈರತಿ ಬಸವರಾಜ್ ಮಾತನಾಡಿ, ಹದಿನೆಂಟು ವರ್ಷಗಳಿಂದಲೂ ನಿಮ್ಮ ಸಮಸ್ಯೆಗಳಿಗೆ ಧ್ವನಿಯಾಗಿರುವ ವೈ.ಎ.ನಾರಾಯಣಸ್ವಾಮಿರವರಿಗೆ ಈ ಚುನಾವಣೆ ಯಲ್ಲಿ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸುವಂತೆ ಶಿಕ್ಷಕರುಗಳಲ್ಲಿ ಕೋರಿದರು.

ಜೆ.ಡಿ.ಎಸ್.ಜಿಲ್ಲಾಧ್ಯಕ್ಷ ಎಂ.ಜಯಣ್ಣ ಮಾತನಾಡಿ, ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ನಾಲ್ಕನೆ ಬಾರಿಗೆ ಸ್ಪರ್ಧಿಸುತ್ತಿರುವ ವೈ.ಎ.ನಾರಾಯಣಸ್ವಾಮಿ ಶಿಕ್ಷಕರ ಕಷ್ಟ-ಸುಖದಲ್ಲಿ ಮೊದಲಿನಿಂದಲೂ ಭಾಗಿಯಾಗುತ್ತ ಬರುತ್ತಿದ್ದಾರೆ. ಶಿಕ್ಷಕರುಗಳಿಗೆ ನಿಜವಾಗಿಯೂ ಶಕ್ತಿ ಬರಬೇಕಾಗಿರುವುದರಿಂದ ಈ ಚುನಾವಣೆ ಅತ್ಯಂತ ಮಹತ್ವದ್ದು, ಹಣ ಬಲವೋ ಶಿಕ್ಷಕರು ಬಲವೋ ಎನ್ನುವುದನ್ನು ನೀವುಗಳು ತೀರ್ಮಾನಿಸಬೇಕೆಂದು ಶಿಕ್ಷಕರುಗಳಲ್ಲಿ ಕೇಳಿಕೊಂಡರು.

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ. ಅಭ್ಯರ್ಥಿ ಗೋವಿಂದ ಕಾರಜೋಳ ಮಾತನಾಡಿ, ಐದನೆ ವೇತನ ಆಯೋಗ ಒಪ್ಪಿಕೊಂಡಿದ್ದು, ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪನವರು. ಕಾಂಗ್ರೆಸ್ ಸರ್ಕಾರ ಎಂದಿಗೂ ಶಿಕ್ಷಕರುಗಳ ಪರವಾಗಿಲ್ಲ. ನೌಕರರ ವಿರೋಧಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಏಳನೆ ವೇತನ ಆಯೋಗವನ್ನು ಒಪ್ಪಿಕೊಂಡಿಲ್ಲ. ಬಡ ಮಕ್ಕಳು, ನೌಕರರ ಪರವಾಗಿರುವ ವೈ.ಎ.ನಾರಾಯಣಸ್ವಾಮಿರವರನ್ನು ಗೆಲ್ಲಿಸಿ ಎಂದು ಶಿಕ್ಷಕರುಗಳಲ್ಲಿ ಮನವಿ ಮಾಡಿದರು.

ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಶಿಕ್ಷಕರುಗಳಲ್ಲಿ ಮತ ಯಾಚಿಸಿ ಮಾತನಾಡುತ್ತ ಕಳೆದ ಹದಿನೆಂಟು ವರ್ಷಗಳಿಂದಲೂ ಯಾವುದೇ ಕಪ್ಪು ಚುಕ್ಕೆಯಿಲ್ಲದಂತೆ ನಿಮ್ಮ ಸೇವೆ ಮಾಡಿದ್ದೇನೆ. ಅತಿ ಹೆಚ್ಚು ಅಭಿಮಾನ, ನಂಬಿಕೆ, ಪ್ರೀತಿ ತೋರಿದ್ದೀರ, ಕೊಟ್ಟ ಮಾತಿಗೆ ತಪ್ಪಿಲ್ಲ. ನೀವುಗಳು ಹೇಳಿದ ಕೆಲಸ ಮಾಡಿದ್ದೇನೆ. ಈ ಬಾರಿಯ ಚುನಾವಣೆಯಲ್ಲಿ ಮತ್ತೊಮ್ಮೆ ನನ್ನನ್ನು ಗೆಲ್ಲಿಸಿ ವಿಧಾನಪರಿಷತ್‍ಗೆ ಕಳಿಸಿಕೊಡಿ. ನಿಮ್ಮ ಸಮಸ್ಯೆಗಳಿಗೆ ಸದಾ ಹೋರಾಡುತ್ತೇನೆಂದು ಭರವಸೆ ನೀಡಿದರು.

ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಪ್ರಾಸ್ತಾವಿಕವಾಗಿ ಮಾತನಾಡಿ, ಮೂರು ಬಾರಿ ಗೆದ್ದು ನಿಮ್ಮ ಸೇವೆ ಮಾಡಿರುವ ವೈ.ಎ.ನಾರಾಯಣಸ್ವಾಮಿರವರನ್ನು ನಾಲ್ಕನೆ ಬಾರಿಗೆ ಗೆಲ್ಲಿಸಿ. ಐದು ಜಿಲ್ಲೆಗಳಲ್ಲಿ ಲೀಡ್ ಕೊಡಿ ಎಂದು ಶಿಕ್ಷಕರುಗಳಲ್ಲಿ ಕೋರಿದರು.

ಮಾಜಿ ಶಾಸಕರುಗಳಾದ ಜಿ.ಹೆಚ್.ತಿಪ್ಪಾರೆಡ್ಡಿ, ಹೆಚ್.ಎಸ್.ಶಿವಶಂಕರ್, ಎಸ್.ತಿಪ್ಪೇಸ್ವಾಮಿ, ಬಿಜೆಪಿ. ಜಿಲ್ಲಾಧ್ಯಕ್ಷ ಎ.ಮುರಳಿ, ನಗರ ಮಂಡಲ ಅಧ್ಯಕ್ಷ ನವೀನ್‍ಚಾಲುಕ್ಯ, ಗ್ರಾಮಾಂತರ ಮಂಡಲ ಅಧ್ಯಕ್ಷ ಕಲ್ಲೇಶಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಶ್ರೀಮತಿ ಸೌಭಾಗ್ಯ ಬಸವರಾಜನ್, ಚಿದಾನಂದಗೌಡ, ಎಸ್.ಲಿಂಗಮೂರ್ತಿ, ರವೀಂದ್ರಪ್ಪ, ಹನುಮಂತೆಗೌಡ, ಮಲ್ಲಿಕಾರ್ಜುನ್, ತಮ್ಮೇಶ್, ಎನ್.ಆರ್.ಲಕ್ಷ್ಮಿಕಾಂತ್, ಜೆಡಿಎಸ್. ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ ಇನ್ನು ಅನೇಕರು ವೇದಿಕೆಯಲ್ಲಿದ್ದರು.

ಎನ್‌ಇಪಿ ಕಿತ್ತಾಕಿದ ‘ಕೈ’ಗೆ ಮೊಸರಲ್ಲಿ ಕಲ್ಲು: ಬಿ.ವೈ.ವಿ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಶಿಕ್ಷಕರ ಸಮಸ್ಯೆಗಳಿಗೆ ಕಳೆದ ಹದಿನೆಂಟು ವರ್ಷಗಳಿಂದಲೂ ಧ್ವನಿಯಾಗಿ ಕೆಲಸ ಮಾಡುತ್ತಿರುವ ಡಾ.ವೈ.ಎ. ನಾರಾಯಣಸ್ವಾಮಿರವರನ್ನು ಈ ಬಾರಿಯ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಹುಮತಗಳಿಂದ ಗೆಲ್ಲಿಸಿ ವಿಧಾನಪರಿಷತ್‍ಗೆ ಕಳಿಸಿಕೊಡಿ. ಎನ್.ಇ.ಪಿ. ಕಿತ್ತಾಕಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ. ಶಿಕ್ಷಣ ಕ್ಷೇತ್ರ ಕಲುಷಿತವಾಗಿದೆ. ಹಾಗಾಗಿ ಈ ಚುನಾವಣೆಯಲ್ಲಿ ಹೋರಾಟಗಾರನನ್ನು ಆಯ್ಕೆ ಮಾಡಬೇಕೆನ್ನುವುದನ್ನು ಮರೆಯ ಬಾರದೆಂದು ಶಿಕ್ಷಕರನ್ನು ಎಚ್ಚರಿಸಿದರು.

ಕಾಂಗ್ರೆಸ್‌ನಿಂದ ರಾಜ್ಯ ಬಿಹಾರದಂತಾಗಿದೆ: ಬಿ.ವೈ.ವಿಜಯೇಂದ್ರ ವಾಗ್ದಾಳಿ

ಚಿತ್ರದುರ್ಗ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಕಾಂಗ್ರೆಸ್‌ ಆಡಳಿತದಲ್ಲಿ ರಾಜ್ಯ ಬಿಹಾರದಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಚಿತ್ರದುರ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪೊಲೀಸ್‌ ವ್ಯವಸ್ಥೆಯ ಭಯವೇ ಇಲ್ಲದಂತಾಗಿದೆ. ಅಲ್ಪಸಂಖ್ಯಾತರ ಬಗ್ಗೆ ಸರ್ಕಾರ ತಳೆದಿರುವ ತುಷ್ಟೀಕರಣ ಭಾವವೇ ಇದಕ್ಕೆ ಕಾರಣವಾಗಿದೆ ಎಂದರು.ಚನ್ನಗಿರಿ ಪ್ರಕರಣ ಕುರಿತು ಮಾತನಾಡಿದ ಅವರು, ಸಾವಿರಾರು ಜನರು ಪೊಲೀಸ್‌ ಠಾಣೆಗೆ ನುಗ್ಗಿ ದಾಂಧಲೆ ನಡೆಸುತ್ತಾರೆಂದರೆ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಯಾವ ಮಟ್ಟ ತಲುಪಿದೆ ಎಂಬುದರ ಅರಿವಾಗುತ್ತದೆ. ಈ ಬಗ್ಗೆ ಕೇಳಿದರೆ ಅವರೆಲ್ಲಾ ಅಮಾಯಕರು ಎಂದು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಹೇಳುತ್ತಾರೆ. ಠಾಣೆಗೆ ನುಗ್ಗಿ ಪೊಲೀಸರನ್ನು ಒಡೆಯುವವರು ಅಮಾಯಕರೇ? ಎಂದು ಮರುಪ್ರಶ್ನೆ ಹಾಕಿದರು ವಿಜಯೇಂದ್ರ.

ಪ್ರಜ್ವಲ್‌ ಪ್ರಕರಣ ಗೊತ್ತಿದ್ದೂ ಬಿಜೆಪಿ, ಜೆಡಿಎಸ್‌ ಮೈತ್ರಿ ಮಾಡಿಕೊಂಡಿತು ಎಂಬ ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆಗೆ ಪ್ರತಿಕ್ರಿಸಿದ ಬಿಜೆಪಿ ಅಧ್ಯಕ್ಷರು, ಪ್ರಿಯಾಂಕ್‌ ಖರ್ಗೆ ಎಲ್ಲವನ್ನೂ ಬಲ್ಲವರು. ಅವರು ಸರ್ಕಾರದ ಎಲ್ಲಾ ಇಲಾಖೆಗಳ ಬಗ್ಗೆಯೂ ಮಾತನಾಡುತ್ತಾರೆ. ಕಲಬುರ್ಗಿಯಲ್ಲಿನ ಕಾನೂನು ವ್ಯವಸ್ಥೆಯ ಬಗ್ಗೆ ಗಮನ ಹರಿಸಿ ನಂತರ ಉಳಿದಂತೆ ಖರ್ಗೆ ಮಾತನಾಡಲಿ ಎಂದರು.ಪ್ರಜ್ವಲ್‌ ಪ್ರಕರಣದಲ್ಲಿ ಕೇಂದ್ರ ಸರ್ಕಾರ ತನ್ನ ಕೆಲಸ ಮಾಡುತ್ತಿದೆ. ಪ್ರಕರಣ ಯಾವ ದಾರಿ ಹಿಡಿಯುತ್ತಿದೆ ಎಂಬುದನ್ನು ರಾಜ್ಯದ ಜನರು ಗಮನಿಸುತ್ತಿದ್ದಾರೆ. ಆದ್ಧರಿಂದಲೇ ಪ್ರಕರಣವನ್ನು ಸಿಬಿಐಗೆ ವಹಿಸಲು ಆಗ್ರಹಿಸಿದ್ದೇವೆ ಎಂದರು.

Share this article