ಕನ್ನಡಪ್ರಭ ವಾರ್ತೆ ಮಂಡ್ಯ
ವಿಶ್ವ ಹಿಂದೂ ಪರಿಷತ್, ಬಜರಂಗದಳ, ದುರ್ಗಾವಾಹಿನಿ ಮತ್ತು ಶ್ರೀರಾಮಾಂಜನೇಯ ಸಮಿತಿಯಿಂದ ಮಂಡ್ಯದಲ್ಲಿ ಇದೇ ಮೊದಲ ಬಾರಿಗೆ ಶೋಭಾಯಾತ್ರೆ ಶನಿವಾರ (ಏ.೧೨)ದಂದು ಆಯೋಜಿಸಲಾಗಿದೆ.ನಗರದ ಶ್ರೀಕಾಳಿಕಾಂಬ ದೇವಾಲಯದಿಂದ ಶೋಭಾಯಾತ್ರೆ ಆರಂಭಗೊಳ್ಳಲಿದೆ. ವಿಶ್ವ ಹಿಂದೂ ಪರಿಷತ್ ರಾಜ್ಯ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರಿ ಅವರು ಶೋಭಾಯಾತ್ರೆಗೆ ಚಾಲನೆ ನೀಡುವರು. ಹುಣಸೂರಿನಿಂದ ಐದು ಅಡಿ ಎತ್ತರದ ಪಂಚಲೋಹ ಶ್ರೀಹನುಮ ಮೂರ್ತಿ, ಶ್ರೀರಾಮ, ಶ್ರೀಹನುಮ ಹಾಗೂ ಶ್ರೀನರಸಿಂಹಸ್ವಾಮಿ ದೇವರ ಟ್ಯಾಬ್ಲೋಗಳು ಯಾತ್ರೆಯಲ್ಲಿ ಭಾಗವಹಿಸಲಿವೆ. ಯಾತ್ರೆ ಸಮಯದಲ್ಲಿ ಡಿಜೆ ಬಳಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.
ಈ ಶೋಭಾಯಾತ್ರೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನ ಹಿಂದೂಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು, ಮೈಸೂರು, ಚಾಮರಾಜನಗರ ಮತ್ತು ರಾಮನಗರ ಜಿಲ್ಲೆಗಳಿಂದಲೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಳ್ಳುವರು. ೧೨೦೦ ಗ್ರಾಮಗಳಲ್ಲಿರುವ ಎಲ್ಲ ಜಾತಿ, ಸಮುದಾಯ, ಸಂಘಟನೆಯವರನ್ನು ಒಗ್ಗೂಡಿಸಿ ಶೋಭಾಯಾತ್ರೆಗೆ ಬರುವಂತೆ ಆಹ್ವಾನಿಸಲಾಗಿದೆ. ಸುಮಾರು ೨೦ ಸಾವಿರ ಜನರು ಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ವಿಹೆಚ್‌ಪಿಯ ಚಿಕ್ಕಬಳ್ಳಿ ಬಾಲು ತಿಳಿಸಿದ್ದಾರೆ.ಕೆರಗೋಡಿನಲ್ಲಿ ಮತ್ತೆ ಹನುಮಧ್ವಜ ಹಾರಿಸುವುದು, ನಾಗಮಂಗಲದಲ್ಲಿ ಗಣಪತಿ ಮೆರವಣಿಗೆ ವೇಳೆ ಮುಸ್ಲಿಮರು ನಡೆಸಿದ ದಾಳಿಗೆ ವಿರೋಧ, ವಕ್ಫ್ ಓಡಿಸಿ-ಭೂಮಿ ಉಳಿಸಿ, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ, ಅತ್ಯಾಚಾರ ಖಂಡನೆ ಹಾಗೂ ಹಿಂದೂಗಳ ವ್ಯವಹಾರ-ಹಿಂದೂಗಳ ಜೊತೆಯಲ್ಲೇ ಎಂಬ ನಿರ್ಣಯಗಳನ್ನು ಕೈಗೊಳ್ಳುವುದು ಶೋಭಾಯಾತ್ರೆ ಹಿಂದಿನ ಮೂಲ ಉದ್ದೇಶವಾಗಿದೆ.
ಶೋಭಾಯಾತ್ರೆಯು ಶ್ರೀಕಾಳಿಕಾಂಬ ದೇವಾಲಯದಿಂದ ಮಧ್ಯಾಹ್ನ ೧೨ ರಿಂದ ೧ ಗಂಟೆ ವೇಳೆಗೆ ಆರಂಭಗೊಂಡು ಪೇಟೆಬೀದಿ, ಹೊಳಲು ವೃತ್ತ, ಜಯಚಾಮರಾಜೇಂದ್ರ ವೃತ್ತ, ಮಹಾವೀರ ವೃತ್ತ, ವಿ.ವಿ.ರಸ್ತೆ, ಹೊಸಹಳ್ಳಿ ವೃತ್ತ, ನೂರಡಿ ರಸ್ತೆ, ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನ, ವಿನೋಬಾರಸ್ತೆ ಮೂಲಕ ಬೆಂಗಳೂರು-ಮೈಸೂರು ಹೆದ್ದಾರಿ ರಸ್ತೆ ಮಾರ್ಗವಾಗಿ ಮಂಡ್ಯ ವಿಶ್ವವಿದ್ಯಾನಿಲಯದ ಆವರಣವನ್ನು ಸೇರಲಿದೆ.ಸಂಜೆ ೫.೩೦ಕ್ಕೆ ಯುವ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ, ವಿಶ್ವ ಒಕ್ಕಲಿಗರ ಮಠದ ಪೀಠಾಧಿಪತಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಡಾ.ಭಾನುಪ್ರಕಾಶ್ ಶರ್ಮಾ ಅವರು ಬಹಿರಂಗ ಸಭೆಯಲ್ಲಿ ಭಾಗವಹಿಸುವರು.
ಬಿಗಿ ಬಂದೋಬಸ್ತ್:ಶೋಭಾಯಾತ್ರೆ ಹಿನ್ನೆಲೆಯಲ್ಲಿ ೪ ಕೆಎಸ್‌ಆರ್‌ಪಿ, ೬ ಜಿಲ್ಲಾ ಸಶಸ್ತ್ರ ಮೀಸಲುಪಡೆಯ ಪೊಲೀಸರ ಸೇರಿದಂತೆ ೫೦೦ ಮಂದಿ ಪೊಲೀಸರು, ಇಬ್ಬರು ಎಎಸ್ಪಿ, ೬ ಮಂದಿ ಡಿವೈಎಸ್ಪಿ, ೨೫ ಸಿಪಿಐ, ೫೦ ಪಿಎಸ್‌ಐಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದ ರೀತಿಯಲ್ಲಿ ಮಧ್ಯಾಹ್ನ ೨ ರಿಂದ ರಾತ್ರಿ ೯ ಗಂಟೆಯವರೆಗೆ ಶೋಭಾಯಾತ್ರೆ ಮತ್ತು ಬಹಿರಂಗ ಸಭೆ ನಡೆಸುವುದಕ್ಕೆ ಪೊಲೀಸ್ ಇಲಾಖೆ ಅವಕಾಶ ನೀಡಿದೆ.
ಹಿಂದೂಗಳ ಒಗ್ಗಟ್ಟಿನ ಸಂದೇಶ ಸಾರುವುದಕ್ಕೆ ಶೋಭಾಯಾತ್ರೆ ನಡೆಸಲಾಗುತ್ತಿದೆ. ಇದು ಮಂಡ್ಯದಲ್ಲಿ ನಡೆಯುತ್ತಿರುವ ಮೊದಲ ಶೋಭಾಯಾತ್ರೆ. ಇದರಲ್ಲಿ ಜಿಲ್ಲೆಯ ಹಾಗೂ ಹೊರಜಿಲ್ಲೆಗಳಿಂದ ಸುಮಾರು ೨೦ ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಹಿಂದೂಗಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯವನ್ನು ವಿರೋಧಿಸಿ ಜಾಗೃತಿ ಮೂಡಿಸುವುದು ಇದರ ಹಿಂದಿನ ಉದ್ದೇಶವಾಗಿದೆ.- ಡಾ.ಭಾನುಪ್ರಕಾಶ್ ಶರ್ಮಾ, ಜಿಲ್ಲಾಧ್ಯಕ್ಷರು, ವಿಶ್ವಹಿಂದೂ ಪರಿಷತ್ಹಿಂದೂಪರ ಸಂಘಟನೆಗಳ ಮುಖಂಡರ ಸಭೆ ನಡೆಸಿ ಸೂಚನೆ ಕೊಟ್ಟಿದ್ದೇವೆ. ಸೂಕ್ಷ್ಮ ಸ್ಥಳಗಳಲ್ಲಿ ಹೆಚ್ಚು ಕಾಲ ನಿಲ್ಲುವಂತಿಲ್ಲ, ಪ್ರಚೋದನಕಾರಿ ಘೋಷಣೆಗಳನ್ನು ಕೂಗಬಾರದು. ಮಹಾರಾಷ್ಟ್ರದಿಂದ ಡಿಜೆ ತರುವುದಕ್ಕೆ ನಿರ್ಬಂಧ ವಿಧಿಸಿದ್ದು, ಸಣ್ಣ ಪ್ರಮಾಣದ ಧ್ವನಿವರ್ಧಕ ಬಳಸುವುದಕ್ಕೆ ಅವಕಾಶ ನೀಡಿದೆ. ನಿಗದಿತ ಸಮಯದೊಳಗೆ ಯಾತ್ರೆ ಮತ್ತು ಬಹಿರಂಗ ಸಭೆ ಮುಗಿಸುವಂತೆ ಕಟ್ಟುನಿಟ್ಟಿನ ಸೂಚಿಸಲಾಗಿದೆ. ಹೊರಗಿನಿಂದ ಬರುವವರು ಪ್ರಚೋದನಾಕಾರಿ ಭಾಷಣ ಮಾಡುವುದಕ್ಕೆ ನಿರ್ಬಂಧ ವಿಧಿಸಲಾಗಿದೆ.
- ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಆರಕ್ಷಕ ಅಧೀಕ್ಷಕರು, ಮಂಡ್ಯಇಂದು ಹನಮದ್ ಜಯಂತಿ ಅಂಗವಾಗಿ ರಥೋತ್ಸವ
ಮದ್ದೂರು:ಪಟ್ಟಣದ ಕದಂಬ ನದಿ ತೀರದಲ್ಲಿರುವ ಪುರಾಣ ಪ್ರಸಿದ್ಧ ಶ್ರೀಹೊಳೆ ಆಂಜನೇಯಸ್ವಾಮಿ ದೇಗುಲದಲ್ಲಿ ಏಪ್ರಿಲ್ 12ರಂದು ಶ್ರೀ ಹನುಮದ್ ಜಯಂತಿ ಅಂಗವಾಗಿ ರಥೋತ್ಸವ ಜರುಗಲಿದೆ.
ದೇಗುಲದಲ್ಲಿ ಮುಂಜಾನೆ ಶ್ರೀಹೊಳೆ ಆಂಜನೇಯಸ್ವಾಮಿ ಮೂಲ ವಿಗ್ರಹಕ್ಕೆ ಅಭಿಷೇಕದೊಂದಿಗೆ ವಿಶೇಷ ಪೂಜಾ ಕಾರ್ಯ ಏರ್ಪಡಿಸಲಾಗಿದೆ. ಬೆಳಗ್ಗೆ 10:30 ಗಂಟೆ ಸುಮಾರಿಗೆ ಸೀತಾರಾಮ, ಲಕ್ಷ್ಮಣ ಸಮೇತ ಶ್ರೀ ಆಂಜನೇಯ ದೇವರ ಉತ್ಸವ ಮೂರ್ತಿಯನ್ನು ಸಮೀರ ರಥದಲ್ಲಿ ಪ್ರತಿಷ್ಠಾಪನೆ ಮಾಡಿ ದೇಗುಲದ ಪ್ರಾಂಗಣದಲ್ಲಿ ರಥೋತ್ಸವ ಜರುಗಲಿದೆ.ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಶ್ರೀ ಹರಿವಾಯು ಗುರುಗಳ ಆಶೀರ್ವಾದಕ್ಕೆ ಪಾತ್ರರಾಗಬೇಕು ಎಂದು ದೇಗುಲದ ಪ್ರಧಾನ ಅರ್ಚಕ ಪ್ರದೀಪ ಆಚಾರ್ಯ ಮನವಿ ಮಾಡಿದ್ದಾರೆ.