ಹಾಸನ ಜಿಲ್ಲೆಯ ವಿವಿಧೆಡೆ ವರ್ಷದ ಮೊದಲ ಮಳೆ

KannadaprabhaNewsNetwork | Published : Mar 13, 2025 12:46 AM

ಸಾರಾಂಶ

ಜಿಲ್ಲೆಯ ವಿವಿಧೆಡೆ ಈ ವರ್ಷದ ಮೊದಲ ಮಳೆ ಬುಧವಾರ ಧಾರಾಕಾರವಾಗಿ ಸುರಿದಿದೆ. ಹಾಸನ, ಆಲೂರು, ಸಕಲೇಶಪುರ ಮತ್ತು ಚನ್ನರಾಯಪಟ್ಟಣ ತಾಲೂಕುಗಳಲ್ಲಿ ಬುಧವಾರ ಸಂಜೆ ಮಳೆ ತನ್ನ ಆರ್ಭಟ ತೋರಿದೆ. ವಾಡಿಕೆಯಂತೆ ಮಾರ್ಚ್ ತಿಂಗಳಲ್ಲಿ ಮಳೆ ಬರುತ್ತದೆ. ಅಂತೆಯೇ ಮೊದಲ ಮಳೆ ಬಂದಿರುವುದು ರೈತರ ಮುಖದಲ್ಲಿ ನಗು ತಂದಿದೆ. ಸಾಕಷ್ಟು ಜನರು ಬೇಸಿಗೆ ಬೆಳೆ ಮಾಡಿಕೊಂಡು ಹಗಲು- ರಾತ್ರಿ ಎನ್ನದೆ ಪಂಪ್‌ಸೆಟ್‌ ಹಾಗೂ ಕೆರೆಕಟ್ಟೆಗಳಿಂದ ನೀರು ಹಾಯಿಸಲು ಹರಸಾಹಸಪಡುತ್ತಿದ್ದರು. ಈಗ ಅವರಿಗೆ ಅನುಕೂಲವಾಗಿದೆ.

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲೆಯ ವಿವಿಧೆಡೆ ಈ ವರ್ಷದ ಮೊದಲ ಮಳೆ ಬುಧವಾರ ಧಾರಾಕಾರವಾಗಿ ಸುರಿದಿದೆ. ಹಾಸನ, ಆಲೂರು, ಸಕಲೇಶಪುರ ಮತ್ತು ಚನ್ನರಾಯಪಟ್ಟಣ ತಾಲೂಕುಗಳಲ್ಲಿ ಬುಧವಾರ ಸಂಜೆ ಮಳೆ ತನ್ನ ಆರ್ಭಟ ತೋರಿದೆ.

ಬುಧವಾರ ಬೆಳಗ್ಗೆಯಿಂದಲೇ ಅಲ್ಲಲ್ಲಿ ಮೋಡ ಕವಿದ ವಾತಾವರಣ ಇತ್ತು. ಜತೆಗೆ ಶಕೆಯೂ ಇತ್ತು. ಸಂಜೆ ಇಲ್ಲವೇ ರಾತ್ರಿ ವೇಳೆಗೆ ಮಳೆ ಬರಬಹುದೆನ್ನುವ ನಿರೀಕ್ಷೆ ಇತ್ತು. ಅದರಂತೆ ಸಂಜೆಯಿಂದಲೇ ಗುಡುಗು, ಮಿಂಚು ಸಹಿತ ಮಳೆ ಆರಂಭವಾಯಿತು. ಮಿಂಚು, ಗುಡಿಗಿನಿಂದಾಗಿ ಚೆಸ್ಕಾಂ ನವರು ಮುಂಜಾಗ್ರತಾ ಕ್ರಮವಾಗಿ ಹಾಸನ ವಿವಿಧ ಬಡಾವಣೆಗಳು ಹಾಗೂ ಪಟ್ಟಣಗಳಲ್ಲಿ ವಿದ್ಯುತ್‌ ಕಡಿತ ಮಾಡಿದ್ದರು.

ವಾಡಿಕೆಯಂತೆ ಮಾರ್ಚ್ ತಿಂಗಳಲ್ಲಿ ಮಳೆ ಬರುತ್ತದೆ. ಅಂತೆಯೇ ಮೊದಲ ಮಳೆ ಬಂದಿರುವುದು ರೈತರ ಮುಖದಲ್ಲಿ ನಗು ತಂದಿದೆ. ಸಾಕಷ್ಟು ಜನರು ಬೇಸಿಗೆ ಬೆಳೆ ಮಾಡಿಕೊಂಡು ಹಗಲು- ರಾತ್ರಿ ಎನ್ನದೆ ಪಂಪ್‌ಸೆಟ್‌ ಹಾಗೂ ಕೆರೆಕಟ್ಟೆಗಳಿಂದ ನೀರು ಹಾಯಿಸಲು ಹರಸಾಹಸಪಡುತ್ತಿದ್ದರು. ಈಗ ಅವರಿಗೆ ಅನುಕೂಲವಾಗಿದೆ. ಇನ್ನು ಆಲೂರು ಹಾಗೂ ಸಕಲೇಶಪುರ ತಾಲೂಕಿನಲ್ಲಿ ಕೂಡ ಮಳೆಯಾಗಿದೆ. ಈ ತಾಲೂಕುಗಳಲ್ಲಿರುವ ಕಾಫಿ ತೋಟಗಳ ಮಾಲೀಕರು ವಾಡಿಕೆಯಂತೆ ಮಾರ್ಚ್‌ ತಿಂಗಳಲ್ಲಿ ಮಳೆ ಬಾರದಿದ್ದರೆ ಜಲ ಮೂಲಗಳಿಂದ ನೀರು ಸಿಂಪರಣೆ ಮಾಡುತ್ತಿದ್ದರು. ನೀರಿನ ಸೌಲಭ್ಯ ಇದ್ದವರು ಮಾಡುತ್ತಾರೆ. ಇಲ್ಲದವರು ಮಳೆಯನ್ನೇ ಆಶ್ರಯಿಸಬೇಕು. ಹಾಗಾಗಿ ಬಹುತೇಕ ಕಾಫಿ ಬೆಳೆಗಾರರು ಮಳೆಯ ನಿರೀಕ್ಷೆಯಲ್ಲಿದ್ದರು. ಆದರೆ, ಕಾಫಿ ತೋಟಗಳಿಗೆ ಕನಿಷ್ಟ 3 ಇಂಚು ಮಳೆಯಾದರೂ ಆಗಬೇಕು. ಆಗ ಮಾತ್ರ ಕಾಫಿ ಗಿಡಗಳಲ್ಲಿ ಮೊಗ್ಗುಗಳು ಹೂವಾಗಿ ಅರಳುತ್ತವೆ. ಹೂವಾದ ನಂತರವೂ ಕೆಲ ದಿನಗಳಲ್ಲಿ ಮತ್ತೆ ಮಳೆ ಬರಬೇಕು. ಆಗ ಮಾತ್ರ ಹೂವು ಹೀಚಾಗಿ ಕಾಯಿ ಕಟ್ಟಲು ಸಾಧ್ಯವಾಗುತ್ತದೆ. ಆದರೆ, ಇದೀಗ ಅಷ್ಟು ಪ್ರಮಾಣದ ಮಳೆಯಾಗದ ಕಾರಣ ಕಾಫಿ ಗಿಡಗಳಲ್ಲಿರುವ ಮೊಗ್ಗುಗಳು ಅಲ್ಪ ಪ್ರಮಾಣದಲ್ಲಿ ಅರಳುತ್ತವೆ. ನಂತರ ಉದುರಿಹೋಗುತ್ತವೆ. ಹಾಗಾಗಿ ಆಲೂರು ಮತ್ತು ಸಕಲೇಶಪುರ ಭಾಗಕ್ಕೆ ಇದೀಗ ಬಂದಿರುವ ಅಸಮರ್ಪಕ ಮಳೆ ಕಾಫಿ ಬೆಳೆಗಾರರ ಪಾಲಿಗೆ ಬಿಸಿ ತುಪ್ಪವಾಗಿದೆ.

ಆಲೂರು ಸಂತೆಗೆ ಮಳೆಯ ಸಿಂಚನ:

ಆಲೂರು ಪಟ್ಟಣದಲ್ಲಿ ಬುಧವಾರ ಸಂಜೆ ದಿಡೀರನೆ ಸುರಿದ ವರ್ಷದ ಮೊದಲ ಮಳೆಯಿಂದಾಗಿ ಕೆಲಕಾಲ ಜನಜೀವನ ಅಸ್ತವ್ಯಸ್ತವಾಗಿತ್ತು. ಸಂತೆಯ ದಿನವಾದ ಬುಧವಾರ ಏಕಾಏಕಿ ಸುರಿದ ಮಳೆಯಿಂದ ಸಂತೆಯಲ್ಲಿ ವ್ಯಾಪಾರ ವಹಿವಾಟು ನಡೆಸಲು ಜನರು ಕೆಲ ಕಾಲ ಪರದಾಡಿದರು. ಯಾವುದೇ ಮುನ್ಸೂಚನೆ ಇಲ್ಲದ ಕಾರಣ ವ್ಯಾಪಾರಿಗಳು ಡೇರೆಗಳನ್ನು ನಿರ್ಮಿಸಿಕೊಳ್ಳದೆ ಕೆಲಕಾಲ ಮಳೆಯಲ್ಲೇ ವ್ಯಾಪಾರ ನಡೆಸಬೇಕಾಯಿತು. ಸಾರ್ವಜನಿಕರು ಕೂಡ ಛತ್ರಿಗಳನ್ನು ತರದ ಕಾರಣ ಮಳೆಯಿಂದ ರಕ್ಷಣೆ ಪಡೆಯಲು ಅಂಗಡಿಮುಂಗಟ್ಟುಗಳ ಮುಂಭಾಗದಲ್ಲಿ ನಿಲ್ಲಬೇಕಾಗಿ ಬಂತು. ಎಲ್ಲಿ ಮಳೆ ಜೋರಾಗಿ ವ್ಯಾಪಾರ ಹಾಳಾಗುವುದೋ ಎಂಬ ಭಯದಲ್ಲಿದ್ದ ವ್ಯಾಪಾರಿಗಳು ಕೆಲವೇ ಕ್ಷಣದಲ್ಲಿ ಮಳೆ ನಿಂತದ್ದರಿಂದಾಗಿ ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಒಟ್ಟಾರೆ ವರ್ಷದ ಮೊದಲ ಮಳೆಯಿಂದಾಗಿ ಕೆಲಕಾಲ ಜನಜೀವನ ಅಸ್ತವ್ಯಸ್ತಗೊಂಡಿದ್ದರೂ ಮಳೆರಾಯ ತಂಪೆರದ ಪರಿಣಾಮ ಸೆಕೆ ಹೋಗಿ ಶೀತಗಾಳಿ ಬೀಸಲು ಪ್ರಾರಂಭಿಸಿದ್ದು, ಬೇಸಿಗೆಯ ಸೆಕೆ ತಾಳಲಾರದೆ ಪರದಾಡುತ್ತಿದ್ದ ಜನರು ಇದರಿಂದಾಗಿ ನೆಮ್ಮದಿಯಿಂದ ನಿದ್ರಿಸಬಹುದಾಗಿದೆ.

Share this article