ಪೊಲೀಸರು ಉತ್ತಮ ಸೇವೆ ನೀಡಿದಾಗ ಮಾತ್ರ ಜನಮಾನಸದಲ್ಲಿ ಉಳಿಯಲು ಸಾಧ್ಯ: ಎಂ.ಕೃಷ್ಣಪ್ಪ

KannadaprabhaNewsNetwork | Published : Mar 13, 2025 12:46 AM

ಸಾರಾಂಶ

ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ವರ್ಗಾವಣೆ, ಪದೋನ್ನತಿ ಹಾಗೂ ನಿವೃತ್ತಿ ಸಾಮಾನ್ಯ. ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಕಾನೂನಿನ ಪಾಲನೆಯ ಜತೆಗೆ ಸಾರ್ವಜನಿಕರೊಂದಿಗೆ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಪೊಲೀಸರು ತಮ್ಮ ಕರ್ತವ್ಯದಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಿದಾಗ ಮಾತ್ರ ಜನಮಾನಸದಲ್ಲಿ ಉಳಿಯಲು ಸಾಧ್ಯ ಎಂದು ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿ ಎಂ.ಕೃಷ್ಣಪ್ಪ ತಿಳಿಸಿದರು.

ಬಾಲಾಜಿ ಸಮುದಾಯ ಭವನದಲ್ಲಿ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆ ಹಾಗೂ ಪದೋನ್ನತಿ ಹೊಂದಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಠಾಣಾ ಅಧಿಕಾರಿಗಳಿಂದ ನಡೆದ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ವರ್ಗಾವಣೆ, ಪದೋನ್ನತಿ ಹಾಗೂ ನಿವೃತ್ತಿ ಸಾಮಾನ್ಯ. ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಕಾನೂನಿನ ಪಾಲನೆಯ ಜತೆಗೆ ಸಾರ್ವಜನಿಕರೊಂದಿಗೆ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.

ಸೇವೆ ವೇಳೆ ಜನಸಾಮಾನ್ಯರ ವಿಶ್ವಾಸ ಗಳಿಸಿದರೆ ಅದು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಹಕಾರಿಯಾಗಲಿದೆ. ಶಿಸ್ತುಬದ್ಧವಾಗಿ ಸಾರ್ವಜನಿಕರಿಗೆ ಕಾನೂನಿನ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ಪೊಲೀಸ್ ಇನ್ಸ್‌ಪೆಕ್ಟರ್ ಆನಂದ್ ಮಾತನಾಡಿ, ತಾವು ಯಾವುದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದರೂ ಸಹ ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದು ಕೊಂಡರೇ ನಿಮಗೆ ಅರ್ಧದಷ್ಟು ಕೆಲಸವಾಗುತ್ತದೆ. ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಸಹ ನೆರವಾಗುತ್ತಾರೆ ಎಂದರು.

ಅಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯದ ವೇಳೆ ಮೇಲಾಧಿಕಾರಿಗಳು, ಹಿರಿಯ ಅಧಿಕಾರಿಗಳಿಂದ ಹಲವು ವಿಷಯಗಳನ್ನು ಕಲಿತು ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದರು.

ಈ ವೇಳೆ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಿಂದ ಮದ್ದೂರು ಸಂಚಾರ ಠಾಣೆಗೆ ಸಬ್ ಇನ್ಸ್‌ಪೆಕ್ಟರ್ ಆಗಿ ವರ್ಗಾವಣೆಗೊಂಡ ರಾಮಸ್ವಾಮಿ, ಕೊಪ್ಪ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡ ಭೀಮಪ್ಪ ಬಾಣಾಸಿ, ಸಹಾಯಕ ಸಬ್‌ಇನ್ಸ್‌ಪೆಕ್ಟರ್ ಆಗಿ ಪದೋನ್ನತಿ ಹೊಂದಿದ ರವಿಶಂಕರ್, ಹಲಗೂರು ಠಾಣೆಗೆ ವರ್ಗಾವಣೆಗೊಂಡ ಮೂಖ್ಯ ಪೇದೆ ರಾಜಶೇಖರ್, ಮಂಡ್ಯ ಸೆಂಟ್ರಲ್ ಠಾಣೆಗೆ ವರ್ಗಾವಣೆಗೊಂಡ ಮುಖ್ಯ ಪೇದೆ ಮಹೇಶ್, ಅರಕೆರೆ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡ ಮಹೇಶ್ ಹಾಗೂ ಮದ್ದೂರು ಠಾಣೆಗೆ ವರ್ಗಾವಣೆಗೊಂಡ ಮಹೇಶ್ ಅವರನ್ನು ಅಭಿನಂದಸಲಾಯಿತು.

ಸಮಾರಂಭದಲ್ಲಿ ಸಬ್ ಇನ್ಸ್‌ಪೆಕ್ಟರ್ ದೇವರಾಜು, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸುಧಾ ಮತ್ತು ಠಾಣೆಯ ಸಿಬ್ಬಂದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share this article