ಗದಗ: ಮಾ. 21ರಿಂದ ಏ. 4ರ ವರೆಗೆ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗಳು ಜರುಗಲಿದ್ದು, ಪರೀಕ್ಷೆಗಳು ಶಾಂತಿಯುತವಾಗಿ, ಪಾರದರ್ಶಕವಾಗಿ ನಡೆಯುವಂತೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗಳ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ 61 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ಜರುಗಲಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಗೋಡೆ ಗಡಿಯಾರಗಳು ಇರುವಂತೆ ನೋಡಿಕೊಳ್ಳಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಅಗತ್ಯವಿರುವ ಗಾಳಿ, ಬೆಳಕು, ನೀರಿನ ವ್ಯವಸ್ಥೆ ಕಲ್ಪಿಸಬೇಕು. ಪರೀಕ್ಷಾರ್ಥಿಗಳಿಗೆ ಪರೀಕ್ಷೆ ಬರೆಯಲು ಸೂಕ್ತ ಆಸನದ ಸೌಲಭ್ಯ ಕಲ್ಪಿಸಬೇಕು. ಪರೀಕ್ಷಾ ಸಮಯದಲ್ಲಿ ಯಾವುದೇ ಅಕ್ರಮ, ಲೋಪದೋಷಗಳಾಗದಂತೆ ಎಚ್ಚರಿಕೆ ವಹಿಸಬೇಕು. ಪರೀಕ್ಷೆಗಳನ್ನು ಸುಗಮವಾಗಿ ನಡೆಸಲು ಸಂಬಂಧಿತ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ಪರಿಮಿತಿಯೊಳಗೆ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ. ಪರೀಕ್ಷಾರ್ಥಿಗಳು, ಪರೀಕ್ಷೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿ ಹೊರತುಪಡಿಸಿ ಇತರ ಯಾವುದೇ ವ್ಯಕ್ತಿಗೆ ಅವಕಾಶವಿಲ್ಲ. ಈ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಝರಾಕ್ಸ್ ಅಂಗಡಿ, ಸೈಬರ್ ಸೆಂಟರ್, ಬುಕ್‌ಸ್ಟಾಲ್, ಫೋಟೋ ಕಾಪಿಯರ್‌ಗಳನ್ನು ಬಂದ್ ಮಾಡಲು ಆದೇಶಿಸಿದೆ. ಈ ಪ್ರದೇಶ ವ್ಯಾಪ್ತಿಯಲ್ಲಿ ಪರೀಕ್ಷೆಗಳು ನಡೆಯುವ ಸಮಯದಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿರ್ಬಂಧಿಸಿದೆ ಎಂದು ಹೇಳಿದರು.
ಪರೀಕ್ಷಾ ಕೊಠಡಿಗಳಲ್ಲಿ ಪ್ರವೇಶ, ಚಿತ್ರೀಕರಣ ಇತ್ಯಾದಿ ನಿಷೇಧಿಸಿದೆ. ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಕ್ಯಾಮೆರಾ ಹೊಂದಿರದ ಸಾಮಾನ್ಯ ಮೊಬೈಲ್ ಇರಿಸಿಕೊಳ್ಳಲು ಅವಕಾಶವಿದ್ದು, ಉಳಿದ ಎಲ್ಲ ಪರೀಕ್ಷಾ ಸಿಬ್ಬಂದಿ, ವಿದ್ಯಾರ್ಥಿಗಳು ಮೊಬೈಲ್ ಫೋನ್ ಮತ್ತು ಇತರ ಸಂಪರ್ಕ ಸಲಕರಣೆಗಳನ್ನು ತರುವುದನ್ನು, ಉಪಯೋಗಿಸುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.ಜಿಪಂ ಸಿಇಒ ಭರತ್ ಎಸ್. ಮಾತನಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಪಾರದರ್ಶಕವಾಗಿ ಹಾಗೂ ವ್ಯವಸ್ಥಿತವಾಗಿ ಜರುಗುವಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಡಿಡಿಪಿಐ ಆರ್.ಎಸ್. ಬುರುಡಿ ಮಾತನಾಡಿ, ಮಾ. 21ರಿಂದ ಏ. 4ರ ವರೆಗೆ ಜಿಲ್ಲೆಯ 61 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿವೆ. ಜಿಲ್ಲೆಯಲ್ಲಿ ಒಟ್ಟು 16,458 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಪರೀಕ್ಷೆಗಳು ಶಾಂತಿಯುತವಾಗಿ ಹಾಗೂ ಸುಗಮವಾಗಿ ಜರುಗಲು ಕ್ರಮ ವಹಿಸಲಾಗಿದೆ ಎಂದರು.ಸಭೆಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಲು ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯ ಕಲ್ಪಿಸುವುದು, ಪರೀಕ್ಷಾ ಕೇಂದ್ರಗಳ ಸ್ವಚ್ಛತೆ, ಸೂಕ್ತ ಬಂದೋಬಸ್ತ್, ಸಿಸಿ ಕ್ಯಾಮೆರಾ ಅಳವಡಿಕೆ ಕುರಿತು ಚರ್ಚಿಸಲಾಯಿತು.
ಡಯಟ್ ಉಪನಿರ್ದೇಶಕ ಜಿ.ಎಲ್. ಬಾರಾಟಕ್ಕೆ, ಪರೀಕ್ಷಾ ಕೇಂದ್ರದ ಮುಖ್ಯಸ್ಥರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.