ಹಾವೇರಿ: ಗ್ರಾಮ ಆಡಳಿತ ಅಧಿಕಾರಿ (ವಿಎಒ) ನೇಮಕಾತಿ ಪರೀಕ್ಷೆಯಲ್ಲಿ ಮೊಬೈಲ್ ಬಳಸಿ ಅಕ್ರಮ ಎಸಗಿದ ಆರೋಪದಡಿ, ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದಿದ್ದ ಹಾನಗಲ್‌ನ ಶಂಕರ ಬಸವರಾಜ ಬನ್ನೂರ ವಿರುದ್ಧ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನ ಆಧಾರದ ಮೇಲೆ ಪರಿಶೀಲನೆ ನಡೆಸಿದ ಪೊಲೀಸರು, ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ 2023ರ ಪರೀಕ್ಷಾ ಅಕ್ರಮ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೊಬೈಲ್ ಬಳಸಿ ನಕಲು..ಹಾನಗಲ್ ಪಟ್ಟಣದ ಗುಡಿಕೇರಿ ಓಣಿಯ ಎಲೆಪೇಟೆ ನಿವಾಸಿ ಶಂಕರ ಬಸವರಾಜ ಬನ್ನೂರ ಅ. 4ರಂದು ಶಿಗ್ಗಾಂವಿಯ ಬಿ.ಬಿ. ಮಾಮ್ಲದೇಸಾಯಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ನಡೆದ ವಿಎಒ ನೇಮಕಾತಿ ಪರೀಕ್ಷೆಗೆ ಹಾಜರಾಗಿದ್ದರು. ಬೆಳಗ್ಗೆ ಮತ್ತು ಮಧ್ಯಾಹ್ನದ ಎರಡೂ ಅವಧಿಯ ಪರೀಕ್ಷೆಗಳಲ್ಲಿ ಮೊಬೈಲ್‌ನಂತಹ ಎಲೆಕ್ಟ್ರಾನಿಕ್ ಸಾಧನವನ್ನು ಪರೀಕ್ಷಾ ಕೊಠಡಿಯೊಳಗೆ ಕೊಂಡೊಯ್ದು, ಪ್ರಶ್ನೆಪತ್ರಿಕೆಯ ಪೋಟೊ ತೆಗೆದು ಉತ್ತರಗಳನ್ನು ಕಂಡುಕೊಂಡು ಒಎಂಆರ್ ಪ್ರತಿಯಲ್ಲಿ ಉತ್ತರಗಳನ್ನು ಭರ್ತಿ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮೊಬೈಲ್‌ನೊಂದಿಗೆ ಪ್ರವೇಶಿಸಿದ್ದು ಹೇಗೆ..?
ಪರೀಕ್ಷಾ ಕೇಂದ್ರದ ಭದ್ರತಾ ವ್ಯವಸ್ಥೆ ಹಾಗೂ ತಪಾಸಣಾ ಕಾರ್ಯದಲ್ಲಿ ಲೋಪವಾಗಿದೆಯೇ ಅಥವಾ ಈ ಅಕ್ರಮದ ಹಿಂದೆ ಯಾರದ್ದಾದರೂ ಕೈವಾಡ ಇದೆಯೇ ಎಂಬ ಅನುಮಾನಗಳೂ ವ್ಯಕ್ತವಾಗಿವೆ. ಮೊಬೈಲ್ ಪೋನ್ ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸಲು ಸಹಕರಿಸಿದವರು ಯಾರಾದರೂ ಇದ್ದಾರೆಯೇ ಎಂಬುದೂ ಸೇರಿದಂತೆ ಪ್ರಕರಣದ ಎಲ್ಲ ಆಯಾಮಗಳ ಬಗ್ಗೆ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ಚುರುಕುಗೊಳಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.