ಕನ್ನಡಪ್ರಭ ವಾರ್ತೆ ಮೇಲುಕೋಟೆ
ಸ್ವಾಂತ್ರಂತ್ರೋತ್ಸವದ ರಜೆಯೂ ಶ್ರಾವಣ ಶನಿವಾರದೊಟ್ಟಿಗೆ ಬಂದ ಕಾರಣ ಭಕ್ತರ ದಟ್ಟಣೆ ಹೆಚ್ಚಾಗಿತ್ತು. ಬೆಳಗ್ಗೆ 10-30ರ ವೇಳೆಗೆ ಪ್ರಾಥಮಿಕ ಆರೋಗ್ಯಕೇಂದ್ರದ ಮುಂಭಾಗದ ಪಾರ್ಕಿಂಗ್ ಚುಂಚನಗಿರಿ ಸಮುದಾಯ ಭವನದ ಮೈದಾನವೂ ಭಕ್ತರವಾಹನಗಳಿಂದ ತುಂಬಿದ್ದು, ಇದರಿಂದ ರಸ್ತೆಬದಿಯಲ್ಲೇ ಪಾರ್ಕಿಂಗ್ ಮಾಡಲಾಗಿತ್ತು.
ಸರ್ಕಲ್ ಇನ್ಸ್‌ಪೆಕ್ಟರ್ ಆನಂದಗೌಡ ಮಾರ್ಗದರ್ಶನದಲ್ಲಿದೇವಾಲಯದ ಬಳಿಗೆ ವಾಹನಗಳು ಬರುವುದನ್ನು ನಿರ್ಬಂದಿಸಿ ಪ್ರಾಥಮಿಕ ಆರೋಗ್ಯಕೇಂದ್ರದ ಬಳಿಯೇ ಪಾರ್ಕಿಂಗ್ ವ್ಯವಸ್ಥೆ ಮಾಡಿ ವಾಹನದಟ್ಟಣೆ ನಿಯಂತ್ರಿಸಲಾಗಿತ್ತು.ಮನೆದೇವರ ಒಕ್ಕಲಿನ ಭಕ್ತರು ಸಂಸಾರ ಸಮೇತ ಮೇಲುಕೋಟೆಗೆ ಆಗಮಿಸಿ ದೇವರದರ್ಶನ ಪಡೆಯುತ್ತಿದ್ದರು. ಅಮ್ಮನವರ ವರ್ಧಂತಿ ಕಾರ್ಯಕ್ರಮಗಳು ಶುಕ್ರವಾರ 2 ಗಂಟೆಯವರೆಗೆ ನಡೆದರೂ ಕೂಡ ಭಕ್ತರ ದರ್ಶನಕ್ಕೆ ಹೆಚ್ಚಿನ ಶ್ರಮವಹಿಸಿದ ಪಾರುಪತ್ತೇಗಾರ್ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ಮತ್ತು ಪಾರುಪತ್ತೇಗಾರ್ ಎಂ.ಎನ್ ಪಾರ್ಥಸಾರಥಿ ಬೆಳಗಿನ 4.30ಕ್ಕೆ ದೇವಸ್ಥಾನದಲ್ಲಿ ನಿತ್ಯಪೂಜಾಕೈಂಕರ್ಯ ಆರಂಭಿಸಿ 6 ಗಂಟೆಯಿಂದಲೇ ಭಕ್ತರಿಗೆ ದೇವರ ದರ್ಶನ ಲಭಿಸುವಂತೆ ಮಾಡಿದ್ದರು. ಶನಿವಾರ ರಾತ್ರಿಯೂ 12 ಗಂಟೆಗೆ ದೇವಾಲಯದ ಶೇರ್ತಿಸೇವೆ ಕಾರ್ಯಕ್ರಮಗಳು ನೆರವೇರಿದವು.
ಚೆಲುವನಾರಾಯಣನಿಗೆ ತೋಮಾಲೆಯೇ ಇಲ್ಲ:
ಚೆಲುವನಾರಾಯಣಸ್ವಾಮಿ ದೇಗುಲ ಎಗ್ರೇಡ್ ದೇವಾಲಯವಾಗಿದ್ದು, ದೇವಾಲಯದ ಹುಂಡಿ, ಪೋಟೋಷೂಟ್. ವಿವಿಧ ಸೇವೆ ಲಾಡು ಮಾರಾಟ ವಿಶೇಷ ದರ್ಶನಗಳಿಂದ ಕೋಟ್ಯಾಂತರರೂ ಕಾಣಿಕೆ ಸಲ್ಲಿಕೆಯಾಗುತ್ತದೆ. ಆದರೂ ಪ್ರಮುಖ ಉತ್ಸವಗಳು ವಿಶೇಷ ದಿನಗಳ ವ್ಯವಸ್ಥೆಗಳ ಬಗ್ಗೆ ದೇವಾಲಯದ ಆಡಳಿತ ಮಂಡಳಿ ಕಾಳಜಿ ವಹಿಸಿಲ್ಲ. ಮುಂದಿನ ಮೂರೂ ಶ್ರಾವಣ ಶನಿವಾರಗಳಲ್ಲಾದರೂ ಚೆಲುವನಾರಾಯಣಸ್ವಾಮಿ ಮತ್ತು ಯೋಗನರಸಿಂಹಸ್ವಾಮಿಗೆ ಕನಿಷ್ಠ ತೋಮಾಲೆ ಅಲಂಕಾರ ದೇವಾಲಯದ ಬಾಗಿಲುಗಳಿಗೆ ತಳಿರು-ತೋರಣ ಬಾಳೆಕಂಬ ಕಟ್ಟುವ ಕಾರ್ಯಮಾಡಬೇಕು ಎಂದು ನಾಗರೀಕರು ಒತ್ತಾಯಿಸಿದ್ದಾರೆ.