ಗದಗ: ಜಿಲ್ಲೆಯಾದ್ಯಂತ ಸೋಮವಾರ ಸಂಜೆ ಪ್ರಸಕ್ತ ಸಾಲಿನ ಬೇಸಿಗೆಯ ಮೊದಲ ಮಳೆಯಾಯಿತು. ಗದಗ -ಬೆಟಗೇರಿ ಅವಳಿ ನಗರದಲ್ಲಿ 15 ನಿಮಿಷಕ್ಕೂ ಹೆಚ್ಚು ಕಾಲ, ನರಗುಂದ ಪಟ್ಟಣ ಮತ್ತು ತಾಲೂಕಿನ ಗ್ರಾಮೀಣ ಭಾಗದಲ್ಲಿ, ಡಂಬಳ, ಮುಂಡರಗಿ ತಾಲೂಕು ವ್ಯಾಪ್ತಿಯಲ್ಲಿಯೂ ಅಲ್ಪ ಪ್ರಮಾಣದಲ್ಲಿ ಮಳೆಯಾಗಿದೆ.ಕಳೆದ ಸಾಲಿನಂತೆ ಈ ಬಾರಿಯೂ ಹೋಳಿಹುಣ್ಣಿಮೆಯ ಪೂರ್ವದಲ್ಲಿಯೇ ಮಳೆಯಾಗಿದೆ. ಜಿಲ್ಲೆಯ ಹಿಂಗಾರು ಹಂಗಾಮಿನ ಪ್ರಮುಖ ವಾಣಿಜ್ಯ ಬೆಳೆಯಾದ ಕಡಲೆ ಸದ್ಯ ಕಟಾವು ಹಂತದಲ್ಲಿದೆ. ಜೋಳ, ಗೋದಿ ಇನ್ನು ಕಟಾವು ಮಾಡಬೇಕಿದೆ. ಸೂರ್ಯಕಾಂತಿಯೂ ವ್ಯಾಪಕ ಪ್ರಮಾಣದಲ್ಲಿ ಬಿತ್ತನೆಯಾಗಿದ್ದು, ಸೋಮವಾರ ಸಂಜೆ ಸುರಿದ ಬೇಸಿಗೆ ಪೂರ್ವದ ಮಳೆ ಸಹಜವಾಗಿಯೇ ಜಿಲ್ಲೆಯ ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಸದ್ಯ ವಿವಿಧ ಬೆಳೆಗಳು ಕಟಾವಿಗೆ ಬಂದಿದ್ದು, ಮಳೆಯಾಗಿರುವುದು ರೈತರನ್ನು ಚಿಂತೆಗೀಡು ಮಾಡಿದೆ. ತಾಲೂಕಿನ ರೈತರು ಈಗಾಗಲೇ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿ ಸಂಭವಿಸಿ, ಅಪಾರ ಪ್ರಮಾಣದಲ್ಲಿ ವಿವಿಧ ಬೆಳೆಗಳನ್ನು ಹಾನಿ ಮಾಡಿಕೊಂಡು ತೀವ್ರ ತೊಂದರೆಯಲ್ಲಿದ್ದಾರೆ. ಇನ್ನು ಹಿಂಗಾರು ಹಂಗಾಮಿನಲ್ಲಿ ವಾಣಿಜ್ಯ ಬೆಳೆಗಳಾದ ಕಡಲೆ, ಗೋವಿನ ಜೋಳ, ಸೂರ್ಯಕಾಂತಿ, ಜೋಳ, ಗೋದಿ ಇತರ ಬೆಳೆಗಳನ್ನು ಸದ್ಯ ರೈತರು ಕಟಾವು ಮಾಡುತ್ತಿದ್ದಾರೆ. ಈ ಸಮಯದಲ್ಲಿ ಮಳೆಯಾದರೆ ಹಾನಿಯಾಗಲಿದೆ.ಮುಂಡರಗಿ ತಾಲೂಕಿನ ಡಂಬಳ ಭಾಗದಲ್ಲೂ ಮಳೆಯಾಗಿದೆ. ಗದಗ-ಬೆಟಗೇರಿಯಲ್ಲಿ ಮೋಡ ಕವಿದ ವಾತಾವರಣವಿದ್ದು, ಮಳೆಯಾಗುವ ಸಾಧ್ಯತೆ ಇದೆ.
ಡಂಬಳ ಭಾಗದಲ್ಲಿ ಅಕಾಲಿಕ ಮಳೆ:ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಡಂಬಳ ಹೋಬಳಿಯ ಗ್ರಾಮಗಳಲ್ಲಿ ಸೋಮವಾರ ಸುರಿದ ಅಕಾಲಿಕ ಮಳೆಯಿಂದ ಡಂಬಳ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಜೋಳದ ಮೇವು, ಶೇಂಗಾಹೊಟ್ಟು ಸಂರಕ್ಷಣೆ: ಮಳೆಯ ಪರಿಣಾಮವಾಗಿ ಜೋಳದ ಮೇವು ಮತ್ತು ಶೇಂಗಾಹೊಟ್ಟು ಹಾನಿಯಾಗದಂತೆ ರೈತರು ತಾಡಪತ್ರಿಗಳನ್ನು ಬಳಸಿ ಮುಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ. ಕೆಲವು ಕಡೆಗಳಲ್ಲಿ ಮೇವನ್ನು ಎತ್ತಿ ಒಣಗಿಸುವುದು, ಹೊಲಗಳಲ್ಲಿ ನೀರು ನಿಲ್ಲದಂತೆ ವ್ಯವಸ್ಥೆ ಮಾಡುವುದು ಹಾಗೂ ಗಿಡಗಳ ಬೇರು ಭಾಗಕ್ಕೆ ನೀರು ನಿಲ್ಲದಂತೆ ಕಾಲುವೆ ತೆಗೆಯುವ ಕೆಲಸವನ್ನು ರೈತರು ಮಾಡುತ್ತಿದ್ದಾರೆ.
ಮಾವು: ಡಂಬಳ ಹೋಬಳಿಯ ಗ್ರಾಮಗಳಲ್ಲಿ ಸಾಕಷ್ಟು ಮಾವಿನ ಗಿಡಗಳಿದ್ದು, ಮಳೆಯಿಂದ ಹೂವು, ಕಾಯಿ ಉದುರಿ ಬೀಳುವ ಆತಂಕ ಮನೆ ಮಾಡಿದೆ.
ಒಟ್ಟಾರೆ ಅಕಾಲಿಕ ಮಳೆಗೆ ರೈತರನ್ನು ಆತಂಕಕ್ಕೆ ದೂಡಿದೆ.