ಹೊಸಪೇಟೆ: ಫ್ರುಟ್ಸ್ ತಂತ್ರಾಂಶದಲ್ಲಿ ರೈತರ ಸಂಪೂರ್ಣ ಮಾಹಿತಿಯನ್ನು ಡಿ. ೩೧ರ ಒಳಗಾಗಿ ಅಪ್‌ಡೇಟ್ ಮಾಡಲು ಮತ್ತು ಬೆಳೆನಷ್ಟ ಪರಿಹಾರದ ಮೊದಲ ಕಂತನ್ನು ಹೊಸ ವರ್ಷದ ಮೊದಲ ವಾರದಲ್ಲಿ ರೈತರ ಖಾತೆ ಫ್ರುಟ್ಸ್ ಮೂಲಕ ಪಾವತಿಸಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ವಿಜಯನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯಲ್ಲಿ ಈವರೆಗೆ ಶೇ. ೭೭ರಷ್ಟು ಫ್ರುಟ್ಸ್ ಅಪ್‌ಡೇಟ್ ಮಾಡಲಾಗಿದೆ. ಇದರಿಂದ ಬರ ಪರಿಹಾರದ ಹಣ ರೈತರಿಗೆ ಆನ್‌ಲೈನ್ ಮೂಲಕವೇ ತಲುಪಲಿದೆ. ಫ್ರುಟ್ಸ್ ತಂತ್ರಾಂಶದಲ್ಲಿ ರೈತರ ಸಂಪೂರ್ಣ ಜಮೀನಿನ ಒಟ್ಟು ವಿಸ್ತೀರ್ಣ ನಮೂದಿಸಿದರೆ ಮಾತ್ರ ಅವರಿಗೆ ನ್ಯಾಯಯುತ ಪರಿಹಾರ ತಲುಪಲು ಸಾಧ್ಯವಾಗಲಿದೆ.
ರೈತರಿಗೆ ಮೊದಲ ಕಂತಿನ ಹಣ ನೀಡಲು ಸರ್ಕಾರದ ಬಳಿ ಹಣ ಇದೆ. ಆದರೂ ಫ್ರುಟ್ಸ್ ತಂತ್ರಾಂಶದ ನವೀಕರಣಗೊಳ್ಳದೆ ರೈತರಿಗೆ ಹಣ ಬಿಡುಗಡೆ ಸಾಧ್ಯವಿಲ್ಲ ಎಂದು ಗಡುವು ನೀಡಿದ ಅವರು, ಗ್ರಾಮ ಆಡಳಿತ ಅಧಿಕಾರಿಗೆ ಆತನ ಅಧಿಕಾರದ ವ್ಯಾಪ್ತಿಯಲ್ಲಿ ಯಾವ ರೈತನಿಗೆ ಎಲ್ಲಿ, ಎಷ್ಟು ಎಕರೆ ಜಮೀನಿದೆ? ಎಂಬ ಕನಿಷ್ಠ ಮಾಹಿತಿ ಇದ್ದೇ ಇರುತ್ತದೆ. ಅದನ್ನು ಮತ್ತೆ ರೈತನಲ್ಲಿ ಕೇಳಿ ತಂತ್ರಾಂಶದಲ್ಲಿ ನಮೂದಿಸಲು ಸೂಚಿಸಿದರು.ಪಹಣಿ ಜತೆಗೆ ಆಧಾರ್ ಲಿಂಕ್ ಮಾಡಿ: ರಾಜ್ಯದಲ್ಲಿ ಶೇ. ೭೦ರಷ್ಟು ಸಣ್ಣ ರೈತರಿದ್ದಾರೆ. ಆದರೆ, ಕೇಂದ್ರ ಸರ್ಕಾರದ ಹಳೆಯ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿನ ಸಣ್ಣ ರೈತರ ಸಂಖ್ಯೆ ಶೇ. ೪೪ ಮಾತ್ರ. ಇದರಿಂದ ರಾಜ್ಯಕ್ಕೆ ಲಭ್ಯವಾಗುವ ಬರ ಪರಿಹಾರದಲ್ಲೂ ಅನ್ಯಾಯವಾಗುತ್ತಿದೆ. ಹೀಗಾಗಿ ಗ್ರಾಮಲೆಕ್ಕಿಗರು ಮುಂದಿನ ದಿನಗಳಲ್ಲಿ ರೈತರ ಪಹಣಿಗಳನ್ನು ಆಧಾರ್ ನಂಬರ್ ಜತೆಗೆ ಲಿಂಕ್ ಮಾಡಿದರೆ ರಾಜ್ಯದ ಸಣ್ಣ ರೈತರ ಅಂಕಿಸಂಖ್ಯೆ ನಿಖರವಾಗಿ ತಿಳಿಯಲಿದೆ. ಇದನ್ನೇ ಕೇಂದ್ರದ ಮುಂದಿಟ್ಟು ರಾಜ್ಯದ ಹಕ್ಕನ್ನು ಮಂಡಿಸಬಹುದು. ಇದಕ್ಕೆ ಸಹಕಾರಿಯಾಗುವಂತೆ ಶೀಘ್ರದಲ್ಲೇ ಆ್ಯಪ್ ಒಂದನ್ನೂ ಅಭಿವೃದ್ಧಿ ಪಡಿಸಲಾಗುವುದು ಎಂದು ಸಚಿವರು ಸೂಚಿಸಿದರು.ಕುಡಿಯುವ ನೀರು- ಮೇವಿನ ಬಗ್ಗೆ ಎಚ್ಚೆತ್ತುಕೊಳ್ಳಿ: ಜಿಲ್ಲೆಯಲ್ಲಿ ಎಲ್ಲಿಯಾದರೂ ಕುಡಿಯುವ ನೀರಿನ ಸಮಸ್ಯೆ ಉಂಟಾದರೆ, ಖಾಸಗಿ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ಮುಂಜಾಗ್ರತಾ ಕ್ರಮವಾಗಿ ಈಗಲೇ ಜಿಲ್ಲೆಯಲ್ಲಿ ೨೭೨ ಟ್ಯಾಂಕರ್‌ಗಳಿಗೆ ಟೆಂಡರ್ ಮಾಡಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ ಎಂದು ಪ್ರಶಂಸಿದ ಅವರು, ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಟ್ಯಾಂಕರ್ ಒಂದೇ ಪರಿಹಾರವಲ್ಲ. ಬದಲಿಗೆ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆದು ನೀರಿನ ಸಮಸ್ಯೆ ಎಲ್ಲೇ ಕಂಡುಬಂದರೆ ೨೪ ಗಂಟೆಯ ಒಳಗಾಗಿ ನೀರು ಪೂರೈಸುವಂತಿರಬೇಕು. ಟ್ಯಾಂಕರ್ ಬಾಡಿಗೆಯನ್ನು ೧೫ ದಿನಗಳಲ್ಲಿ ಬಿಲ್ ಪಾವತಿಗೆ ಕ್ರಮ ವಹಿಸಬೇಕೆಂದರು.
ಕಂದಾಯ ಗ್ರಾಮಗಳ ಘೋಷಣೆಗೆ ಗಡುವು: ಕಂದಾಯ ಗ್ರಾಮಗಳ ಘೋಷಣೆ ವಿಚಾರದಲ್ಲಿ ವಿಜಯನಗರದಲ್ಲಿ ೧೧೫ ಗ್ರಾಮಗಳು ಅಂತಿಮ ಘೋಷಣೆಗೆ ಬಾಕಿ ಇದ್ದು, ೪೮ ಗ್ರಾಮಗಳಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಅಲ್ಲದೆ, ೨೦೩ ಗ್ರಾಮಗಳನ್ನು ದಾಖಲೆರಹಿತ ಜನವಸತಿ ಪ್ರದೇಶ ಎಂದು ಗುರುತಿಸಲಾಗಿದ್ದು, ಗ್ರಾಮದಿಂದ ೧ ಕಿಮೀ ದೂರವಿರುವ ಮತ್ತು ೫೦ಕ್ಕೂ ಹೆಚ್ಚು ಕುಟುಂಬ ವಸತಿ ಇರುವ ಗ್ರಾಮಗಳನ್ನು ಕಂದಾಯ ಗ್ರಾಮಗಳ ಪಟ್ಟಿಗೆ ಸೇರಿಸಲು ಅವಕಾಶವಿದೆ. ಹೀಗಾಗಿ ಆದ್ಯತೆಯ ಮೇಲೆ ಜನವಸತಿ ಗ್ರಾಮಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಲು ಪಟ್ಟಿ ಸಿದ್ಧಪಡಿಸಿ, ಅನುಮೋದನೆ ಪಡೆದು ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಸೂಚನೆ ನೀಡಿದರು.ಸಭೆಯಲ್ಲಿ ಶಾಸಕರಾದ ಎಚ್.ಆರ್. ಗವಿಯಪ್ಪ, ಲತಾ ಮಲ್ಲಿಕಾರ್ಜುನ್, ಕೃಷ್ಣನಾಯ್ಕ, ಡಾ. ಎನ್.ಟಿ. ಶ್ರೀನಿವಾಸ್, ಕಂದಾಯ ಇಲಾಖೆ ಆಯುಕ್ತರಾದ ಪಿ. ಸುನೀಲ್ ಕುಮಾರ್, ಭೂ ಮಾಪನ ಇಲಾಖೆ ಆಯುಕ್ತರಾದ ಮಂಜುನಾಥ್, ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ., ಅಪರ ಜಿಲ್ಲಾಧಿಕಾರಿ ಅನುರಾಧ ಜಿ., ಉಪವಿಭಾಗಾಧಿಕಾರಿ ಮಹದ್‌ಅಲಿ ಅಕ್ರಮ್ ಷಾಹ ಸೇರಿದಂತೆ ತಹಸೀಲ್ದಾರರು ಉಪಸ್ಥಿತರಿದ್ದರು.ಸಚಿವರ ತೀವ್ರ ಅಸಮಾಧಾನ: ವಿಜಯನಗರದಲ್ಲಿ ಇ- ಆಫೀಸ್ ಬಳಕೆ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆ. ಆದರೆ, ಸರಾಸರಿಯಾಗಿ ಜಿಲ್ಲಾ ಭವನದಲ್ಲಿ ಮಾತ್ರ ಇ- ಆಫೀಸ್ ಬಳಕೆ ಹೆಚ್ಚಾಗಿದೆ. ತಹಸೀಲ್ದಾರ್ ಹಾಗೂ ಎಸಿ ಮಟ್ಟದಲ್ಲಿ ಈಗಲೂ ಇ- ಆಫೀಸ್ ಬಳಕೆ ಗಣನೀಯವಾಗಿ ಏರಿಕೆಯಾಗಿಲ್ಲ ಎಂದು ಸಚಿವರು ಅಸಮಧಾನ ಹೊರಹಾಕಿದರು.ತಹಸೀಲ್ದಾರ್ ಮತ್ತು ಉಪವಿಭಾಗಾಧಿಕಾರಿ ಕಚೇರಿಗೆ ದಿನಕ್ಕೆ ಸರಾಸರಿಯಾಗಿ ೩೦ರಿಂದ ೪೦ ಮಾತ್ರ ಹೊಸ ಕಡತ- ಟಪಾಲುಗಳು ಬರುತ್ತವೆ. ಇವನ್ನು ಇ- ಆಫೀಸ್ ಮೂಲಕ ವಿಲೇವಾರಿ ಮಾಡಲು ಏನು ಸಮಸ್ಯೆ ಎಂದು ಪ್ರಶ್ನಿಸಿದ ಸಚಿವರು, ಇನ್ಮುಂದೆ ಭೌತಿಕ ಕಡತಗಳನ್ನು ಸ್ವೀಕರಿಸುವಂತಿಲ್ಲ ಎಂದರು.